ಶ್ರೀಲಂಕಾ ರಾಜಕೀಯ ಬಿಕ್ಕಟ್ಟು: ಗೋಟಬಯ ರಾಜೀನಾಮೆ; ಏಳು ದಿನಗಳೊಳಗೆ ನೂತನ ಅಧ್ಯಕ್ಷರ ಆಯ್ಕೆ- ಸ್ಪೀಕರ್
ದ್ವೀಪರಾಷ್ಟ್ರದಲ್ಲಿನ ಆರ್ಥಿಕ ದಿವಾಳಿತ, ಅಸಮರ್ಪಕ ನಿರ್ವಹಣೆಗಾಗಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಹಾಗೂ ಒಂದು ವಾರ ನಡೆದ ನಾಟಕೀಯ ಬೆಳವಣಿಗೆ ನಂತರ ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಸಂಸತ್ತಿನ ಸ್ಪೀಕರ್ ಮಹಿಂದಾ ಯಾಪಾ ಅಬೇವರ್ದನ ಶುಕ್ರವಾರ ಅಧಿಕೃತವಾಗಿ ಘೋಷಿಸಿದ್ದಾರೆ
Published: 15th July 2022 10:35 AM | Last Updated: 15th July 2022 01:17 PM | A+A A-

ಗೋಟಬಯ ರಾಜಪಕ್ಸ
ಕೊಲಂಬೋ: ದ್ವೀಪರಾಷ್ಟ್ರದಲ್ಲಿನ ಆರ್ಥಿಕ ದಿವಾಳಿತ, ಅಸಮರ್ಪಕ ನಿರ್ವಹಣೆಗಾಗಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಹಾಗೂ ಒಂದು ವಾರ ನಡೆದ ನಾಟಕೀಯ ಬೆಳವಣಿಗೆ ನಂತರ ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಸಂಸತ್ತಿನ ಸ್ಪೀಕರ್ ಮಹಿಂದಾ ಯಾಪಾ ಅಬೇವರ್ದನ ಶುಕ್ರವಾರ ಅಧಿಕೃತವಾಗಿ ಘೋಷಿಸಿದ್ದಾರೆ.
73 ವರ್ಷದ ಗೋಟಬಯ, ಖಾಸಗಿ ಭೇಟಿಯಲ್ಲಿ ಸಿಂಗಾಪುರಕ್ಕೆ ತೆರಳುತ್ತಿದ್ದಂತೆಯೇ, ಸ್ಪೀಕರ್ ಅವರಿಗೆ ರಾಜೀನಾಮೆ ಪತ್ರವನ್ನು ಇ-ಮೇಲ್ ಮಾಡಿದ್ದಾರೆ. ಶುಕ್ರವಾರ ಬೆಳಗ್ಗೆ, ಅಧ್ಯಕ್ಷ ರಾಜಪಕ್ಸ ಅವರು ರಾಜೀನಾಮೆ ನೀಡಿದ್ದಾರೆ ಎಂದು ಸ್ಪೀಕರ್ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೆ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸ್ಪೀಕರ್ ಸಂಕ್ಷಿಪ್ತ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾ ಬಿಕ್ಕಟ್ಟು: ಸಿಂಗಾಪುರಕ್ಕೆ ತೆರಳಿದ ನಂತರ ಅಧ್ಯಕ್ಷ ಸ್ಥಾನಕ್ಕೆ ಗೋಟಬಯ ರಾಜೀನಾಮೆ ಸಲ್ಲಿಕೆ
7 ದಿನಗಳಲ್ಲಿ ಹೊಸ ನಾಯಕನ ಆಯ್ಕೆ ಪ್ರಕ್ರಿಯೆಯಲ್ಲಿ ಎಲ್ಲಾ ಶಾಸಕರು ಭಾಗವಹಿಸಲು ಶಾಂತಿಯುತ ವಾತಾವರಣಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಶನಿವಾರ ಶ್ರೀಲಂಕಾ ಸಂಸತ್ತು ಸಭೆ ಸೇರಲಿದೆ.
ಗುರುವಾರ ರಾತ್ರಿ ಸಿಂಗಾಪುರದಲ್ಲಿರುವ ಶ್ರೀಲಂಕಾ ಹೈಕಮಿಷನ್ ಮೂಲಕ ಸ್ಪೀಕರ್ ರಾಜಪಕ್ಸೆ ಅವರಿಂದ ರಾಜೀನಾಮೆ ಪತ್ರವನ್ನು ಸ್ಪೀಕರ್ ಸ್ವೀಕರಿಸಿದರು. ಆದಾಗ್ಯೂ, ಪರಿಶೀಲನೆ ಪ್ರಕ್ರಿಯೆ ಮತ್ತು ಕಾನೂನು ಔಪಚಾರಿಕತೆಗಳ ನಂತರ ಅಧಿಕೃತವಾಗಿ ಘೋಷಣೆ ಮಾಡಲು ಸ್ಪೀಕರ್ ಬಯಸಿದ್ದಾಗಿ ಅವರ ಮಾಧ್ಯಮ ಕಾರ್ಯದರ್ಶಿ ಇಂದುನಿಲ್ ಅಬೇವರ್ಧನ ತಿಳಿಸಿದ್ದಾರೆ.
ರಾಜಪಕ್ಸ ಅವರ ಅಧಿಕೃತ ನಿವಾಸಕ್ಕೆ ಶನಿವಾರ ಸಾವಿರಾರು ಪ್ರತಿಭಟನಾಕಾರರು ಮುತ್ತಿಗೆ ಹಾಕಿದ ನಂತರ, ಜುಲೈ 13 ರಂದು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು. ಆದಾಗ್ಯೂ, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದೆ ಮಾಲ್ಡೀವ್ಸ್‌ಗೆ ಪಲಾಯನ ಮಾಡಿದ್ದರು. ಗುರುವಾರ ಮಾಲ್ಡೀವ್ಸ್‌ನಿಂದ ಸಿಂಗಾಪುರಕ್ಕೆ ತೆರಳಿದ್ದರು. ರಾಜಪಕ್ಸ ಅವರ ಖಾಸಗಿ ಭೇಟಿಗಾಗಿ ಸಿಂಗಾಪುರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ ಎಂದು ಸಿಂಗಾಪುರ ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.