ಪ್ರಧಾನಿ ಮೋದಿಯವರನ್ನು ರಿಷಿ ಸುನಕ್ ಭೇಟಿ ಮಾಡಿದ ಕೆಲವೇ ಹೊತ್ತಿನಲ್ಲಿ ಭಾರತೀಯ ಯುವ ವೃತ್ತಿಪರರಿಗೆ 3 ಸಾವಿರ ಯುಕೆ ವೀಸಾ ಘೋಷಿಸಿದ ಬ್ರಿಟನ್

ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್ ಅವರು ಪ್ರತಿ ವರ್ಷ ಭಾರತದ ಯುವ ವೃತ್ತಿಪರರಿಗೆ 3 ಸಾವಿರ ಬ್ರಿಟನ್ ವೀಸಾ ನೀಡಲು ಒಪ್ಪಿಗೆ ನೀಡಿದ್ದಾರೆ. 
ಜಿ20 ಶೃಂಗಸಭೆ ಬದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್ ಮಾತುಕತೆ
ಜಿ20 ಶೃಂಗಸಭೆ ಬದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್ ಮಾತುಕತೆ

ಲಂಡನ್: ಬ್ರಿಟನ್ ನೂತನ ಪ್ರಧಾನಿ ರಿಷಿ ಸುನಕ್ ಅವರು ಪ್ರತಿ ವರ್ಷ ಭಾರತದ ಯುವ ವೃತ್ತಿಪರರಿಗೆ 3 ಸಾವಿರ ಬ್ರಿಟನ್ ವೀಸಾ ನೀಡಲು ಒಪ್ಪಿಗೆ ನೀಡಿದ್ದಾರೆ. 

ಬ್ರಿಟನ್ ಸರ್ಕಾರದ ಈ ವೀಸಾ ಯೋಜನೆಯಿಂದ ಪ್ರಯೋಜನ ಪಡೆಯುವ ಮೊದಲ ರಾಷ್ಟ್ರ ಭಾರತ ಎಂದು ಬ್ರಿಟಿಷ್ ಸರ್ಕಾರ ಹೇಳಿದೆ, ಕಳೆದ ವರ್ಷ ಎರಡೂ ದೇಶಗಳು ಒಪ್ಪಂದ ಮಾಡಿಕೊಂಡ ಇಂಗ್ಲೆಂಡ್- ಭಾರತ ವಲಸೆ ಮತ್ತು ಪ್ರಯಾಣ ಪಾಲುದಾರಿಕೆಯ ಬಲವನ್ನು ಎತ್ತಿ ತೋರಿಸುತ್ತದೆ.

18ರಿಂದ 30 ವರ್ಷದೊಳಗಿನ ಭಾರತೀಯ ಪದವೀಧರ ಯುವಕರಿಗೆ ಎರಡು ವರ್ಷಗಳ ವೃತ್ತಿಪರ ಇಂಗ್ಲೆಂಡ್-ಭಾರತ ವೃತ್ತಿಪರ ಯೋಜನೆ ವೀಸಾವನ್ನು ವರ್ಷಕ್ಕೆ 3 ಸಾವಿರ ಯುವಕರಿಗೆ ನೀಡಲಾಗುವುದು ಎಂದು  ಇಂಗ್ಲೆಂಡ್ ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ. ಈ ವೀಸಾ ಪರಸ್ಪರ ಸಹಮತವಾಗಿದ್ದು ಇಂಗ್ಲೆಂಡಿನಿಂದ ಭಾರತಕ್ಕೆ ಬರುವ ಯುವ ವೃತ್ತಿಪರರಿಗೂ ವರ್ಷಕ್ಕೆ 3 ಸಾವಿರ ವೀಸಾವನ್ನು ಭಾರತ ಒದಗಿಸಲಿದೆ. 

ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ 17 ನೇ ಆವೃತ್ತಿಯ ಬದಿಯಲ್ಲಿ ರಿಷಿ ಸುನಕ್ ಅವರು ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಕೆಲವೇ ಗಂಟೆಗಳಲ್ಲಿ ಇಂಗ್ಲೆಂಡ್ ಸರ್ಕಾರ ಈ ಪ್ರಕಟಣೆ ಹೊರಡಿಸಿದೆ. ರಿಷಿ ಸುನಕ್ ಅವರು ಪ್ರಧಾನಿಯಾದ ಬಳಿಕ ಮೋದಿಯವರ ಜೊತೆ ನಡೆಸಿದ ಮೊದಲ ಮಾತುಕತೆಯಾಗಿದೆ.

ಭಾರತದೊಂದಿಗಿನ ನಮ್ಮ ದ್ವಿಪಕ್ಷೀಯ ಸಂಬಂಧ ಮತ್ತು ಎರಡೂ ದೇಶಗಳ ಆರ್ಥಿಕತೆಗಳನ್ನು ಬಲಪಡಿಸಲು ಇಂಡೋ-ಪೆಸಿಫಿಕ್ ಪ್ರದೇಶದೊಂದಿಗೆ ಬಲವಾದ ಸಂಪರ್ಕಗಳನ್ನು ರೂಪಿಸುವ ಇಂಗ್ಲೆಂಡಿನ ವ್ಯಾಪಕ ಬದ್ಧತೆಗೆ ಈ ಯೋಜನೆಯ ಪ್ರಾರಂಭವು ಮಹತ್ವದ್ದಾಗಿದೆ ಎಂದು ಇಂಗ್ಲೆಂಡ್ ಪ್ರಧಾನ ಮಂತ್ರಿ ಕಚೇರಿಯಿರುವ ಡೌನಿಂಗ್ ಸ್ಟ್ರೀಟ್ ಹೇಳಿಕೆಯಲ್ಲಿ ತಿಳಿಸಿದೆ.

ಇಂಡೋ-ಪೆಸಿಫಿಕ್ ಪ್ರದೇಶದ ಯಾವುದೇ ದೇಶಕ್ಕಿಂತ ಇಂಗ್ಲೆಂಡ್ ಭಾರತದೊಂದಿಗೆ ಹೆಚ್ಚಿನ ಸಂಪರ್ಕವನ್ನು ಹೊಂದಿದೆ.ಇಂಗ್ಲೆಂಡಿನಲ್ಲಿರುವ ಎಲ್ಲಾ ಅಂತರಾಷ್ಟ್ರೀಯ ವಿದ್ಯಾರ್ಥಿಗಳ ಪೈಕಿ ಸುಮಾರು ಕಾಲು ಭಾಗದಷ್ಟು ಜನರು ಭಾರತದಿಂದ ಬಂದವರು. ಇಂಗ್ಲೆಂಡಿನಲ್ಲಿ ಭಾರತೀಯ ಹೂಡಿಕೆಯು ದೇಶಾದ್ಯಂತ 95,000 ಉದ್ಯೋಗಗಳನ್ನು ಬೆಂಬಲಿಸುತ್ತದೆ.

ಬ್ರಿಟನ್, ಪ್ರಸ್ತುತ ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾತುಕತೆ ನಡೆಸುತ್ತಿದೆ - ಒಪ್ಪಿಗೆ ನೀಡಿದರೆ ಅದು ಯುರೋಪಿಯನ್ ರಾಷ್ಟ್ರದೊಂದಿಗೆ ಭಾರತ ಮಾಡಿದ ಮೊದಲ ಒಪ್ಪಂದವಾಗಿದೆ. ವ್ಯಾಪಾರ ಒಪ್ಪಂದವು ಈಗಾಗಲೇ 24 ಬಿಲಿಯನ್ ಪೌಂಡ್‌ಗಳ ಮೌಲ್ಯದ ಯುಕೆ-ಭಾರತ ವ್ಯಾಪಾರ ಸಂಬಂಧವನ್ನು ನಿರ್ಮಿಸುತ್ತದೆ. ಈ ವೀಸಾ ಒಪ್ಪಂದ ಎರಡೂ ದೇಶಗಳ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. 

ನಮ್ಮ ದೇಶಗಳ ನಡುವೆ ಚಲನಶೀಲತೆಯನ್ನು ಹೆಚ್ಚಿಸುವ ಉದ್ದೇಶದಿಂದ ಯುಕೆ ಮತ್ತು ಭಾರತದ ನಡುವೆ 2021 ರ ಮೇ ತಿಂಗಳಲ್ಲಿ ಒಂದು ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com