ಚೀನಾದಲ್ಲಿ ತಾರಕಕ್ಕೇರಿದ ಲಾಕ್ ಡೌನ್ ವಿರೋಧಿ ಪ್ರತಿಭಟನೆ; ಷಿ ಜಿನ್ಪಿಂಗ್ ರಾಜೀನಾಮೆಗೆ ಜನರ ಆಗ್ರಹ

ಚೀನಾದಲ್ಲಿ ಕಠಿಣ ಲಾಕ್ ಡೌನ್ ವಿರೋಧಿ ಪ್ರತಿಭಟನೆಗಳು ತಾರಕಕ್ಕೇರಿದ್ದು, ಇದು ರಾಜಕೀಯದ ಮೇಲೆ ಪರಿಣಾಮ ಬೀರುವ ಲಕ್ಷಣಗಳು ಗೋಚರಿಸುತ್ತಿವೆ. 
ಚೀನಾದಲ್ಲಿ ಲಾಕ್ ಡೌನ್ ವಿರೋಧಿ ಪ್ರತಿಭಟನೆ
ಚೀನಾದಲ್ಲಿ ಲಾಕ್ ಡೌನ್ ವಿರೋಧಿ ಪ್ರತಿಭಟನೆ

ಬೀಜಿಂಗ್: ಚೀನಾದಲ್ಲಿ ಕಠಿಣ ಲಾಕ್ ಡೌನ್ ವಿರೋಧಿ ಪ್ರತಿಭಟನೆಗಳು ತಾರಕಕ್ಕೇರಿದ್ದು, ಇದು ರಾಜಕೀಯದ ಮೇಲೆ ಪರಿಣಾಮ ಬೀರುವ ಲಕ್ಷಣಗಳು ಗೋಚರಿಸುತ್ತಿವೆ. 

ಈ ಬಾರಿ ಅಲ್ಲಿನ ಜನರು ನೇರಾನೇರವಾಗಿ ತಮ್ಮ ಅಧ್ಯಕ್ಷ ಷಿ ಜಿನ್ಪಿಂಗ್ ವಿರುದ್ಧವೇ ಘೋಷಣೆಗಳನ್ನು ಕೂಗಿದ್ದು, ಜಿನ್ಪಿಂಗ್ ರಾಜೀನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದ್ದಾರೆ. ಚೀನಾದ ಕಮ್ಯುನಿಸ್ಟ್ ಪಕ್ಷದ ವಿರುದ್ಧವೂ ಜನತೆ ಘೋಷಣೆಗಳನ್ನು ಕೂಗಿದ್ದು, ಬೀಜಿಂಗ್ ಹಾಗೂ ನಾನ್ಜಿಂಗ್ ನ ವಿವಿಗಳ ಕ್ಯಾಂಪಸ್ ಗಳಿಗೂ ಪ್ರತಿಭಟನೆ ಹರಡಿದೆ.

ಇನ್ನು ಶಾಂಘೈ ನಲ್ಲಿಯೂ ಸಾವಿರಾರು ಮಂದಿ ಪ್ರತಿಭಟನಾಕಾರರು ಪೊಲೀಸರನ್ನೂ ಲೆಕ್ಕಿಸದೇ ಪ್ರತಿಭಟನೆ ನಡೆಸಿದ್ದಾರೆ.  ಪ್ರತಿಭಟನೆಯ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದ್ದು, ಷಿ ಜಿನ್ಪಿಂಗ್ ಕೆಳಗಿಳಿಯಬೇಕು, ಕಮ್ಯುನಿಸ್ಟ್ ಪಕ್ಷ ಅಧಿಕಾರದಿಂದ ಕೆಳಗಿಳಿಯಬೇಕೆಂಬ ಘೋಷಣೆಗಳು ಮೊಳಗುತ್ತಿರುವುದನ್ನು ಬಿಬಿಸಿ ವರದಿ ಮಾಡಿದೆ.
 
ಕೋವಿಡ್-19 ನೀತಿಗಳಿಂದಾಗಿ ಇಲ್ಲಿನ ಜನ ರೋಸಿಹೋಗಿದ್ದು, ಆರ್ಥಿಕತೆಯೂ ಮಂದಗಾಮಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಗಳು ಅತಿ ಹೆಚ್ಚು ಮಹತ್ವ ಪಡೆದುಕೊಂಡಿದೆ ಎಂದು ಬಿಬಿಸಿ ವಿಶ್ಲೇಷಿಸಿದೆ.

ಉರುಂಕಿ ಎಂಬ ಪ್ರದೇಶದಲ್ಲಿ ಲಾಕ್ ಡೌನ್ ನಲ್ಲಿದ್ದ ಮಂದಿ ಇದ್ದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು 10 ಮಂದಿ ಸಾವನ್ನಪ್ಪಿದ್ದರು. ಇದಕ್ಕೂ ಮುನ್ನ ಚೀನಾದ ಅತಿ ದೊಡ್ಡ ಐಫೋನ್ ತಯಾರಕ ಕಾರ್ಖಾನೆಯಲ್ಲಿ ಲಾಕ್ ಡೌನ್ ನೀತಿ ವಿರೋಧಿ ಪ್ರತಿಭಟನೆಗಳು ನಡೆದಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com