ಸುದೀರ್ಘ ಯಾತ್ರೆ ಕೈಬಿಡುವ ವದಂತಿಗಳನ್ನು ತಳ್ಳಿಹಾಕಿದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್

ಬಿಕ್ಕಟ್ಟಿನಲ್ಲಿರುವ ಸರ್ಕಾರದ ಮೇಲೆ ಒತ್ತಡ ಹೇರಿ, ಸಾರ್ವತ್ರಿಕ ಚುನಾವಣೆಗೆ ಒತ್ತಾಯಿಸಲು ಆರಂಭಿಸಿದ್ದ ಸುದೀರ್ಘ ಯಾತ್ರೆಯನ್ನು ಕೈಬಿಡುತ್ತಿದ್ದಾರೆ ಎಂಬ ವದಂತಿಗಳನ್ನು ತಳ್ಳಿಹಾಕಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಅಧಿಕಾರಿಗಳು ಕ್ಷಿಪ್ರ ಚುನಾವಣಾ ದಿನಾಂಕವನ್ನು ಘೋಷಿಸುವವರೆಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಹೇಳಿದ್ದಾರೆ.
ಇಮ್ರಾನ್ ಖಾನ್
ಇಮ್ರಾನ್ ಖಾನ್

ಇಸ್ಲಾಮಾಬಾದ್: ಬಿಕ್ಕಟ್ಟಿನಲ್ಲಿರುವ ಸರ್ಕಾರದ ಮೇಲೆ ಒತ್ತಡ ಹೇರಿ, ಸಾರ್ವತ್ರಿಕ ಚುನಾವಣೆಗೆ ಒತ್ತಾಯಿಸಲು ಆರಂಭಿಸಿದ್ದ ಸುದೀರ್ಘ ಯಾತ್ರೆಯನ್ನು ಕೈಬಿಡುತ್ತಿದ್ದಾರೆ ಎಂಬ ವದಂತಿಗಳನ್ನು ತಳ್ಳಿಹಾಕಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಅಧಿಕಾರಿಗಳು ಕ್ಷಿಪ್ರ ಚುನಾವಣಾ ದಿನಾಂಕವನ್ನು ಘೋಷಿಸುವವರೆಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಹೇಳಿದ್ದಾರೆ.

'ಹಖೀಕಿ ಆಜಾದಿ ಮಾರ್ಚ್' ಎಂದು ಕರೆಯಲ್ಪಡುವ ಸುದೀರ್ಘ ಯಾತ್ರೆಯು ಶುಕ್ರವಾರ (ಅಕ್ಟೋಬರ್ 28) ಪ್ರಾರಂಭವಾಯಿತು. ಶನಿವಾರದ ಎರಡನೇ ದಿನದಂದು, ಯಾತ್ರೆಯು ಕಾಮೋಕೆಯ ತಮ್ಮ ಭರವಸೆಯ ಗಮ್ಯಸ್ಥಾನವನ್ನು ತಲುಪಲು ವಿಫಲವಾಯಿತು. ಅಲ್ಲಿ ಇಮ್ರಾನ್ ಖಾನ್ ಅವರು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಲು ನಿರ್ಧರಿಸಲಾಗಿತ್ತು.

ಯಾತ್ರೆಯು ಕಲಾ ಶಾ ಕಾಕುವನ್ನು ತಲುಪಿದಾಗ ಖಾನ್ ಅವರು ಲಾಹೋರ್‌ಗೆ ಹಿಂದಿರುಗಿದ ನಂತರ ಯಾತ್ರೆಯನ್ನು ತ್ಯಜಿಸಿದ್ದಾರೆ ಎಂಬ ವದಂತಿಗಳು ಹರಡಿದವು. ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಪ್ರಧಾನ ಕಾರ್ಯದರ್ಶಿ ಅಸದ್ ಉಮರ್, ಖಾನ್ ಅವರು ಲಾಹೋರ್‌ಗೆ 'ಅತ್ಯಂತ ಮಹತ್ವದ ಸಭೆ'ಯಲ್ಲಿ ಭಾಗವಹಿಸಲು ತೆರಳಿದ್ದಾರೆ ಎಂದು ಹೇಳಿದರು.

ಪಿಟಿಐ ಮತ್ತು ಸರ್ಕಾರದ ನಡುವೆ ಲಾಹೋರ್‌ನಲ್ಲಿ ಉನ್ನತ ಮಟ್ಟದ ಸಭೆ ನಡೆಯುತ್ತಿದೆ ಎಂಬ ವದಂತಿಗಳನ್ನು ತಳ್ಳಿಹಾಕಲು ಟ್ವೀಟ್ ಮಾಡಿದ್ದ ಖಾನ್, ಲಾಹೋರ್‌ಗೆ ನನ್ನ ಭೇಟಿಯ ಬಗ್ಗೆ ವದಂತಿಗಳನ್ನು ಹರಡಿದವರಿಗೆ ಹೇಳುವುದೆಂದರೆ, ನಾವು ಹಿಂತಿರುಗಲು ಕಾರಣವೆಂದರೆ ಲಾಹೋರ್ ಹತ್ತಿರದಲ್ಲಿದೆ ಮತ್ತು ರಾತ್ರಿಯಲ್ಲಿ ಯಾತ್ರೆಯನ್ನು ಮುಂದುವರಿಸದಿರಲು ಈಗಾಗಲೇ ನಿರ್ಧರಿಸಿದ್ದೆವು ಎಂದಿದ್ದಾರೆ.

ಕಳೆದ ಆರು ತಿಂಗಳಿನಿಂದ ನನಗೆ ಇದ್ದ ಒಂದೇ ಒಂದು ಬೇಡಿಕೆಯೆಂದರೆ ಮುಂಚಿತವಾಗಿ ನ್ಯಾಯಯುತ ಮತ್ತು ಮುಕ್ತ ಚುನಾವಣೆಯ ದಿನಾಂಕ ಘೋಷಿಸುವುದು. ಒಂದು ವೇಳೆ ಮಾತುಕತೆ ನಡೆದರೂ ಕೂಡ ನನಗಿರುವುದು ಅದೊಂದೇ ಬೇಡಿಕೆ ಎಂದು ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್ ಶನಿವಾರ ಟ್ವೀಟ್ ಮಾಡಿದ್ದಾರೆ.

ಪಿಟಿಐ ಪಕ್ಷದ ನಾಯಕ ಫವಾದ್ ಚೌಧರಿ ಬೋಲ್ ನ್ಯೂಸ್ ಚಾನೆಲ್‌ ಜೊತೆಗೆ ಮಾತನಾಡಿ, ಖಾನ್ ಅವರ ಕಂಟೇನರ್‌ನ ಪಕ್ಕದಲ್ಲಿ ಸಾವಿರಾರು ಜನರು ನಡೆಯುತ್ತಿದ್ದರಿಂದ ಪ್ರತಿಭಟನಾಕಾರರ ಚಲನೆ ನಿಧಾನವಾಗಿತ್ತು. ಅಧ್ಯಕ್ಷ ಆರಿಫ್ ಅಲ್ವಿ ಅವರಿಗೆ ಈ ಕಾರ್ಯವನ್ನು ವಹಿಸಿರುವುದರಿಂದ ಯಾವುದೇ ಪಿಟಿಐ ನಾಯಕರು ಸರ್ಕಾರದೊಂದಿಗೆ ಯಾವುದೇ ಮಾತುಕತೆ ನಡೆಸುತ್ತಿಲ್ಲ. ಡಾ. ಅಲ್ವಿ ಕಂಡುಕೊಂಡಿರುವ ಒಮ್ಮತ ಅಥವಾ ಪರಿಹಾರವನ್ನು ನಾವು ಸ್ವೀಕರಿಸುತ್ತೇವೆ ಎಂದು ಅವರು ಹೇಳಿದರು.

ಶಕ್ತಿಯುತ ಆಡಳಿತದೊಂದಿಗೆ ಮಾತುಕತೆ ನಡೆಸಲಾಗುವುದು ಮತ್ತು ಸರ್ಕಾರದೊಂದಿಗೆ ಅಲ್ಲ. ಮಾತುಕತೆಯ ಕೇಂದ್ರಬಿಂದು ಚುನಾವಣೆಯಾಗಿದೆ. ಸಮ್ಮಿಶ್ರ ಸರ್ಕಾರವು ಕ್ಷಿಪ್ರ ಚುನಾವಣೆಯ ದಿನಾಂಕವನ್ನು ಒಪ್ಪಿಕೊಂಡಾಗ ಮಾತ್ರ ಮಾತುಕತೆ ನಡೆಯುತ್ತದೆ ಎಂದು ಚೌಧರಿ ಹೇಳಿದರು.

ಸುದೀರ್ಘ ಯಾತ್ರೆಯ ಮೂರನೇ ದಿನವಾದ ಭಾನುವಾರದಂದು ಯಾತ್ರೆಯನ್ನು ಪ್ರಾರಂಭಿಸಲು ಸಜ್ಜಾಗುತ್ತಿದ್ದಂತೆ, ಮಾಜಿ ವಾಣಿಜ್ಯ ಸಚಿವ ಹಮ್ಮದ್ ಅಜರ್ ಅವರು ದಿನದ ಅಂತ್ಯದ ವೇಳೆಗೆ ಗುಜ್ರಾನ್‌ವಾಲಾವನ್ನು ತಲುಪುವ ಯೋಜನೆ ಇದೆ ಎಂದು ಹೇಳಿದರು.

ನವೆಂಬರ್ 4 ರಂದು ಯಾತ್ರೆಯು ಇಸ್ಲಾಮಾಬಾದ್ ತಲುಪಲಿದೆ ಎಂದು ಖಾನ್ ಈಗಾಗಲೇ ಘೋಷಿಸಿದ್ದಾರೆ, ಇದಕ್ಕೆ ಸರ್ಕಾರ ಇದುವರೆಗೆ ಅನುಮತಿ ನೀಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com