ಬ್ರಿಟಿಷ್ ಪ್ರಧಾನಿ ಚುನಾವಣೆಯಲ್ಲಿ ಸೋಲು: ಭಾರತೀಯ ಮೂಲದ ರಿಷಿ ಸುನಕ್ ಮೊದಲ ಪ್ರತಿಕ್ರಿಯೆ!

ಬ್ರಿಟನ್ ಪ್ರಧಾನಿ ಹುದ್ದೆ ಸ್ಪರ್ಧೆಯಲ್ಲಿ ಸೋತ ರಿಷಿ ಸುನಕ್, ಬೋರಿಸ್ ಜಾನ್ಸನ್ ಉತ್ತರಾಧಿಕಾರಿಯಾಗಿ ನಾಯಕತ್ವದ ಸ್ಪರ್ಧೆಯಲ್ಲಿ ಗೆದ್ದ ಬ್ರಿಟಿಷ್ ಪ್ರಧಾನಿ ಲಿಜ್ ಟ್ರಸ್ ಅವರ ಹಿಂದೆ ಒಂದಾಗುವಂತೆ ರಿಷಿ ಕನ್ಸರ್ವೇಟಿವ್ ಪಕ್ಷದ ಸದಸ್ಯರನ್ನು ಕೋರಿದ್ದಾರೆ
ರಿಷಿ ಸುನಕ್
ರಿಷಿ ಸುನಕ್

ಲಂಡನ್:  ಬ್ರಿಟನ್ ಪ್ರಧಾನಿ ಹುದ್ದೆ ಸ್ಪರ್ಧೆಯಲ್ಲಿ ಸೋತ ರಿಷಿ ಸುನಕ್, ಬೋರಿಸ್ ಜಾನ್ಸನ್ ಉತ್ತರಾಧಿಕಾರಿಯಾಗಿ ನಾಯಕತ್ವದ ಸ್ಪರ್ಧೆಯಲ್ಲಿ ಗೆದ್ದ ಬ್ರಿಟಿಷ್ ಪ್ರಧಾನಿ ಲಿಜ್ ಟ್ರಸ್ ಅವರ ಹಿಂದೆ ಒಂದಾಗುವಂತೆ ರಿಷಿ ಕನ್ಸರ್ವೇಟಿವ್ ಪಕ್ಷದ ಸದಸ್ಯರನ್ನು ಕೋರಿದ್ದಾರೆ.

ಫಲಿತಾಂಶದ ನಂತರ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ಸುನಕ್‌, ಹೊಸ ಪ್ರಧಾನಿ ಲಿಜ್ ಟ್ರಸ್‌ ಹಿಂದೆ ನಾವೆಲ್ಲ ಒಟ್ಟಾಗಿ ಸಾಗೋಣವೆಂದು ಹೇಳಿದ್ದಾರೆ. ‘ಈ ಅಭಿಯಾನದಲ್ಲಿ ನನಗೆ ಮತ ನೀಡಿದ ಎಲ್ಲರಿಗೂ ಧನ್ಯವಾದಗಳು. ಕನ್ಸರ್ವೇಟಿವ್ ಪಕ್ಷದ ಬೆಂಬಲಿಗರು ಒಂದೇ ಕುಟುಂಬಕ್ಕೆ ಸೇರಿದವರೆಂದು ನಾನು ಈ ಹಿಂದೆಯೇ ಹೇಳಿದ್ದೇನೆ. ನಾವು ಈಗ ಹೊಸ ಪ್ರಧಾನಿ ಲಿಜ್ ಟ್ರಸ್ ಅವರ ಹಿಂದೆ ಒಂದಾಗಿ ಸಾಗಬೇಕಿದೆ. ಕಷ್ಟದ ಸಮಯದಲ್ಲಿ ಅವರು ದೇಶವನ್ನು ಮುನ್ನಡೆಸುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

ಒಟ್ಟು 1,72,437 ಅರ್ಹ ಮತದಾರರಿಂದ 654 ತಿರಸ್ಕೃತ ಮತಗಳೊಂದಿಗೆ 82.6 ಶೇಕಡಾ ಹೆಚ್ಚಿನ ಮತದಾನದೊಂದಿಗೆ ಚುನಾವಣೆಯಲ್ಲಿ ಸುನಕ್ ಅವರು 60,399 ಮತಗಳನ್ನು ಪಡೆದರೆ, ಟ್ರಸ್ 81,326 ಮತಗಳನ್ನು ಪಡೆದರು.

47 ವರ್ಷದ ಟ್ರಸ್ ಅವರು ಮಾರ್ಗರೇಟ್ ಥ್ಯಾಚರ್ ಮತ್ತು ಥೆರೆಸಾ ಮೇ ನಂತರ ಬ್ರಿಟನ್‌ನ ಮೂರನೇ ಮಹಿಳಾ ಪ್ರಧಾನಿಯಾಗಿದ್ದಾರೆ. ಭಾನುವಾರ ಕೂಡ ರಿಷಿ ಸುನಕ್ ಅವರು ಕನ್ಸರ್ವೇಟಿವ್ ಪಕ್ಷದ ನಾಯಕತ್ವದ ಸ್ಪರ್ಧೆಯಲ್ಲಿ ಸೋತರೆ, ಮುಂದಿನ ಸರ್ಕಾರವನ್ನು ಬೆಂಬಲಿಸುವುದು ಅವರ ಕೆಲಸ ಎಂದು ಹೇಳಿದ್ದರು.

ಪರಾಭವಗೊಂಡ ರಿಷಿ ಸುನಕ್ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿಯವರ ಪುತ್ರಿ ಅಕ್ಷತಾ ಮೂರ್ತಿಯ ಪತಿಯಾಗಿದ್ದು, ಬ್ರಿಟನ್‍ನಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದರು. ಇವರನ್ನು ಬೋರಿಸ್ ಜಾನ್ಸನ್ 2020ರಲ್ಲಿ ಮೊದಲ ಬಾರಿಗೆ ಪೂರ್ಣ ಕ್ಯಾಬೆನೆಟ್ ಸ್ಥಾನವನ್ನು ನೀಡಿದ್ದರು. ಹಣಕಾಸು ಸಚಿವರಾಗಿ ಬೋರಿಸ್ ಜಾನ್ಸನ್ ಸರ್ಕಾರದಲ್ಲಿ ರಿಷಿ ಸುನಾಕ್ ಕಾರ್ಯನಿರ್ವಹಿಸಿದ್ದರು.

ಪ್ರಧಾನಿ ಬೋರಿಸ್ ಜಾನ್ಸನ್ ಜುಲೈ 7 ರಂದು ಕನ್ಸರ್ವೇಟಿವ್ ಪಕ್ಷದ ನಾಯಕತ್ವವನ್ನು ತ್ಯಜಿಸುವುದಾಗಿ ಘೋಷಿಸಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದೀಗ ನೂತನ ಪ್ರಧಾನಿಯಾಗಿ ಲಿಜ್ ಟ್ರಸ್ ಆಯ್ಕೆಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com