
ಮಹ್ಸಾ ಅಮಿನಿ
ಹ್ರಾನ್(ಇರಾನ್): ಹಿಜಾಬ್ ಧರಿಸಿಲ್ಲವೆಂದು ನೈತಿಕ ಪೊಲೀಸ್ ಘಟಕದಿಂದ ಬಂಧನಕ್ಕೊಳಗಾಗಿದ್ದ 22 ವರ್ಷದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.
ತೆಹ್ರಾನ್‌ನಲ್ಲಿ ಬಂಧಿಸಲ್ಪಟ್ಟ ನಂತರ ಕೋಮಾಕ್ಕೆ ಜಾರಿದ್ದ ಇರಾನ್ ನ ಮಹ್ಸಾ ಅಮಿನಿ ಸಾವನ್ನಪ್ಪಿದ್ದಾಳೆ. ಆಕೆಯ ಅನುಮಾನಾಸ್ಪದ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕೆಂದು ಕುಟುಂಬಸ್ಥರು ಸೇರಿದಂತೆ ಪ್ರಗತಿಪರರು ಒತ್ತಾಯಿಸಿದ್ದಾರೆ.
ಕುಟುಂಬದೊಂದಿಗೆ ಇರಾನ್ ರಾಜಧಾನಿಗೆ ಭೇಟಿ ನೀಡಿದ್ದ ಅಮಿನಿಯನ್ನು ಇಸ್ಲಾಮಿಕ್ ಗಣರಾಜ್ಯದ ಮಹಿಳೆಯರಿಗೆ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಅನ್ನು ಜಾರಿಗೊಳಿಸುವ ನೈತಿಕ ಪೊಲೀಸ್ ಘಟಕವು ಮಂಗಳವಾರ ಬಂಧಿಸಿತು. ಇನ್ನು ಇರಾನ್ ನಲ್ಲಿ ಸಾರ್ವಜನಿಕವಾಗಿ ಹಿಜಾಬ್ ಧರಿಸುವುದು ಕಡ್ಡಾಯವಾಗಿದೆ.
ಬಂಧನಕ್ಕೊಳಗಾಗಿದ್ದ ಯುವತಿ ದುರದೃಷ್ಟವಶಾತ್ ಮೃತಪಟ್ಟಿದ್ದು ಆಕೆಯ ದೇಹವನ್ನು ವೈದ್ಯಕೀಯ ಪರೀಕ್ಷಕರ ಕಛೇರಿಗೆ ವರ್ಗಾಯಿಸಲಾಯಿತು ಎಂದು ಇರಾನಿನ ರಾಜ್ಯ ದೂರದರ್ಶನ ವರದಿ ಮಾಡಿದೆ. ಪರ್ಷಿಯನ್ ಭಾಷೆಯ ಮಾಧ್ಯಮಗಳು, ಇರಾನ್ ವೈರ್ ವೆಬ್‌ಸೈಟ್ ಮತ್ತು ಶಾರ್ಗ್ ಪತ್ರಿಕೆ ಸೇರಿದಂತೆ ಆಕೆಯ ಕುಟುಂಬವನ್ನು ಉಲ್ಲೇಖಿಸಿ ಈ ಹಿಂದೆ ಆರೋಗ್ಯವಾಗಿದ್ದ ಅಮಿನಿ ಅವರನ್ನು ಬಂಧಿಸಿದ ಕೆಲವೇ ಗಂಟೆಗಳ ನಂತರ ಕೋಮಾಗೆ ಜಾರಿದ್ದು ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆಕೆ ಮೃತಪಟ್ಟಿದ್ದಾಳೆ.
ಇದನ್ನೂ ಓದಿ: ಮಹಿಳೆಯರು ಹಿಜಾಬ್ ಧರಿಸುವುದನ್ನು ವ್ಯಂಗ್ಯವಾಗಿ ನೋಡಬೇಡಿ, ಗೌರವದಿಂದ ಕಾಣಿ: ಸುಪ್ರೀಂ ಕೋರ್ಟ್
ಆಕೆ ಪೊಲೀಸ್ ಠಾಣೆಗೆ ಆಗಮಿಸುವ ಮತ್ತು ಆಸ್ಪತ್ರೆಗೆ ತೆರಳುವ ನಡುವೆ ಏನಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇರಾನ್‌ನಲ್ಲಿನ ಉಲ್ಲಂಘನೆಗಳನ್ನು ಮೇಲ್ವಿಚಾರಣೆ ಮಾಡುವ 1500ಟವ್‌ಸಿರ್ ಚಾನೆಲ್ ಆಕೆಯ ತಲೆಗೆ ಪೆಟ್ಟು ಬಿದ್ದಿದೆ ಎಂದು ಹೇಳಿದೆ. 22 ವರ್ಷದ ಯುವತಿ ಮಹ್ಸಾ ಅಮಿನಿಯ ಕಸ್ಟಡಿಯಲ್ಲಿ ಅನುಮಾನಾಸ್ಪದ ಸಾವಿಗೆ ಕಾರಣವಾದ ಸಂದರ್ಭಗಳು, ಕಸ್ಟಡಿಯಲ್ಲಿ ಚಿತ್ರಹಿಂಸೆ ಮತ್ತು ಇತರ ಕೆಟ್ಟ ವರ್ತನೆಯ ಆರೋಪಗಳನ್ನು ಒಳಗೊಂಡಿದ್ದು ಕ್ರಿಮಿನಲ್ ತನಿಖೆಯಾಗಬೇಕು ಎಂದು ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಹೇಳಿದೆ.