ಬ್ರಿಟನ್ ರಾಣಿ 2ನೇ ಎಲಿಜಬೆತ್ ಅಂತ್ಯಕ್ರಿಯೆ: ಜಾಗತಿಕ ನಾಯಕರಿಂದ ಎರಡು ನಿಮಿಷಗಳ ಮೌನಾಚರಣೆ

ಇತ್ತೀಚಿಗೆ ನಿಧನರಾದ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರ ಅಂತ್ಯಕ್ರಿಯೆ  ವೆಸ್ಟ್ ಮಿನಿಸ್ಟರ್ ಅಬೆಯಲ್ಲಿ ಕೆಲ ಹೊತ್ತಿನಲ್ಲೇ ನಡೆಯಲಿದೆ.
ರಾಣಿಯ ಪಾರ್ಥಿವ ಶರೀರವಿದ್ದ ಶವಪೆಟ್ಟಿಗೆ
ರಾಣಿಯ ಪಾರ್ಥಿವ ಶರೀರವಿದ್ದ ಶವಪೆಟ್ಟಿಗೆ

ಲಂಡನ್: ಇತ್ತೀಚಿಗೆ ನಿಧನರಾದ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರ ಅಂತ್ಯಕ್ರಿಯೆ ಪ್ರಕ್ರಿಯೆ ವೆಸ್ಟ್ ಮಿನಿಸ್ಟರ್ ಅಬೆಯಲ್ಲಿ ನಡೆಯುತ್ತಿದೆ.

ಇದಕ್ಕೂ ಮುನ್ನ ರಾಣಿಯ ಗೌರವಾರ್ಥ ಬ್ರಿಟನ್ ದೇಶಾದ್ಯಂತ ಎರಡು ನಿಮಿಷ ಮೌನಾಚರಣೆ ನಡೆಸಲಾಯಿತು. ಅಮೆರಿಕ ಅಧ್ಯಕ್ಷ ಜೋ ಬೈಡನ್, ಫ್ರೆಂಚ್ ಅಧ್ಯಕ್ಷ ಇಮ್ಯಾನುವೆಲ್ ಮೆಕ್ರಾನ್, ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಜಾಗತಿಕ ನಾಯಕರು ಮೌನಾಚರಣೆಯಲ್ಲಿ ಪಾಲ್ಗೊಂಡರು. ಬಳಿಕ ರಾಷ್ಟ್ರಗೀತೆ ಯೊಂದಿಗೆ ರಾಣಿಗೆ ಅಂತಿಮ ವಿದಾಯ ಹೇಳಲಾಯಿತು.

ಸುಧೀರ್ಘ ವರ್ಷಗಳ ಕಾಲ ಬ್ರಿಟನ್ ಆಳ್ವಿಕೆ ನಡೆಸಿದ್ದ ಬ್ರಿಟನ್ ರಾಣಿಯ ಪಾರ್ಥಿವ ಶರೀರವಿದ್ದ  ಶವ ಪೆಟ್ಟಿಗೆಯನ್ನು ರಾಜ ಮನೆತನದ ಸದಸ್ಯರು, ವಿಶ್ವದ ಉನ್ನತ ನಾಯಕರ ಉಪಸ್ಥಿತಿಯಲ್ಲಿ ವೆಸ್ಟ್ ಮಿನಿಸ್ಟರ್ ಅಬೆಗೆ ತರಲಾಯಿತು. ವಿಸ್ಟನ್ ಚರ್ಚಿಲ್ 1965 ರಲ್ಲಿ ನಿಧನರಾದ ನಂತರ ಬ್ರಿಟನ್ ನಲ್ಲಿ ನಡೆದ ರಾಜಮನೆತದವರ ಮೊದಲ ಅಂತ್ಯಕ್ರಿಯೆ ಇದಾಗಿದೆ.  

ಕಿಂಗ್ ಜಾರ್ಜ್ VI ಸ್ಮಾರಕ ಚಾಪೆಲ್ ನಲ್ಲಿ ಆಕೆಯ ತಂದೆ ಕಿಂಗ್ ಜಾರ್ಜ್, ತಾಯಿ ರಾಣಿ ಎಲಿಜಬೆತ್  ಮತ್ತು ಆಕೆಯ ಹಿರಿಯ ಸಹೋದರಿ ಸಮಾಧಿ ಬಳಿ 2ನೇ ಎಲಿಜಬೆತ್ ರಾಣಿಯ ಪಾರ್ಥಿವ ಶರೀರವನ್ನು ಸಮಾಧಿ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಸ್ಕಾಟ್ ಲ್ಯಾಂಡ್ ನ ಬಾಲ್ಮೋರಲ್ ಕಾಸ್ಟಲ್ ನಲ್ಲಿ ಸೆಪ್ಟೆಂಬರ್ 8 ರಂದು ರಾಣಿ ಎಲಿಜಬೆತ್ 11 ನಿಧನರಾಗಿದ್ದರು. ರಾಣಿ 2ನೇ ಎಲಿಜಬೆತ್ ಅವರ ಪಾರ್ಥವ ಶರೀರ ಇಡಲಾಗಿದ್ದ ಶವಪೆಟ್ಟಿಗೆಯನ್ನು ರಾಜಮನೆತನದ ಸ್ಯಾಂಡ್ರಿಂಗ್ ಹ್ಯಾಮ್ ಎಸ್ಟೇಟ್ ನಲ್ಲಿ ಬೆಳೆದಿದ್ದ ಓಕ್ ಮರ ಬಳಸಿ ನಿರ್ಮಿಸಿದ್ದು, ಅಂಚುಗಳಲ್ಲಿ ಲೆಡ್ ನ ಹಾಳೆ ಅಳವಡಿಸಲಾಗಿತ್ತು. 

ರಾಷ್ಟ್ರಪತಿ ಮುರ್ಮು ಭಾರತ ಸರ್ಕಾರದ ಪರವಾಗಿ ಬ್ರಿಟನ್ ರಾಣಿಯ ಕುಟುಂಬಸ್ಥರಿಗೆ ಸಂತಾಪ ಸೂಚಿಸಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ರಾಣಿಯ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ರಾಣಿಯು ಏಪ್ರಿಲ್ 21, 1926 ರಂದು ಲಂಡನ್‌ನ ಮೇಫೇರ್‌ನಲ್ಲಿರುವ 17 ಬ್ರೂಟನ್ ಸ್ಟ್ರೀಟ್‌ನಲ್ಲಿ ಕಿಂಗ್ ಜಾರ್ಜ್ VI ಮತ್ತು ರಾಣಿ ಎಲಿಜಬೆತ್ ಅವರ ಮೊದಲ ಮಗಳಾಗಿ ಜನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com