
ಅಂಟೋನಿ ಬ್ಲಿಂಕೆನ್ , ಬೊಟ್ಟೊ ಜರ್ದಾರಿ
ವಾಷಿಂಗ್ಟನ್: ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್ ಅಂಟೋನಿ ಬ್ಲಿಂಕೆನ್ ಸೋಮವಾರ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಬೊಟ್ಟೊ ಜರ್ದಾರಿ ಅವರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಬ್ಲಿಂಕೆನ್, ಪಾಕಿಸ್ತಾನದಲ್ಲಿನ ಪ್ರವಾಹ ಪರಿಹಾರ ಮತ್ತು ಮಾನವೀಯ ನೆರವಾಗಿ ಈ ವರ್ಷ 56.5 ಮಿಲಿಯನ್ ಡಾಲರ್ ನೆರವು ನೀಡಲಾಗಿದೆ ಎಂದು ತಿಳಿಸಿದರು. ಪ್ರವಾಹದಿಂದ ಪಾಕಿಸ್ತಾನದಲ್ಲಿ ಉಂಟಾಗಿರುವ ಜೀವಹಾನಿ ಮತ್ತು ವಿನಾಶಕ್ಕೆ ಅವರು ತೀವ್ರ ದು:ಖ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಆಹಾರ ಭದ್ರತೆಗಾಗಿ ಹೆಚ್ಚುವರಿಯಾಗಿ 10 ಮಿಲಿಯನ್ ಅಮೆರಿಕನ್ ಡಾಲರ್ ನೆರವನ್ನು ನೀಡುವುದಾಗಿ ಬ್ಲಿಂಕೆನ್ ಪ್ರಕಟಿಸಿದ್ದಾರೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ ಮೆಂಟ್ ಹೇಳಿಕೆಯಲ್ಲಿ ತಿಳಿಸಿದೆ. ಆಹಾರ ಭದ್ರತೆ, ವಲಯ ಸುರಕ್ಷತೆ, ಅಪ್ಘಾನಿಸ್ತಾನ ವಿಚಾರ ಕುರಿತಂತೆ ಅಮೆರಿಕ ಕಾರ್ಯದರ್ಶಿ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವರು ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಯನ್ನು ಶ್ಲಾಘಿಸಿದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್, ನವಾಜ್ ಷರೀಫ್ ವಿರುದ್ಧ ವಾಗ್ದಾಳಿ
ಪಾಕಿಸ್ತಾನಕ್ಕೆ 56.5 ಮಿಲಿಯನ್ ಅಮೆರಿಕನ್ ಡಾಲರ್ ನೆರವು ಸೇರಿದಂತೆ ಪ್ರವಾಹ ಪರಿಹಾರ ಕಾರ್ಯ ಮುಂದುವರೆಯಲಿದೆ ಎಂದು ಬ್ಲಿಂಕೆನ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಜೂನ್ ಮಧ್ಯಭಾಗದಿಂದ ಸುರಿಯುತ್ತಿರುವ ಭಾರೀ ಮಳೆ ಮತ್ತು ಪ್ರವಾಹದ ಹೊಡೆತಕ್ಕೆ ಸಿಲುಕಿ ಪಾಕಿಸ್ತಾನ ಜರ್ಝರಿತಗೊಂಡಿದೆ.