ಕತಾರ್ ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾಪಡೆಯ ಯೋಧರಿಗೆ ಬಿಗ್ ರಿಲೀಫ್: ಜೈಲುಶಿಕ್ಷೆಗೆ ಮಾರ್ಪಾಡು!

ಅಕ್ಟೋಬರ್‌ ತಿಂಗಳಿನಲ್ಲಿ ಕತಾರ್ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾಗಿದ್ದ 8 ಮಾಜಿ ನೌಕಾಪಡೆಯ ಸಿಬಂದಿಗಳಿಗೆ ಬಿಗ್ ರಿಲೀಫ್ ಎಂಬಂತೆ ಶಿಕ್ಷೆ ಕಡಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಅಕ್ಟೋಬರ್‌ ತಿಂಗಳಿನಲ್ಲಿ ಕತಾರ್ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾಗಿದ್ದ 8 ಮಾಜಿ ನೌಕಾಪಡೆಯ ಸಿಬಂದಿಗಳಿಗೆ ಬಿಗ್ ರಿಲೀಫ್ ಎಂಬಂತೆ ಶಿಕ್ಷೆ ಕಡಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

COP28 ಶೃಂಗಸಭೆಯ ಬದಿಯಲ್ಲಿ ಕತಾರ್‌ನ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ವಾರಗಳ ನಂತರ ಈ ಬೆಳವಣಿಗೆ ನಡೆದಿದೆ. ಇನ್ನೂ ಬಹಿರಂಗವಾಗದ ಆರೋಪಗಳಿಗಾಗಿ ಮರಣದಂಡನೆಗೊಳಗಾಗಿರುವರು ಕಡಿತದ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಭಾರತ ಸರ್ಕಾರ ತಿಳಿಸಿದೆ. 

”ಮುಂದಿನ ಕ್ರಮಗಳನ್ನು ನಿರ್ಧರಿಸಲು ಕಾನೂನು ತಂಡ ಮತ್ತು ಕುಟುಂಬ ಸದಸ್ಯರೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ. ನಾವು ಮೊದಲಿನಿಂದಲೂ ಅವರ ಬೆಂಬಲಕ್ಕೆ ನಿಂತಿದ್ದೇವೆ ಮತ್ತು ನಾವು ಎಲ್ಲಾ ದೂತಾವಾಸ ಮತ್ತು ಕಾನೂನು ನೆರವು ನೀಡುವುದನ್ನು ಮುಂದುವರಿಸುತ್ತೇವೆ. ನಾವು ಕತಾರ್ ಅಧಿಕಾರಿಗಳೊಂದಿಗೆ ವಿಷಯ ವಿನಿಮಯ ಮಾಡಿಕೊಳ್ಳುವುದನ್ನು ಮುಂದುವರಿಸುತ್ತೇವೆ.” ಎಂದು ಎಂದು ಭಾರತ ಸರ್ಕಾರ ತಿಳಿಸಿದೆ.

ಜೀವಾವಧಿ ಶಿಕ್ಷೆ
ಇನ್ನು ಈ ಪ್ರಕರಣದ ಎಲ್ಲಾ ಎಂಟು ನೌಕಾಪಡೆ ಯೋಧರಿಗೆ ವಿಭಿನ್ನ ಅವಧಿಯ ಜೈಲು ಶಿಕ್ಷೆಯನ್ನು ನೀಡಲಾಗಿದೆ. ಕಡಿಮೆಯೆಂದರೆ ನಾವಿಕ ರಾಗೇಶ್‌ಗೆ ಮೂರು ವರ್ಷ ಜೈಲು ಮತ್ತು ಇತರೆ ಏಳು ಮಂದಿಗೆ 10 ವರ್ಷಗಳಿಂದ 25 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ" ಎಂದು ಮೂಲವೊಂದು ತಿಳಿಸಿದೆ.  ಅಂತೆಯೇ ಗಲ್ಲುಶಿಕ್ಷೆಯನ್ನು ಜೈಲು ಶಿಕ್ಷೆಯಾಗಿ ಮಾರ್ಪಡಿಸಿದ ಕುರಿತೂ ಮಾಹಿತಿ ನೀಡಿರುವ ಕೋರ್ಟ್, ಪ್ರಕರಣದ ಸೂಕ್ಷ್ಮ ಸ್ವರೂಪದ ಕಾರಣ ಅದನ್ನು ಇನ್ನೂ ಸಾರ್ವಜನಿಕಗೊಳಿಸಲಾಗಿಲ್ಲ. ಎಲ್ಲಾ ನೌಕಾಪಡೆ ಯೋಧರ ಪತ್ನಿಯರು ಕೆಲವು ಸಮಯದಿಂದ ದೋಹಾದಲ್ಲಿದ್ದರು, ಗುರುವಾರದ ವಿಚಾರಣೆಗಾಗಿ ಕಾಯುತ್ತಿದ್ದರು. ಅನುಭವಿಗಳ ಆರೋಗ್ಯದ ವೈಫಲ್ಯವು ಪತ್ನಿಯರ ಚಿಂತೆಗೆ ಕಾರಣವಾಗಿತ್ತು. ಏಕೆಂದರೆ ಅವರಲ್ಲಿ ಕೆಲವರು ಹಸಿವನ್ನು ಕಳೆದುಕೊಂಡಿದ್ದಾರೆ ಮತ್ತು ಇತರರು ಹಲವು ಅನಾರೋಗ್ಯ ಸಮಸ್ಯೆಗಳಿಗೆ ತುತ್ತಾಗಿದ್ದಾರೆ ಎನ್ನಲಾಗಿದೆ.

ಕ್ಯಾಸೇಶನ್ ನ್ಯಾಯಾಲಯ ವಿಚಾರಣೆ ಸ್ಥಳಾಂತರ
ಇನ್ನು ಪ್ರಕರಣದ ಮುಂದಿನ ವಿಚಾರಣೆ ಕ್ಯಾಸೇಶನ್ ನ್ಯಾಯಾಲಯಕ್ಕೆ ಸ್ಥಳಾಂತರಗೊಂಡಿದೆ, ಮುಂದಿನ ವಿಚಾರಣೆಯನ್ನು ಕ್ಯಾಸೇಶನ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುವುದು. ಇದು ಕೆಲವು ನ್ಯಾಯಾಂಗ ವ್ಯವಸ್ಥೆಗಳಲ್ಲಿ ಮೇಲ್ಮನವಿಯ ಅತ್ಯುನ್ನತ ನ್ಯಾಯಾಲಯವಾಗಿದ್ದು, ಕ್ಯಾಸೇಶನ್ ನ್ಯಾಯಾಲಯಗಳು ಪ್ರಕರಣದ ಸತ್ಯಗಳನ್ನು ಮರು-ಪರಿಶೀಲಿಸುವುದಿಲ್ಲ, ಅವು ಸಂಬಂಧಿತ ಕಾನೂನನ್ನು ಮಾತ್ರ ಅರ್ಥೈಸುತ್ತವೆ. ಕ್ಯಾಸೇಶನ್ ಎಂಬ ಪದವು ಲ್ಯಾಟಿನ್ ಪದವಾದ ಕ್ಯಾಸ್ಸೇರ್‌ನಿಂದ ಬಂದಿದೆ, ಇದರರ್ಥ 'ಹಿಮ್ಮುಖ ಅಥವಾ ಉರುಳಿಸುವುದು'.

ಮೇಲ್ಮನವಿ ನ್ಯಾಯಾಲಯದಲ್ಲಿ ಗುರುವಾರ ನಾಲ್ಕನೇ ವಿಚಾರಣೆಯಾಗಿತ್ತು. ಹಿಂದಿನ ವಿಚಾರಣೆಗಳು ನವೆಂಬರ್ 23, ನವೆಂಬರ್ 30 ಮತ್ತು ಡಿಸೆಂಬರ್ 7 ರಂದು ನಡೆದವು. ವಿಚಾರಣೆಗಾಗಿ ಕತಾರ್‌ನಲ್ಲಿರುವ ಭಾರತೀಯ ರಾಯಭಾರಿ ವಿಪುಲ್ ಮತ್ತು ನೌಕಾ ಯೋಧರ ಕುಟುಂಬಗಳು ಗುರುವಾರ ಮೇಲ್ಮನವಿ ವಿಚಾರಣೆ ವೇಳೆ ನ್ಯಾಯಾಲಯದಲ್ಲಿಹಾಜರಾಗಿದ್ದರು.

ಬಂಧಿತರು ಯಾರು?
ಕಮಾಂಡರ್‌ಗಳಾದ ಪೂರ್ಣೇಂದು ತಿವಾರಿ, ಸುಗುಣಾಕರ್ ಪಾಕಲಾ, ಅಮಿತ್ ನಾಗ್‌ಪಾಲ್, ಸಂಜೀವ್ ಗುಪ್ತಾ ಮತ್ತು ಕ್ಯಾಪ್ಟನ್‌ಗಳಾದ ನವತೇಜ್ ಸಿಂಗ್ ಗಿಲ್, ಬೀರೇಂದ್ರ ಕುಮಾರ್ ವರ್ಮಾ ಮತ್ತು ಸೌರಭ್ ವಸಿಷ್ಟ್, ನಾವಿಕ ರಾಗೇಶ್ ಗೋಪಕುಮಾರ್ ಬಂಧಿತ ಎಂಟು ಮಂದಿ. ಇವರ ವಿರುದ್ಧದ ಆರೋಪಗಳನ್ನು ಇಂದಿಗೂ ಬಹಿರಂಗಗೊಳಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com