ಗ್ರೀಸ್ ಬೋಟ್ ದುರಂತ: 300 ಪಾಕಿಸ್ತಾನೀಯರ ಸಾವು, 10 ಮಾನವ ಕಳ್ಳಸಾಗಣೆದಾರರ ಬಂಧನ
ಮುಜಫರಾಬಾದ್: ಗ್ರೀಸ್ ನಲ್ಲಿ ಸಂಭವಿಸಿದ ಭೀಕರ ಬೋಟ್ ದುರಂತದಲ್ಲಿ 300 ಪಾಕಿಸ್ತಾನೀಯರು ಸಾವನ್ನಪ್ಪಿದ ಬೆನ್ನಲ್ಲೇ ಈ ಕುರಿತು ಎಚ್ಚೆತ್ತುಕೊಂಡಿರುವ ಪಾಕಿಸ್ತಾನ ಸರ್ಕಾರ 10 ಮಾನವ ಕಳ್ಳಸಾಗಣೆದಾರರ ಬಂಧಿಸಿದೆ.
ಪಾಕಿಸ್ತಾನದಿಂದ ಪ್ರತೀ ವರ್ಷ ಸಾವಿರಾರು ಪಾಕಿಸ್ತಾನಿ ಯುವಕರು ಕೆಲಸ ಹುಡುಕಿಕೊಂಡು ಯುರೋಪ್‌ಗೆ ಅಕ್ರಮವಾಗಿ ಪ್ರವೇಶಿಸಲು ಬೋಟ್ ಗಳ ಮೂಲಕ ಮಾನವ ಕಳ್ಳಸಾಗಣೆದಾರರ ನೆರವಿನಿಂದ ಅಪಾಯಕಾರಿ ಪ್ರಯಾಣವನ್ನು ಪ್ರಾರಂಭಿಸುತ್ತಾರೆ. ಇಂತಹುದೇ ಒಂದು ಪ್ರಯಾಣ ಗ್ರೀಸ್ ನಲ್ಲಿ ದುರಂತ ಅಂತ್ಯಕಂಡಿದ್ದು, ಕೆಲಸ ಅರಸಿ ಮಾನವಕಳ್ಳಸಾಗಣೆ ಮೂಲಕ ಗ್ರೀಸ್ ತೆರಳುತ್ತಿದ್ದ ಬೋಟ್ ಸಮುದ್ರದಲ್ಲಿ ಮುಳುಗಿದೆ.
ಈ ದುರಂತದಲ್ಲಿ ಸುಮಾರು 300 ಪಾಕಿಸ್ತಾನಿಗಳು ಸಾವನ್ನಪ್ಪಿದ್ದಾರೆ. ಗ್ರೀಸ್‌ನ ಪೆಲೊಪೊನೀಸ್ ಪರ್ಯಾಯ ದ್ವೀಪದ ಬಳಿ ತುಕ್ಕು ಹಿಡಿದ ಟ್ರಾಲರ್ ಮುಳುಗಿದ್ದು ಇದೇ ಟ್ರಾಲರ್ ನಲ್ಲಿದ್ದ ಸುಮಾರು 300ಕ್ಕೂ ಅಧಿಕ ಪಾಕಿಸ್ತಾನಿ ಪ್ರಜೆಗಳು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.
ಈ ಭೀಕರ ದುರಂತದ ಬೆನ್ನಲ್ಲೇ ಈ ಕುರಿತು ಕಠಿಣ ಕ್ರಮಕ್ಕೆ ಮುಂದಾಗಿದ್ದ ಪಾಕಿಸ್ತಾನ ಸರ್ಕಾರ ಅಕ್ರಮ ಮಾನವ ಕಳ್ಳಸಾಗಣೆದಾರರ ವಿರುದ್ಧ ಕಾರ್ಯಾಚರಣೆ ಆರಂಭಿಸಿತ್ತು. ಅದರಂತೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಒಂಬತ್ತು ಜನ ಅಕ್ರಮಕಳ್ಳಸಾಗಣೆದಾರರನ್ನು ಬಂಧಿಸಿದೆ. ಮತ್ತೋರ್ವನನ್ನು ಗುಜರಾತ್ ಗಡಿಯಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ದುರಂತದ ಸಂದರ್ಭದಲ್ಲಿ 400 ರಿಂದ 750 ಜನರು ದೋಣಿಯಲ್ಲಿದ್ದರು ಎಂದು ನಂಬಲಾಗಿದೆ ಎಂದು ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಷನ್ ಮತ್ತು ಯುಎನ್ ರೆಫ್ಯೂಜಿ ಏಜೆನ್ಸಿಯ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ