ಇಸ್ರೇಲ್ ದಾಳಿ: ಗಾಜಾ ಪಟ್ಟಿ ಇಬ್ಭಾಗ, ದಕ್ಷಿಣ ಭಾಗದ ಮೇಲೂ ದಾಳಿಗೆ IDF ಸಿದ್ಧತೆ
ಟೆಲ್ ಅವೀವ್: ಹಮಾಸ್ ಉಗ್ರರ ವಿರುಗ್ಧ ಇಸ್ರೇಲ್ ಆರಂಭಿಸಿರುವ ಸೇನಾದಾಳಿ ನಿರ್ಣಾಯಕ ಹಂತ ತಲುಪಿದ್ದು, ಇಡೀ ಗಾಜಾ ಪಟ್ಟಿ ಇದೀಗ ಇಬ್ಭಾಗವಾಗಿದ್ದು, ಉತ್ತರ ಗಾಜಾ ಪಟ್ಟಿಯಲ್ಲಿನ ಇಸ್ರೇಲ್ ಸೇನಾ ದಾಳಿಗಳು ಅದನ್ನು ಅಕ್ಷರಶಃ ಕಟ್ಟಡ ಅವಶೇಷಗಳ ಅಸ್ತಿಪಂಜರವಾಗಿಸಿದೆ.
ಇಸ್ರೇಲಿ ಪಡೆಗಳು ಇಡೀ ಗಾಜಾ ನಗರವನ್ನು ಸುತ್ತುವರೆದಿದ್ದು, ಉತ್ತರ ಗಾಜಾ ಸಂಪೂರ್ಣ ಇಸ್ರೇಲ್ ಸೇನಾಪಡೆಗಳ ತೆಕ್ಕೆಗೆ ಜಾರಿದ್ದು, ಇದೀಗ ದಕ್ಷಿಣ ಗಾಜಾ ಭಾಗದ ಮೇಲೂ ದಾಳಿ ನಡೆಸಲು ಇಸ್ರೇಲ್ ಸೇನಾ ಪಡೆ (Israel Diffence Force-IDF) ಸಿದ್ದತೆ ನಡೆಸಿದೆ ಎಂದು ಅಲ್ ಜಜೀರಾ ಸುದ್ದಿಸಂಸ್ಥೆ ವರದಿ ಮಾಡಿದೆ.
ಇಸ್ರೇಲಿ ಪಡೆಗಳು ಗಾಜಾ ಕರಾವಳಿ ಪ್ರದೇಶವನ್ನು ತಲುಪಿದ್ದು, ಯಾವುದೇ ಕ್ಷಣದಲ್ಲೂ ಅಲ್ಲಿ ಕಾರ್ಯಾಚರಣೆ ಅರಂಭಿಸಬಹುದು. ದಕ್ಷಿಣ ಗಾಜಾದ ಸುರಂಗ ಮತ್ತು ಅದರ ಮೇಲಿನ ಹಮಾಸ್ ಉಗ್ರ ಸಂಘಟನೆಯ ಮೂಲಸೌಕರ್ಯಗಳೇ ಇಸ್ರೇಲಿ ಪಡೆಗಳ ಗುರಿಯಾಗಿವೆ. ಉತ್ತರ ಕಮಾಂಡ್‌ನಲ್ಲಿ ನಡೆದ ಸಭೆಯಲ್ಲಿ ಇಸ್ರೇಲ್ ನ ಜನರಲ್ ಸ್ಟಾಫ್ ಮುಖ್ಯಸ್ಥ ಎಲ್‌ಟಿಜಿ ಹರ್ಜಿ ಹಲೇವಿ, "ಯಾವುದೇ ಕ್ಷಣದಲ್ಲಿ" ಉತ್ತರ ಗಾಜಾದಲ್ಲಿ ಐಡಿಎಫ್ ದಾಳಿ ಮಾಡಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.
"ನಾವು ಗಡಿಗಳಲ್ಲಿ ಗಣನೀಯವಾಗಿ ಉತ್ತಮ ಭದ್ರತಾ ಪರಿಸ್ಥಿತಿಯನ್ನು ಮರುಸ್ಥಾಪಿಸುವ ಸ್ಪಷ್ಟ ಗುರಿಯನ್ನು ಹೊಂದಿದ್ದೇವೆ. ಗಾಜಾ ಪಟ್ಟಿಯಲ್ಲಿ ಮಾತ್ರವಲ್ಲ... ಉತ್ತರದಲ್ಲಿ ಯಾವುದೇ ಕ್ಷಣದಲ್ಲಿ ದಾಳಿ ಮಾಡಲು ನಾವು ಸಿದ್ಧರಿದ್ದೇವೆ" ಎಂದು ಹೇಳಿದ್ದಾರೆ ಎಂದು ಅಲ್ ಜಜೀರಾ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಇನ್ನು ಇತ್ತ ಹಮಾಸ್ ಭಯೋತ್ಪಾದಕ ಗುಂಪು ತನ್ನಲ್ಲಿರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೆ ಇಸ್ರೇಲ್ ಕದನ ವಿರಾಮದ ಮಾತುಕತೆ ಮಾಡುವುದೇ ಇಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಈ ಹಿಂದೆ ಘೋಷಿಸಿದ್ದರು. "ಇದನ್ನು ('ಕದನ ವಿರಾಮ' ಪದ) ಶಬ್ದಕೋಶದಿಂದ ತೆಗೆದುಹಾಕಿ. ನಾವು ಅವರನ್ನು (ಹಮಾಸ್ ಉಗ್ರರು) ಸೋಲಿಸುವವರೆಗೂ ನಾವು ಮುಂದುವರಿಯುತ್ತೇವೆ. ನಮಗೆ ಬೇರೆ ಮಾರ್ಗವಿಲ್ಲ ಎಂದು ನೇತನ್ಯಾಹು ಹೇಳಿದ್ದಾರೆ ಎಂದು ಅವರ ಕಚೇರಿಯ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ