ಲ್ಯಾಮಿನೇಷನ್ ಪೇಪರ್ ಕೊರತೆ, ಪಾಸ್​ಪೋರ್ಟ್​ ತಯಾರಿಸಲೂ ಪರದಾಡುತ್ತಿದೆ ಪಾಕಿಸ್ತಾನ!

ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಈಗ ಕನಿಷ್ಠ ತನ್ನದೇ ದೇಶದ ನಾಗರಿಕರಿಗೆ ಪಾಸ್​ಪೋರ್ಟ್​ ತಯಾರಿಸಲು ಕೂಡ ಹಣವಿಲ್ಲದೇ ಪರದಾಡುತ್ತಿದೆ.
ಪಾಸ್​ಪೋರ್ಟ್​ ತಯಾರಿಸಲೂ ಪರದಾಡುತ್ತಿದೆ ಪಾಕಿಸ್ತಾನ
ಪಾಸ್​ಪೋರ್ಟ್​ ತಯಾರಿಸಲೂ ಪರದಾಡುತ್ತಿದೆ ಪಾಕಿಸ್ತಾನ

ಲಾಹೋರ್: ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಈಗ ಕನಿಷ್ಠ ತನ್ನದೇ ದೇಶದ ನಾಗರಿಕರಿಗೆ ಪಾಸ್​ಪೋರ್ಟ್​ ತಯಾರಿಸಲು ಕೂಡ ಹಣವಿಲ್ಲದೇ ಪರದಾಡುತ್ತಿದೆ.

ಈ ಬಗ್ಗೆ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದ್ದು, ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಮುಂದುವರೆದಿರುವಂತೆಯೇ ಅದರ ಅಡ್ಡ ಪರಿಣಾಮಗಳೂ ಕೂಡ ಹೆಚ್ಚಾಗುತ್ತಿದ್ದು, ಇದೀಗ ಈ ಪಟ್ಟಿಗೆ ಪಾಸ್ ಪೋರ್ಟ್ ತಯಾರಿಕೆಗಾಗಿ ಬಳಸುವ ಲ್ಯಾಮಿನೇಷನ್ ಪೇಪರ್ ಕೊರತೆ ಕೂಡ ಸೇರ್ಪಡೆಯಾಗಿದೆ. ದೇಶದಲ್ಲಿ ಲ್ಯಾಮಿನೇಷನ್ ಪೇಪರ್ ಕೊರತೆಯಿಂದಾಗಿ ಪಾಕಿಸ್ತಾನಿ ನಾಗರಿಕರು ತಮ್ಮ ಪಾಸ್‌ಪೋರ್ಟ್‌ಗಳನ್ನು ಪಡೆಯಲು ತೊಂದರೆ ಎದುರಿಸುತ್ತಿದ್ದಾರೆ. ಪಾಸ್ ಪೋರ್ಟ್ ಗೆ ಈಗಾಗಲೇ ಅರ್ಜಿ ಸಲ್ಲಿಸಿ ಎಲ್ಲ ಹಂತಗಳನ್ನು ಪೂರ್ಣಗೊಳಿಸಿದವರೂ ಕೂಡ ಪಾಸ್ ಪೋರ್ಟ್ ಗಾಗಿ ತಿಂಗಳು ಗಟ್ಟಲೆ ಕಾಯುವಂತಾಗಿದೆ. 

ಕಾರಣ ಏನು?
ಲ್ಯಾಮಿನೇಷನ್ ಪೇಪರ್ ಪಾಸ್‌ಪೋರ್ಟ್‌ಗಳಲ್ಲಿ ಅತ್ಯಗತ್ಯ ಅಂಶವಾಗಿದೆ ಮತ್ತು ಇದನ್ನು ಸಾಮಾನ್ಯವಾಗಿ ಪಾಕಿಸ್ತಾನ ಸರ್ಕಾರ ಫ್ರಾನ್ಸ್‌ನಿಂದ ಆಮದು ಮಾಡಿಕೊಳ್ಳಲಾಗುತ್ತದೆ ಎಂದು ಪಾಕಿಸ್ತಾನದ ಡೈರೆಕ್ಟರೇಟ್ ಜನರಲ್ ಆಫ್ ಇಮಿಗ್ರೇಷನ್ ಮತ್ತು ಪಾಸ್‌ಪೋರ್ಟ್‌ಗಳನ್ನು (ಡಿಜಿಐ & ಪಿ) ಉಲ್ಲೇಖಿಸಿ ವರದಿ ಹೇಳಿದೆ. ಈ ಲ್ಯಾಮಿನೇಷನ್ ಕಾಗದದ ಕೊರತೆಯು ರಾಷ್ಟ್ರವ್ಯಾಪಿ ಪಾಸ್‌ಪೋರ್ಟ್‌ಗಳ ಕೊರತೆಗೆ ಕಾರಣವಾಗಿದೆ.

ವಿದೇಶದಲ್ಲಿ ಓದುವ ವಿದ್ಯಾರ್ಥಿಗಳು, ವಿದೇಶಗಳಲ್ಲಿ ಕೆಲಸ ಗಿಟ್ಟಿಸಿಕೊಂಡು ವಿದೇಶಕ್ಕೆ ತೆರಳು ತುದಿಗಾಲಲ್ಲಿ ನಿಂತಿರುವ ಉದ್ಯೋಗಸ್ಥರಿಗೂ ಇದರ ಪರಿಣಾಮ ಎದುರಿಸುವಂತಾಗಿದೆ. ಯುಕೆ ಅಥವಾ ಇಟಲಿಯಂತಹ ಸ್ಥಳಗಳಲ್ಲಿನ ವಿಶ್ವವಿದ್ಯಾಲಯಗಳಿಗೆ ದಾಖಲಾದ ಹಲವಾರು ವಿದ್ಯಾರ್ಥಿಗಳು ತಮ್ಮ ಪಾಸ್‌ಪೋರ್ಟ್‌ಗಳನ್ನು ಸಮಯಕ್ಕೆ ಸರಿಯಾಗಿ ಪಡೆಯದ ಕಾರಣ ಅಲ್ಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ಇಲಾಖೆಯ ಅಸಮರ್ಥತೆಗೆ ಬೆಲೆ ತೆರಬೇಕಾದ ಅನ್ಯಾಯವಾಗಿದೆ ಎಂದು ಅವರು ಕಿಡಿಕಾರಿದ್ದಾರೆ ಎಂದು ವರದಿಯಲ್ಲಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್‌ ಉಲ್ಲೇಖಿಸಿದೆ.

ತ್ವರಿತ ಕ್ರಮ ಎಂದ ಪಾಕ್ ಸರ್ಕಾರ
ಇನ್ನು ಪಾಕಿಸ್ತಾನ ಸರ್ಕಾರವು ಬಿಕ್ಕಟ್ಟನ್ನು ಪರಿಹರಿಸಲು ಕೆಲಸ ಮಾಡುತ್ತಿದೆ ಮತ್ತು ಶೀಘ್ರದಲ್ಲೇ ಪರಿಸ್ಥಿತಿಯನ್ನು ಹತೋಟಿಗೆ ತರಲಾಗುವುದು ಎಂದು ಪಾಕ್ ಸರ್ಕಾರ ಹೇಳಿದೆ. ಆದರೆ, ತಮ್ಮ ಪ್ರಯಾಣದ ದಾಖಲೆಗಳನ್ನು ಪಡೆಯಲು ಸಾಧ್ಯವಾಗದ ಕಾರಣ ಜನರು ಸಂದೇಹದಲ್ಲಿದ್ದಾರೆ ಎಂದು ಆಂತರಿಕ ಸಚಿವಾಲಯದ ಮಾಧ್ಯಮದ ಮಹಾನಿರ್ದೇಶಕ ಖಾದಿರ್ ಯಾರ್ ತಿವಾನಾ ಹೇಳಿದ್ದಾರೆ.

ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗಳು ಪ್ರತಿದಿನ ಕಡಿಮೆ ಪಾಸ್‌ಪೋರ್ಟ್‌ಗಳನ್ನು ವಿತರಣೆ ಮಾಡುತ್ತಿದ್ದು, ದಿನಕ್ಕೆ 3,000 ರಿಂದ 4,000 ಪಾಸ್‌ಪೋರ್ಟ್‌ಗಳನ್ನು ಮಾತ್ರ ನೀಡಲಾಗುತ್ತಿದೆ. ಮೊದಲು 12ರಿಂದ 13 ಸಾವಿರ ಪಾಸ್​ಪೋರ್ಟ್​ಗಳನ್ನು ನೀಡಲಾಗುತ್ತಿತ್ತು. 2013 ರಲ್ಲಿ, ಪ್ರಿಂಟರ್‌ಗಳಿಗೆ ಪಾವತಿಸಬೇಕಾದ DGI&P ಮತ್ತು ಲ್ಯಾಮಿನೇಷನ್ ಪೇಪರ್‌ಗಳ ಕೊರತೆಯಿಂದಾಗಿ ಪಾಕಿಸ್ತಾನದಲ್ಲಿ ಪಾಸ್‌ಪೋರ್ಟ್ ಮುದ್ರಣ ಸ್ಥಗಿತಗೊಂಡಿತ್ತು ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com