'ಪ್ರತಿ ಬೆದರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ': ಖಲಿಸ್ತಾನಿ ಉಗ್ರನ ವೀಡಿಯೊ ಕುರಿತು ಕೆನಡಾ ಪ್ರತಿಕ್ರಿಯೆ

ಏರ್ ಇಂಡಿಯಾ ವಿಮಾನವನ್ನು ಹಾರಾಟ ನಡೆಸದಂತೆ ಸ್ಫೋಟಿಸುತ್ತೇವೆ ಎಂಬ ಖಲಿಸ್ತಾನಿ ಉಗ್ರನ ಬೆದರಿಕೆ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೆನಡಾ ಸರ್ಕಾರ, ಪ್ರತಿ ಬೆದರಿಕೆಯನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದೆ.
ಜಸ್ಟಿನ್ ಟ್ರುಡೊ
ಜಸ್ಟಿನ್ ಟ್ರುಡೊ

ಒಟ್ಟಾವಾ: ಏರ್ ಇಂಡಿಯಾ ವಿಮಾನವನ್ನು ಹಾರಾಟ ನಡೆಸದಂತೆ ಸ್ಫೋಟಿಸುತ್ತೇವೆ ಎಂಬ ಖಲಿಸ್ತಾನಿ ಉಗ್ರನ ಬೆದರಿಕೆ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೆನಡಾ ಸರ್ಕಾರ, ಪ್ರತಿ ಬೆದರಿಕೆಯನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದೆ.

ನವೆಂಬರ್ 19 ರಿಂದ ಏರ್ ಇಂಡಿಯಾದಲ್ಲಿ ಹಾರಾಟ ನಡೆಸದಂತೆ ಖಲಿಸ್ತಾನಿ ಉಗ್ರ ಹಾಗೂ ಸಿಖ್ಸ್ ಫಾರ್ ಜಸ್ಟಿಸ್‌ನ ಸಾಮಾನ್ಯ ಸಲಹೆಗಾರ ಗುರುಪತ್‌ವಂತ್ ಸಿಂಗ್ ಪನ್ನುನ್ ಹೇಳಿಕೆ ವಿಚಾರವಾಗಿ ಭಾರತ ಆಕ್ಷೇಪ ಸಲ್ಲಿಸಿದ ಬೆನ್ನಲ್ಲೇ ಈ ಬಗ್ಗೆ ಕೆನಡಾ ಸರ್ಕಾರ ಪ್ರತಿಕ್ರಿಯಿಸಿದ್ದು, ಪ್ರತಿ ಬೆದರಿಕೆಯನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದೆ. ಈ ಕುರಿತು ಒಟ್ಟಾವಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಪಾಬ್ಲೊ ರೊಡ್ರಿಗಸ್, 'ಆನ್‌ಲೈನ್‌ನಲ್ಲಿ ಪ್ರಸಾರವಾಗುವ ವೀಡಿಯೊಗಳಲ್ಲಿನ ಎಚ್ಚರಿಕೆಯನ್ನು ಕೆನಡಾದ ಫೆಡರಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಾವು ಪ್ರತಿಯೊಂದು ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ, ವಿಶೇಷವಾಗಿ ವಿಮಾನಯಾನ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ರಾಯಲ್ ಕೆನಡಿಯನ್ ಮೌಂಟೆಡ್ ಪೋಲಿಸ್ ಇಲಾಖೆ "ತನಿಖೆ ನಡೆಸುತ್ತಿದೆ" ಎಂದು ಅವರು ಹೇಳಿದರು.

ಕಳೆದ ವಾರ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೋದಲ್ಲಿ, ಖಲಿಸ್ತಾನಿ ಉಗ್ರ ಸಿಖ್ಸ್ ಫಾರ್ ಜಸ್ಟಿಸ್‌ನ ಸಾಮಾನ್ಯ ಸಲಹೆಗಾರ ಗುರುಪತ್‌ವಂತ್ ಸಿಂಗ್ ಪನ್ನುನ್ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣ ಮಾಡದಂತೆ ಸಿಖ್ಖರಿಗೆ ಸಲಹೆ ನೀಡಿದ್ದ. ಅಲ್ಲದೆ ಪರೋಕ್ಷವಾಗಿ ವಿಮಾನದಲ್ಲಿ ಪ್ರಯಾಣಿಸುವವರಿಗೆ ನವೆಂಬರ್ 19ರ ನಂತರ ಅವರ ಪ್ರಾಣಕ್ಕೆ ಯಾವುದೇ ಗ್ಯಾರಂಟಿ ಇಲ್ಲ ಎಂದು ಹೇಳುವ ಮೂಲಕ ವಿಮಾನ ಸ್ಫೋಟಿಸುವ ಬೆದರಿಕೆ ಹಾಕಿದ್ದ. ನವೆಂಬರ್ 19 ರ ನಂತರ ಏರ್ ಇಂಡಿಯಾದಲ್ಲಿ ಪ್ರಯಾಣಿಸಬೇಡಿ, ನಿಮ್ಮ ಜೀವಕ್ಕೆ ಅಪಾಯವಿದೆ ಎಂದು ಎಚ್ಚರಿಸಿದ್ದ. ಅಂತೆಯೇ ಇದು ಬೆದರಿಕೆಯಲ್ಲ, ಬದಲಿಗೆ ಭಾರತೀಯ ವ್ಯವಹಾರಗಳನ್ನು ಬಹಿಷ್ಕರಿಸುವ ಕರೆ ಎಂದು ಕೆನಡಾದ ಮಾಧ್ಯಮಗಳಿಗೆ ತಿಳಿಸಿದ್ದ. 

ಇನ್ನು ಕೆನಡಾವು ಸುಮಾರು 770,000 ಸಿಖ್ಖರಿಗೆ ನೆಲೆಯಾಗಿದ್ದು, ಅವರು ಒಟ್ಟಾರೆ ಜನಸಂಖ್ಯೆಯ ಸುಮಾರು ಎರಡು ಪ್ರತಿಶತವನ್ನು ಹೊಂದಿದ್ದಾರೆ. ಪ್ರಧಾನಿ ಜಸ್ಟಿನ್ ಟ್ರುಡೊ ಸೆಪ್ಟೆಂಬರ್‌ನಲ್ಲಿ ವ್ಯಾಂಕೋವರ್ ಬಳಿ ಕೆನಡಾದ ಸಿಖ್ ನಾಯಕ ನಿರ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ ಪಾತ್ರವಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಅಲ್ಲದೆ ಹತ್ಯೆಗೆ ಸಂಬಂಧವನ್ನು ಹೊಂದಿದ್ದಾರೆಂದು ನಂಬಲಾದ ಭಾರತೀಯ ರಾಜತಾಂತ್ರಿಕರನ್ನು ಕೆನಡಾದಿಂದ ಉಚ್ಛಾಟಿಸಿದರು.

ಕೆನಡಾ ಪ್ರಧಾನಿ ಟ್ರುಡೋ ಅವರ ಈ ಆರೋಪ ಭಾರತ ಕೆನಡಾ ಸಂಬಂಧ ಹಳಸಲು ಕಾರಣವಾಗಿತ್ತು. ಈ ಸಂಬಂಧ ಸಾಕ್ಷ್ಯ ನೀಡುವಂತೆ ಈಗಲೂ ಭಾರತ ಕೆನಡಾವನ್ನು ಒತ್ತಾಯಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com