'ನಾವು ಈ ಯುದ್ಧ ಆರಂಭಿಸಲಿಲ್ಲ, ಆದರೆ ಮುಗಿಸುತ್ತೇವೆ; ಹಮಾಸ್ ತಕ್ಕ ಶಿಕ್ಷೆ ಅನುಭವಿಸುವುದು ಖಂಡಿತ': ಇಸ್ರೇಲ್ ಪ್ರಧಾನಿ ನೆತನ್ಯಾಹು

ಹಮಾಸ್‌ ಉಗ್ರರ ಭೀಕರ ದಾಳಿಗೆ ಕಠಿಣ ಎಚ್ಚರಿಕೆ ನೀಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇಸ್ರೇಲ್ ಈ ಯುದ್ಧವನ್ನು ಪ್ರಾರಂಭಿಸಲಿಲ್ಲ, ಆದರೆ ಮುಗಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ವಿಡಿಯೊ ಸಂದೇಶದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು
ವಿಡಿಯೊ ಸಂದೇಶದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು

ಜೆರುಸಲೇಂ: ಹಮಾಸ್‌ ಉಗ್ರರ ಭೀಕರ ದಾಳಿಗೆ ಕಠಿಣ ಎಚ್ಚರಿಕೆ ನೀಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇಸ್ರೇಲ್ ಈ ಯುದ್ಧವನ್ನು ಪ್ರಾರಂಭಿಸಲಿಲ್ಲ, ಆದರೆ ಮುಗಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಹಮಾಸ್ ವಿರುದ್ಧದ ಪ್ರತೀಕಾರದ ಭಾಗವಾಗಿ ಇಸ್ರೇಲ್ 3,00,000 ಸೈನಿಕರನ್ನು ಸಜ್ಜುಗೊಳಿಸಿದೆ. 1973 ರ ಯೋಮ್ ಕಿಪ್ಪೂರ್ ಯುದ್ಧದ ನಂತರ ಇಸ್ರೇಲ್ 400,000 ಸೈನಿಕರನ್ನು ಕರೆಸಿಕೊಂಡಿದ್ದು ಇದು ಅತಿದೊಡ್ಡ ಸೇನಾ ಸಜ್ಜುಗೊಳಿಸುವಿಕೆಯಾಗಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

"ಇಸ್ರೇಲ್ ಯುದ್ಧದ ಸ್ಥಿತಿಯಲ್ಲಿದೆ. ನಾವು ಈ ಯುದ್ಧವನ್ನು ಬಯಸಲಿಲ್ಲ. ಇದು ಅತ್ಯಂತ ಕ್ರೂರ ಮತ್ತು ಘೋರ ರೀತಿಯಲ್ಲಿ ನಮ್ಮ ಮೇಲೆ ಬಲವಂತವಾಗಿ ಹೇರಲ್ಪಟ್ಟಿದೆ. ಇಸ್ರೇಲ್ ಈ ಯುದ್ಧವನ್ನು ಪ್ರಾರಂಭಿಸದಿದ್ದರೂ, ಅದನ್ನು ಮುಗಿಸುತ್ತದೆ ಎಂದು ಮಂಗಳವಾರ ನೆತನ್ಯಾಹು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು. 

ಹಮಾಸ್ ದಾಳಿಯಲ್ಲಿ 700 ಕ್ಕೂ ಹೆಚ್ಚು ಇಸ್ರೇಲಿಗಳು ಮೃತಪಟ್ಟಿದ್ದು, 2,300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹಮಾಸ್‌ ಇದಕ್ಕೆ ದೀರ್ಘಕಾಲದವರೆಗೆ ನೆನಪಲ್ಲಿಟ್ಟುಕೊಳ್ಳುವಂತೆ ಬೆಲೆ ತೆರಬೇಕಾಗುತ್ತದೆ ಎಂದಿದ್ದಾರೆ. 

"ನಮ್ಮ ಮೇಲೆ ದಾಳಿ ಮಾಡುವ ಮೂಲಕ, ಹಮಾಸ್ ಐತಿಹಾಸಿಕ ತಪ್ಪು ಮಾಡಿದೆ. ನಾವು ಅವರಿಗೆ ಮತ್ತು ಇಸ್ರೇಲ್‌ನ ಇತರ ಶತ್ರುಗಳು ಮುಂಬರುವ ದಶಕಗಳವರೆಗೆ ನೆನಪಿನಲ್ಲಿಟ್ಟುಕೊಳ್ಳುವ ಬೆಲೆಯನ್ನು ನಿಖರವಾಗಿ ನೀಡುತ್ತೇವೆ ಎಂದು ನೆತನ್ಯಾಹು ಹೇಳಿದರು.

ಹಮಾಸ್ ನ್ನು ಐಸಿಸ್ ಎಂದು ಬ್ರಾಂಡ್ ಮಾಡಿದ ಅವರು ಹಮಾಸ್ ವಿರುದ್ಧ "ನಾಗರಿಕತೆಯ ಶಕ್ತಿಗಳು ಒಂದಾಗಿ ಸೋಲಿಸಬೇಕು ಎಂದು ಕರೆ ನೀಡಿದರು. ಹಮಾಸ್ ಐಸಿಸ್ ಆಗಿದೆ. ಐಸಿಸ್ ನ್ನು ಸೋಲಿಸಲು ನಾಗರಿಕತೆಯ ಶಕ್ತಿಗಳು ಒಗ್ಗೂಡಿದಂತೆಯೇ, ನಾಗರಿಕತೆಯ ಶಕ್ತಿಗಳು ಹಮಾಸ್ ನ್ನು ಸೋಲಿಸುವಲ್ಲಿ ಇಸ್ರೇಲ್ ನ್ನು ಬೆಂಬಲಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ತಮಗೆ ನೆರವು ನೀಡಿದ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೊ ಬೈಡನ್ ಮತ್ತು ಇತರ ವಿಶ್ವ ನಾಯಕರಿಗೆ ಧನ್ಯವಾದ ಅರ್ಪಿಸಿದರು.ನಾನು ಅಧ್ಯಕ್ಷ ಬಿಡೆನ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಇಸ್ರೇಲ್ ಭದ್ರತೆಗಾಗಿ ಅಮೆರಿಕ ನೀಡಿದ ನೆರವಿಗೆ ಎಲ್ಲಾ ನಾಗರಿಕರ ಪರವಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದರು. 

ಹಮಾಸ್ ವಿರುದ್ಧ ಹೋರಾಡುವಲ್ಲಿ, ಇಸ್ರೇಲ್ ತನ್ನ ಸ್ವಂತ ಜನರಿಗಾಗಿ ಹೋರಾಡುತ್ತಿಲ್ಲ. ಇದು ಅನಾಗರಿಕತೆಯ ವಿರುದ್ಧ ನಿಂತಿರುವ ಪ್ರತಿಯೊಂದು ದೇಶಕ್ಕಾಗಿ ಹೋರಾಡುತ್ತಿದೆ. ಇಸ್ರೇಲ್ ಈ ಯುದ್ಧವನ್ನು ಗೆಲ್ಲುತ್ತದೆ ಮತ್ತು ಇಸ್ರೇಲ್ ಗೆದ್ದಾಗ, ಇಡೀ ನಾಗರಿಕ ಜಗತ್ತು ಗೆಲ್ಲುತ್ತದೆ ಎಂದರು. 

ನಾಗರಿಕ ಒತ್ತೆಯಾಳುಗಳನ್ನು ಯಾವುದೇ ಎಚ್ಚರಿಕೆ ನೀಡದೆ ಗಲ್ಲಿಗೇರಿಸಲಾಗುವುದು ಮತ್ತು ಇಸ್ರೇಲ್ ಗಾಜಾದಲ್ಲಿ ಜನರನ್ನು ಗುರಿಯಾಗಿಸಿಕೊಂಡರೆ ಹತ್ಯೆಗಳನ್ನು ಪ್ರಸಾರ ಮಾಡಲಾಗುವುದು ಎಂದು ಹಮಾಸ್ ಹೇಳಿದೆ. ಸಿಎನ್ ಎನ್ ವರದಿ ಮಾಡಿದ ಪ್ರಕಾರ, ಇಸ್ರೇಲಿ ಸೇನಾ ಅಧಿಕಾರಿಗಳು ಸೇರಿದಂತೆ 100ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ವಶದಲ್ಲಿರಿಸಿಕೊಳ್ಳುವುದಾಗಿ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com