ನಾನು, ಇಡೀ ಬ್ರಿಟನ್ ರಾಷ್ಟ್ರ ನಿಮ್ಮೊಂದಿಗಿದ್ದೇವೆ: ಇಸ್ರೇಲ್'ಗೆ ಬೆಂಬಲ ಸೂಚಿಸಿದ ರಿಷಿ ಸುನಕ್

ಇಸ್ರೇಲ್​-ಹಮಾಸ್ ಸಂಘರ್ಷದ ನಡುವೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಗುರುವಾರ ಇಸ್ರೇಲ್​ಗೆ ಭೇಟಿ ನೀಡಿದ್ದು, ಇಸ್ರೇಲ್ ಮೇಲೆ ನಡೆದಿರುವ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಇಸ್ರೇಲ್ ನಲ್ಲಿ ರಿಷಿ ಸುನಕ್.
ಇಸ್ರೇಲ್ ನಲ್ಲಿ ರಿಷಿ ಸುನಕ್.

ಜೆರುಸೆಲಂ: ಇಸ್ರೇಲ್​-ಹಮಾಸ್ ಸಂಘರ್ಷದ ನಡುವೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಗುರುವಾರ ಇಸ್ರೇಲ್​ಗೆ ಭೇಟಿ ನೀಡಿದ್ದು, ಇಸ್ರೇಲ್ ಮೇಲೆ ನಡೆದಿರುವ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಇಸ್ರೇಲ್ ಭೇಟಿಗೂ ಮುನ್ನ ಹೇಳಿಕೆ ನೀಡಿದ ರಿಷಿ ಸುನಕ್ ಅವರು, ಇದು ಭಯಾನಕ ದಾಳಿ. ಪ್ರತಿಯೊಬ್ಬ ನಾಗರಿಕನ ಸಾವು ದುರಂತವೇ ಆಗಿದೆ. ಹಮಾಸಿಗರ ಭೀಕರ ಕೃತ್ಯದಿಂದ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆಂದು ಹೇಳಿದರು.

ಸಾಧ್ಯವಾದಷ್ಟು ಬೇಗ ಗಾಜಾಕ್ಕೆ ಮಾನವೀಯ ಸಹಾಯ ಒದಗಿಸಲು ಅನುಮತಿ ನೀಡಬೇಕು. ಗಾಜಾದಲ್ಲಿ ಸಿಲುಕಿರುವ ಬ್ರಿಟಿಷ್ ನಾಗರಿಕರ ತಮ್ಮ ದೇಶಕ್ಕೆ ಕರೆತರಲು ಅಗತ್ಯವಿರುವ ಮಾರ್ಗವನ್ನು ತೆರೆಯಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲೂ ಟ್ವೀಟ್ ಮಾಡಿರುವ ಅವರು, ಗಾಜಾ ಆಸ್ಪತ್ರೆಯ ಮೇಲಿನ ದಾಳಿ ನಡೆಸಿ ನೂರಾರು ಜನರನ್ನು ಹತ್ಯೆ ಮಾಡಿರುವ ಘಟನೆಯನ್ನು ಖಂಡಿಸಿದ್ದಾರೆ.

“ನಾನು ಇಸ್ರೇಲ್‌ನಲ್ಲಿದ್ದೇನೆ, ಇಸ್ರೇಲ್ ದುಃಖದಲ್ಲಿರುವ ರಾಷ್ಟ್ರ. ನಾನು ನಿಮ್ಮೊಂದಿಗಿದ್ದೇನೆ. ಇಂದು ಮತ್ತು ಸದಾಕಾಲ ಭಯೋತ್ಪಾದನೆ ಎಂಬ ದುಷ್ಟತನದ ವಿರುದ್ಧ ನಿಮ್ಮೊಂದಿಗೆ ನಿಲ್ಲುತ್ತೇನೆಂದು ಹೇಳಿದ್ದಾರೆ.

ಹಮಾಸ್‌ನೊಂದಿಗೆ ನಡೆಯುತ್ತಿರುವ ಸಂಘರ್ಷದ ಮಧ್ಯೆ, ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರ ಮಧ್ಯಸ್ಥಿಕೆಯ ನಂತರ ಗಾಜಾ ಪಟ್ಟಿಗೆ ಸೀಮಿತ ಮಾನವೀಯ ಸರಬರಾಜುಗಳನ್ನು ತಲುಪಿಸಲು ಈಜಿಪ್ಟ್ ಒಪ್ಪಿಕೊಂಡಿದ್ದು, ಇದರ ಬೆನ್ನಲ್ಲೇ ರಿಷಿ ಸುನಕ್ ಅವರು ಇಸ್ರೇಲ್'ಗೆ ಭೇಟಿ ನೀಡಿದ್ದಾರೆ.

ಈ ನಡುವೆ ನಿನ್ನೆ ಇಸ್ರೇಲ್​ ಪ್ರವಾಸ ಕೈಗೊಂಡಿದ್ದ ಅಮೆರಿಕ ಅಧ್ಯಕ್ಷ ಬೈಡನ್​ ಅಮೆರಿಕಕ್ಕೆ ವಾಪಸ್ ಆಗಿದ್ದಾರೆ. ಇಸ್ರೇಲ್‌ಗೆ ಭೇಟಿ ನೀಡಿದ ನಂತರ, ಬೈಡನ್ ವಾಷಿಂಗ್ಟನ್‌ಗೆ ಮರಳಿದ್ದಾರೆಂದು ವರದಿಗಳು ತಿಳಿಸಿವೆ.

ಗಾಜಾದಲ್ಲಿ ಸಿಲುಕಿರುವ ನಾಗರಿಕರ ಸಂಕಷ್ಟಗಳನ್ನು ನಿವಾರಿಸುವ ಮಾರ್ಗಗಳನ್ನು ಇಸ್ರೇಲ್ ಕೂಡ ಅನ್ವೇಷಿಸಬೇಕು ಎಂದು ಬೈಡನ್ ಇದೇ ವೇಳೆ ಸಲಹೆ ಕೂಡಾ ನೀಡಿದ್ದಾರೆ.

ಹಮಾಸ್ ವಿರುದ್ಧ ಹೋರಾಡುತ್ತಿರುವ ಇಸ್ರೇಲ್​ಗೆ ಸಂಪೂರ್ಣ ಬೆಂಬಲ ಘೋಷಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಟೆಲ್ ಅವೀವ್​ಗೆ ಭೇಟಿ ನೀಡಿದ್ದರು. ಇದರ ಭಾಗವಾಗಿ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿ ಮಾಡಿದರು.

ಇಸ್ರೇಲ್ ತೀವ್ರವಾಗಿ ಹಾನಿಗೊಳಗಾಗಿದೆ. ಆದಾಗ್ಯೂ, ಗಾಜಾದ ಜನರ ನೋವನ್ನು ನಿವಾರಿಸುವ ಮಾರ್ಗಗಳನ್ನು ಇಸ್ರೇಲ್ ಸಹ ಅನ್ವೇಷಿಸಬೇಕು'' ಎಂದು ಅವರು ಸಲಹೆ ನೀಡಿದರು.

ಗಾಜಾದಿಂದ ಎಲ್ಲಿಯೂ ಹೋಗಲಾಗದ ಮುಗ್ಧ ನಾಗರಿಕರ ಸಂಕಷ್ಟವನ್ನು ನಿವಾರಿಸಲು ಇಸ್ರೆಲ್​ನವರಿಗೆ ಅವಕಾಶವಿದ್ದರೆ, ಅವರು ಆ ದಿಕ್ಕಿನಲ್ಲಿ ಹೆಜ್ಜೆಗಳನ್ನು ಇಡಬೇಕು. ಹಾಗೆ ಮಾಡಲು ಸಾಧ್ಯವಾಗದಿದ್ದರೆ, ಏನಾಗುತ್ತದೆಯೋ ಅದಕ್ಕೆ ಅವರೇ ಹೊಣೆಯಾಗುತ್ತಾರೆ. ಅದು ಬಹುಶಃ ಅನ್ಯಾಯವಾಗುತ್ತದೆ. ನಾನಿಲ್ಲಿ ಹೇಳುವುದು ಇಷ್ಟೇ. ಯಾರಿಗಾದರೂ ನೋವು ಕಡಿಮೆ ಮಾಡಲು ಅವಕಾಶವಿದ್ದರೆ, ಅದನ್ನು ಕಡಿಮೆ ಮಾಡಬೇಕು. ಇಲ್ಲದಿದ್ದರೆ ಜಗತ್ತಿನ ದೃಷ್ಟಿಯಲ್ಲಿ ನಾವು ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತೇವೆ. ಪ್ರತಿಯೊಬ್ಬರೂ ಇದನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ'' ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com