ಗುರುದ್ವಾರಕ್ಕೆ ತೆರಳಿದ್ದ ರಾಯಭಾರಿ ತಡೆದ ಮೂಲಭೂತ ವಾದಿಗಳು
ಗುರುದ್ವಾರಕ್ಕೆ ತೆರಳಿದ್ದ ರಾಯಭಾರಿ ತಡೆದ ಮೂಲಭೂತ ವಾದಿಗಳು

ಗುರುದ್ವಾರಕ್ಕೆ ರಾಯಭಾರಿ ಪ್ರವೇಶಕ್ಕೆ ತಡೆ: ಬ್ರಿಟನ್ ಗೆ ಕಳವಳ ವ್ಯಕ್ತಪಡಿಸಿದ ಭಾರತ

ಭಾರತದ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಅವರನ್ನು ಸ್ಕಾಟ್ಲೆಂಡ್‌ನ ಗುರುದ್ವಾರಕ್ಕೆ ಪ್ರವೇಶಿಸದಂತೆ ತಡೆದ ಘಟನೆ ನಡೆದಿದ್ದು, ಈ ಘಟನೆ ವಿಚಾರವಾಗಿ ಭಾರತ ವಿದೇಶಾಂಗ ಇಲಾಖೆ ಬ್ರಿಟನ್ ವಿದೇಶಾಂಗ ಕಚೇರಿಗೆ ತನ್ನ ಕಳವಳ ವ್ಯಕ್ತಪಡಿಸಿದೆ.
Published on

ನವದೆಹಲಿ: ಭಾರತದ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಅವರನ್ನು ಸ್ಕಾಟ್ಲೆಂಡ್‌ನ ಗುರುದ್ವಾರಕ್ಕೆ ಪ್ರವೇಶಿಸದಂತೆ ತಡೆದ ಘಟನೆ ನಡೆದಿದ್ದು, ಈ ಘಟನೆ ವಿಚಾರವಾಗಿ ಭಾರತ ವಿದೇಶಾಂಗ ಇಲಾಖೆ ಬ್ರಿಟನ್ ವಿದೇಶಾಂಗ ಕಚೇರಿಗೆ ತನ್ನ ಕಳವಳ ವ್ಯಕ್ತಪಡಿಸಿದೆ.

ಭಾರತೀಯ ವಿದೇಶಾಂಗ ಇಲಾಖೆ ಬ್ರಿಟನ್ ವಿದೇಶಾಂಗ ಕಚೇರಿ ಮತ್ತು ಪೊಲೀಸರೊಂದಿಗೆ ಈ ವಿಚಾರ ಪ್ರಸ್ತಾಪಿಸಿದ್ದು, ಈ ಬಗ್ಗೆ ಕೂಲಂಕಷ ತನಿಖೆ ನಡೆಸುವಂತೆ ಸೂಚಿಸಿದೆ. ಇನ್ನು ಭಾರತೀಯ ರಾಯಭಾರಿ ದೊರೈಸ್ವಾಮಿ ಅವರನ್ನು ಶುಕ್ರವಾರ ಗ್ಲಾಸ್ಗೋದ ಗುರುದ್ವಾರಕ್ಕೆ ಪ್ರವೇಶಿಸದಂತೆ ಕೆಲವು ಸಿಖ್ ಮೂಲಭೂತವಾದಿಗಳು ತಡೆದರು. ಈ ವೇಳೆ ಭಾರತೀಯ ಹೈಕಮಿಷನರ್ ದೊರೈಸ್ವಾಮಿ ಅವರು ವಾಗ್ವಾದಕ್ಕಿಳಿಯುವ ಬದಲು ವಾಪಸ್ ತೆರಳಲು ನಿರ್ಧರಿಸಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಈ ಕುರಿತ ವಿಡಿಯೋವೊಂದು 'ಸಿಖ್ ಯೂತ್ ಯುಕೆ' ನ ಇನ್‌ಸ್ಟಾಗ್ರಾಮ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಖಲಿಸ್ತಾನಿ ಪರ ಕಾರ್ಯಕರ್ತರೊಬ್ಬರು ಆಲ್ಬರ್ಟ್ ಡ್ರೈವ್‌ನಲ್ಲಿರುವ ಗ್ಲಾಸ್ಗೋ ಗುರುದ್ವಾರಕ್ಕೆ ಪ್ರವೇಶಿಸದಂತೆ ದೊರೈಸ್ವಾಮಿ ಅವರನ್ನು ತಡೆಯುತ್ತಿರುವುದು ಕಂಡುಬಂದಿದೆ. ಪಾರ್ಕಿಂಗ್ ಪ್ರದೇಶದಲ್ಲಿ ಹೈಕಮಿಷನರ್ ಕಾರಿನ ಬಳಿ ಇಬ್ಬರು ವ್ಯಕ್ತಿಗಳು ಇರುವುದನ್ನು ವೀಡಿಯೊ ತೋರಿಸುತ್ತದೆ. ಅವರಲ್ಲಿ ಒಬ್ಬರು ಒಳಗಿನಿಂದ ಲಾಕ್ ಆಗಿದ್ದ ಕಾರಿನ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ್ದಾರೆ. ಬಳಿಕ ವಾಗ್ವಾದ ನಡೆದಿದ್ದು, ನಂತರ ಹೈಕಮಿಷನರ್ ಅವರ ಕಾರು ಗುರುದ್ವಾರ ಆವರಣದಿಂದ ಹೊರಡಿದೆ.

ಇದೇ ವೇಳೆ ಗುರುದ್ವಾರಕ್ಕೆ ಭೇಟಿ ನೀಡುವ ಯಾವುದೇ ಭಾರತೀಯ ರಾಯಭಾರಿ ಅಥವಾ ಯಾವುದೇ ಭಾರತೀಯ ಸರ್ಕಾರಿ ಅಧಿಕಾರಿಯನ್ನು ಹೀಗೆಯೇ ನಡೆಸಿಕೊಳ್ಳಲಾಗುತ್ತದೆ ಎಂದು ಇನ್ನೊಬ್ಬ ವ್ಯಕ್ತಿ ಕ್ಯಾಮೆರಾದೊಂದಿಗೆ ಮಾತನಾಡುವುದನ್ನು ವೀಡಿಯೊ ತೋರಿಸಿದೆ. ಭಾರತೀಯ ಅಧಿಕಾರಿಗಳು ತಮ್ಮ ಅಧಿಕೃತ ಸಾಮರ್ಥ್ಯದಲ್ಲಿ ಗುರುದ್ವಾರಗಳಿಗೆ ಭೇಟಿ ನೀಡುವುದರ ಮೇಲೆ ನಿಷೇಧವಿದೆ ಎಂದು 'ಸಿಖ್ ಯೂತ್ ಯುಕೆ' ಹೇಳಿಕೊಂಡಿದೆ. 

ಘಟನೆಯನ್ನು ಬಿಜೆಪಿ ಇಂದು ಖಂಡಿಸಿದ್ದು, "ನಾವು ಇದನ್ನು ಬಲವಾಗಿ ಖಂಡಿಸುತ್ತೇನೆ. ಯಾವುದೇ ಧರ್ಮ ಅಥವಾ ಸಮುದಾಯದ ಯಾರಾದರೂ ಇಲ್ಲಿಗೆ (ಗುರುದ್ವಾರ) ಬರಬಹುದು" ಎಂದು ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ. ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ (SGPC) ಕೂಡ ಘಟನೆಯನ್ನು ಖಂಡಿಸಿದ್ದು, SGPC ಪ್ರಧಾನ ಕಾರ್ಯದರ್ಶಿ ಗ್ರೆವಾಲ್ ಅವರು ಗುರುದ್ವಾರಕ್ಕೆ ಪ್ರವೇಶಿಸದಂತೆ ಯುಕೆಯ ಭಾರತ ರಾಯಭಾರಿಯನ್ನು ತಡೆಯಬಾರದು ಎಂದು ಹೇಳಿದರು.

ಈಗಾಗಲೇ ಕೆನಡಾ ಮತ್ತು ಭಾರತ ಸಂಬಂಧ ಹಾಳಾಗಿದ್ದು, ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ವಿಚಾರವಾಗಿ ಕೆನಡಾದ ಪ್ರಧಾನಿ ಭಾರತವನ್ನು ಬಹಿರಂಗವಾಗಿ ಖಂಡಿಸಿದ್ದು, ಉಭಯ ದೇಶಗಳು ಪರಸ್ಪರ ರಾಜತಾಂತ್ರಿಕರನ್ನು ಕೂಡ ಹೊರಹಾಕಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com