ಬೆಲಾರಸ್‌ನಲ್ಲಿ ಪರಮಾಣು ಶಸ್ತ್ರಾಸ್ತ್ರ ಸ್ಥಾಪನೆಗೆ ರಷ್ಯಾ ಯೋಜನೆ!

ಬ್ರಿಟಿಷ್ ಸರ್ಕಾರ ತಾನು ಉಕ್ರೇನ್‌ಗೆ ಯುರೇನಿಯಂ ಸೇರಿದಂತೆ ವಿವಿಧ ಆಯುಧಗಳನ್ನು ಪೂರೈಸುವುದಾಗಿ ಘೋಷಿಸಿದ ಬೆನ್ನಲ್ಲೇ, ಪುಟಿನ್ ತಾನು ಉಕ್ರೇನ್ ಜೊತೆ ಗಡಿ ಹಂಚಿಕೊಳ್ಳುವ ಬೆಲಾರಸ್‌ನಲ್ಲಿ ಕಾರ್ಯತಂತ್ರದ ಅಣ್ವಸ್ತ್ರಗಳನ್ನು ಅಳವಡಿಸುವುದಾಗಿ ಘೋಷಿಸಿದರು.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

- ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಮೊದಲ ನೋಟಕ್ಕೆ, ತನ್ನ ನೆರೆಯ ಬೆಲಾರಸ್‌ನಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಸ್ಥಾಪಿಸುವ ರಷ್ಯಾದ ಪ್ರಯತ್ನ ಅಪಾಯಕಾರಿ ಎಂದು ಆರೋಪಿಸಿರುವ ಅಮೆರಿಕಾ ಅಧ್ಯಕ್ಷ ಪುಟಿನ್ ಅವರ ಮಾತು ನಿಜ ಎಂದು ಕಾಣಬಹುದು. ಆದರೆ ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಇಲ್ಲಿ ಜಾಗತಿಕ ರಾಜಕಾರಣದ ಇನ್ನೊಂದು ಮಜಲು ಕಂಡುಬರುತ್ತದೆ.

ಅಮೆರಿಕಾದ ಅಧ್ಯಕ್ಷ, ಜೋ ಬೈಡನ್ ಅವರು ಮಾರ್ಚ್ 28, 2023ರ ಮಂಗಳವಾರದಂದು ರಷ್ಯಾ ತನ್ನ ನೆರೆಯ ದೇಶವಾದ ಬೆಲಾರಸ್‌ನಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಅಳವಡಿಸುವುದನ್ನು ತೀವ್ರವಾಗಿ ಖಂಡಿಸಿ, ರಷ್ಯಾದ ನಡೆ ಅಪಾಯಕಾರಿಯಾದುದು ಎಂದರು. ಕಳೆದ ವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ನಾವು ನೆರೆಯ ರಾಷ್ಟ್ರದಲ್ಲಿ ಕಾರ್ಯತಂತ್ರದ ದೃಷ್ಟಿಯಿಂದ ಸಣ್ಣ ಪ್ರಮಾಣದಲ್ಲಿ, ಕಡಿಮೆ ವ್ಯಾಪ್ತಿಯ ಪರಮಾಣು ಶಸ್ತ್ರಾಸ್ತ್ರಗಳನ್ನು ಅಳವಡಿಸುವುದಾಗಿ ಘೋಷಿಸಿದರು. ಆದರೆ ಪುಟಿನ್ ರಷ್ಯಾ ಬೆಲಾರಸ್‌ನಲ್ಲಿ ಎಷ್ಟು ಶಸ್ತ್ರಾಸ್ತ್ರಗಳನ್ನು ಅಳವಡಿಸಲಿದೆ ಎಂದು ಹೇಳಲಿಲ್ಲ.

ಈ ವಿಚಾರವನ್ನು ವ್ಲಾದಿಮಿರ್‌‌ ಪುಟಿನ್ ಅವರ ಆತ್ಮೀಯರಲ್ಲಿ ಒಬ್ಬರಾದ ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಗ್ರಿಗೋರಿವಿಚ್ ಅವರೂ ಮಾರ್ಚ್ 31ರಂದು ಖಚಿತಪಡಿಸಿದರು. ಶ್ವೇತ ಭವನದ ಪತ್ರಿಕಾ ಹೇಳಿಕೆ ಅಧ್ಯಕ್ಷ ಬೈಡನ್ ಅವರು ಈ ಬೆಳವಣಿಗೆಯನ್ನು ಅಪಾಯಕಾರಿ ಎಂದಿದ್ದಾರೆ ಎಂದು ವಿವರಿಸಿತು.

ಮೇಲ್ನೋಟಕ್ಕೆ ಯಾರೇ ಆದರೂ ಬಿಡೆನ್ ಅವರ ಹೇಳಿಕೆ ಸತ್ಯ ಎಂಬಂತೆ ಭಾಸವಾಗುತ್ತದೆ. ಆದರೆ ಸೂಕ್ಷ್ಮವಾಗಿ ಅವಲೋಕಿಸಿದಾಗ, ಜಾಗತಿಕ ರಾಜಕಾರಣದಲ್ಲಿ ಬದಲಾವಣೆ ಕಂಡುಬರುತ್ತದೆ. ಪುಟಿನ್ ಹಾಗೂ ಲುಕಾಶೆಂಕೋ ಅವರು ಪಾಶ್ಚಾತ್ಯ ಜಗತ್ತು ತಮ್ಮ ರಾಷ್ಟ್ರಗಳನ್ನು ನಾಶಪಡಿಸಲು ಪ್ರಯತ್ನಿಸುತ್ತಿದೆ ಎಂದಿದ್ದಾರೆ.

ಲುಕಶೆಂಕೋ ಅವರು ತಾನು ಮತ್ತು ಪುಟಿನ್ ಸೇರಿ ಬೆಲಾರಸ್‌ನಲ್ಲಿ ಕಾರ್ಯತಂತ್ರದ ಆಯುಧಗಳನ್ನು ಅಳವಡಿಸುವುದಾಗಿ ಘೋಷಿಸಿದ್ದಾರೆ. "ನಮ್ಮ ದೇಶಗಳನ್ನು ಆಂತರಿಕವಾಗಿ ಮತ್ತು ಬಾಹ್ಯವಾಗಿ ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುವ ವಿದೇಶೀ ಧೂರ್ತ ಶಕ್ತಿಗಳು ಒಂದು ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ದೇಶಗಳನ್ನು, ನಮ್ಮ ಜನರನ್ನು ಕಾಪಾಡಿಕೊಳ್ಳಲು ನಾವು ಯಾವುದೇ ಕ್ರಮವನ್ನು ಬೇಕಾದರೂ ಕೈಗೊಳ್ಳುತ್ತೇವೆ" ಎಂದಿದ್ದಾರೆ ಲುಕಶೆಂಕೋ.

ರಷ್ಯಾದ ಪರಮಾಣು ಶಸ್ತ್ರಾಸ್ತ್ರಗಳ ಅಳವಡಿಕೆಯ ಹಿನ್ನಲೆ

ಬ್ರಿಟಿಷ್ ಸರ್ಕಾರ ತಾನು ಉಕ್ರೇನ್‌ಗೆ ಯುರೇನಿಯಂ ಸೇರಿದಂತೆ ವಿವಿಧ ಆಯುಧಗಳನ್ನು ಪೂರೈಸುವುದಾಗಿ ಘೋಷಿಸಿದ ಬೆನ್ನಲ್ಲೇ, ಪುಟಿನ್ ತಾನು ಉಕ್ರೇನ್ ಜೊತೆ ಗಡಿ ಹಂಚಿಕೊಳ್ಳುವ ಬೆಲಾರಸ್‌ನಲ್ಲಿ ಕಾರ್ಯತಂತ್ರದ ಅಣ್ವಸ್ತ್ರಗಳನ್ನು ಅಳವಡಿಸುವುದಾಗಿ ಘೋಷಿಸಿದರು.

ವರದಿಗಳ ಪ್ರಕಾರ, ಬ್ರಿಟಿಷ್ ಸರ್ಕಾರ ಉಕ್ರೇನಿಗೆ ಯುರೇನಿಯಂ ಸೇರಿದಂತೆ ವಿವಿಧ ಆಯುಧಗಳನ್ನು ಪೂರೈಸುವುದಾಗಿ ಘೋಷಿಸಿದ ಪರಿಣಾಮವಾಗಿ ಲುಕಶೆಂಕೋ ಅವರು ಕೋಪಗೊಂಡಿದ್ದಾರೆ. ಆದರೆ ಅದಕ್ಕೂ ಮೊದಲೇ ಅವರು ರಷ್ಯಾದ ಕಾರ್ಯತಂತ್ರದ ಅಣ್ವಸ್ತ್ರಗಳನ್ನು ತನ್ನ ನೆಲದಲ್ಲಿ ಸ್ಥಾಪಿಸುವಂತೆ ಕರೆ ನೀಡಿತ್ತು.

ಯುಕೆಯ ರಕ್ಷಣಾ ಇಲಾಖೆಯ ರಾಜ್ಯ ಸಚಿವರಾದ ಅನ್ನಾಬೆಲ್ ಗೋಲ್ಡೀ ಅವರು ಮಾರ್ಚ್ 20ರಂದು ಬ್ರಿಟನ್ ಉಕ್ರೇನಿಗೆ ಆಯುಧಗಳನ್ನು ನಾಶಪಡಿಸಬಲ್ಲ ಡಿಪ್ಲೀಟೆಡ್ ಯುರೇನಿಯಂ ಹೊಂದಿರುವ ಚಾಲೆಂಜರ್ 2 ಯುದ್ಧ ಟ್ಯಾಂಕ್‌ಗಳನ್ನು ಒದಗಿಸಲಿದೆ ಎಂದಿದ್ದರು. ಇದರ ಬೆನ್ನಿಗೇ ಪುಟಿನ್ ತನ್ನ ಹೇಳಿಕೆ ನೀಡಿದ್ದರು.

ರಷ್ಯಾಗೆ ನ್ಯಾಟೋದ ಕ್ಷಿಪಣಿ ಭಯ

ನ್ಯಾಟೋ ಸದಸ್ಯ ರಾಷ್ಟ್ರಗಳು ತಮ್ಮ ಆಯುಧಗಳನ್ನು ಹೇಗೆ ನೆಲೆಗೊಳಿಸಿವೆ ಎನ್ನುವುದರ ಮೇಲೆ ಅಮೆರಿಕಾ ಮತ್ತು ಅದರ ಯುರೋಪಿನ ಸಹಯೋಗಿಗಳೊಡನೆ ರಷ್ಯಾದ ಸಂಭಾವ್ಯ ಪರಮಾಣು ಕದನದ ಅಪಾಯ ನಿಂತಿದೆ. ಅಮೆರಿಕಾ ದೀರ್ಘಕಾಲದಿಂದ ಯುರೋಪ್‌ನಲ್ಲಿ ಆಯುಧಗಳನ್ನು ಸಂಗ್ರಹಿಸಿ ಇಡುತ್ತಿತ್ತು. ಇದೇ ಉಪಾಯವನ್ನು ರಷ್ಯಾ ಈಗ ಜಾರಿಗೆ ತರಲು ಪ್ರಯತ್ನಿಸುತ್ತಿದೆ.

1950ರ ದಶಕದ ಬಳಿಕ, ಸೋವಿಯತ್ ಒಕ್ಕೂಟದ ಜೊತೆ ತಿಕ್ಕಾಟಗಳು ಹೆಚ್ಚುತ್ತಿದ್ದ ಸಂದರ್ಭದಲ್ಲಿ, ಅಮೆರಿಕಾ ಪಶ್ಚಿಮ ಯುರೋಪಿನ ನ್ಯಾಟೋ ನೆಲೆಗಳಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟಿತ್ತು. ಈ ಆಯುಧಗಳನ್ನು ಮೊದಲಿಗೆ 1954ರಲ್ಲಿ ಯುಕೆಗೆ ಕೊಂಡೊಯ್ಯಲಾಯಿತು. ಬಳಿಕ ಜರ್ಮನಿ, ಇಟಲಿ, ಗ್ರೀಸ್, ಟರ್ಕಿ, ಫ್ರಾನ್ಸ್, ನೆದರ್ಲೆಂಡ್ಸ್‌, ಹಾಗೂ ಬೆಲ್ಜಿಯಂಗಳಲ್ಲಿ ಸ್ಥಾಪಿಸಲಾಯಿತು. ಪ್ರಸ್ತುತ ಐದು ನ್ಯಾಟೋ ಸದಸ್ಯ ರಾಷ್ಟ್ರಗಳಾದ ಬೆಲ್ಜಿಯಂ, ಜರ್ಮನಿ, ಇಟಲಿ, ನೆದರ್ಲ್ಯಾಂಡ್ಸ್, ಹಾಗೂ ಟರ್ಕಿಗಳಲ್ಲಿನ ಆರು ನೆಲೆಗಳಲ್ಲಿ ಅಮೆರಿಕಾದ ಪರಮಾಣು ಶಸ್ತ್ರಾಸ್ತ್ರಗಳನ್ನು ನೆಲೆಯಾಗಿಸಲಾಗಿದೆ. ಯುಕೆ ಮತ್ತು ಫ್ರಾನ್ಸ್‌ಗಳು ಸ್ವತಃ ಅಣ್ವಸ್ತ್ರ ರಾಷ್ಟ್ರಗಳಾಗಿದ್ದು, ಅವುಗಳು ಅಮೆರಿಕಾದ ಆಯುಧಗಳನ್ನು ಹೊಂದಿಲ್ಲ.

ಅಮೆರಿಕಾದ ಪರಮಾಣು ಶಸ್ತ್ರಾಸ್ತ್ರಗಳ ಅಳವಡಿಕೆ

1970ರ ದಶಕದಲ್ಲಿ, ಅಮೆರಿಕಾ 7,000ಕ್ಕೂ ಹೆಚ್ಚು ಆಯುಧಗಳನ್ನು ಯುರೋಪ್‌ನಲ್ಲಿ ಅಳವಡಿಸಿತ್ತು. ಆದರೆ, ಆಯುಧ ನಿಯಂತ್ರಣ ಒಪ್ಪಂದ ಮತ್ತು ಅಮೆರಿಕಾದ ಶತ್ರುವಾದ ಸೋವಿಯತ್ ಒಕ್ಕೂಟದ ಜೊತೆಗಿನ ಸೂಪರ್ ಪವರ್ ವೈರತ್ವ ಕೊನೆಯಾದ ಬಳಿಕ ಆಯುಧಗಳ ಸಂಖ್ಯೆ 1980 ಮತ್ತು 90ರ ದಶಕದ ಆರಂಭದಲ್ಲಿ ಸಾಕಷ್ಟು ಕಡಿಮೆಯಾದವು.

1987ರಲ್ಲಿ, ಆಯುಧ ನಿಯಂತ್ರಣದಲ್ಲಿ ಒಂದು ಮಹತ್ವದ ಸಾಧನೆಯಾದ ಇಂಟರ್‌ಮೀಡಿಯಟ್ ರೇಂಜ್ ನ್ಯೂಕ್ಲಿಯರ್ ಫೋರ್ಸಸ್ (ಐಎನ್ಎಫ್) ಒಪ್ಪಂದವನ್ನು ಜಾರಿಗೆ ತರಲಾಯಿತಾದರೂ, ಅದು ಈಗ ಚಾಲ್ತಿಯಲ್ಲಿಲ್ಲ. ಆದರೆ ಈ ಒಪ್ಪಂದದಡಿ ಅಮೆರಿಕ ಮತ್ತು ಸೋವಿಯತ್ ಒಕ್ಕೂಟಗಳು ಮುಂದಿನ ಕೆಲ ವರ್ಷಗಳಲ್ಲಿ ಅಣ್ವಸ್ತ್ರ ಸಿಡಿತಲೆಗಳನ್ನು ಒಯ್ಯಬಲ್ಲ ತಮ್ಮೆಲ್ಲ ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳನ್ನು ತೆರವುಗೊಳಿಸಿದವು.

ಪ್ರಸ್ತುತ ಯುರೋಪ್‌ನಲ್ಲಿ ಇರುವ ಅಮೆರಿಕಾದ ಅಣ್ವಸ್ತ್ರಗಳ ಸಂಖ್ಯೆಯನ್ನು ಬಹಿರಂಗಪಡಿಸಲಾಗಿಲ್ಲವಾದರೂ, ತಜ್ಞರ ಪ್ರಕಾರ ಆರು ವಿವಿಧ ಪ್ರದೇಶಗಳಲ್ಲಿ ಅಂದಾಜು ನೂರು ಪರಮಾಣು ಬಾಂಬ್‌ಗಳನ್ನು ಇಡಲಾಗಿದೆ.

ಯುರೋಪಿನಲ್ಲಿರುವ ಅಮೆರಿಕಾದ ಪರಮಾಣು ಬಾಂಬ್‌ಗಳೆಲ್ಲವೂ ಬಿ61 ಗ್ರ್ಯಾವಿಟಿ ಬಾಂಬ್‌ಗಳಾಗಿದ್ದು, ಅಮೆರಿಕಾದ ಬಳಿ ಇನ್ನೂ ಇರುವ ಏಕೈಕ ಕಾರ್ಯತಂತ್ರದ ನ್ಯೂಕ್ಲಿಯರ್ ಆಯುಧವಾಗಿದೆ. ಇದು ಹೆಚ್ಚಿನ ವ್ಯಾಪ್ತಿಯ ಸಿಡಿತಲೆಗಳನ್ನು ಒಯ್ಯಬಲ್ಲದಾಗಿದ್ದು, ಇದರಿಂದ ನಡೆಯುವ ಸ್ಫೋಟಗಳ ಪರಿಣಾಮ ಹಲವು ನೂರು ಕಿಲೋಮೀಟರ್‌ಗಳಾಗಿವೆ. 1945ರಲ್ಲಿ ಅಮೆರಿಕಾ ಹಿರೋಷಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಪ್ರಯೋಗಿಸಿದ ಅಣುಬಾಂಬ್‌ಗಳು ಕೇವಲ 15 ಮತ್ತು 21 ಟನ್ ಪರಿಣಾಮ ಹೊಂದಿದ್ದವು.

ರಷ್ಯನ್ ನ್ಯೂಕ್ಲಿಯರ್ ಆಯುಧ ತಡೆ

ಪಾಶ್ಚಾತ್ಯ ತಜ್ಞರ ಪ್ರಕಾರ, ರಷ್ಯಾ ಇಂಟರ್‌ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿಗಳು (ಐಸಿಬಿಎಂ) ಸಬ್‌ಮರೀನ್‌ಗಳು ಹಾಗೂ ಬೃಹತ್ ಬಾಂಬರ್‌ಗಳು ಸೇರಿದಂತೆ ವಿವಿಧ ಪರಮಾಣು ಶಸ್ತ್ರಾಸ್ತ್ರಗಳನ್ನು 12ಕ್ಕೂ ಹೆಚ್ಚು ಮಿಲಿಟರಿ ನೆಲೆಗಳಲ್ಲಿ ಸಂಗ್ರಹಿಸಿಟ್ಟಿದೆ. ಆದರೆ ರಷ್ಯಾ ತನ್ನ ಭೂ ಪ್ರದೇಶದಲ್ಲಿ ಇನ್ನಷ್ಟು ಕಡೆ ಆಯುಧಗಳನ್ನು ಇಟ್ಟಿರುವ ಸಾಧ್ಯತೆಗಳಿವೆ.

ರಷ್ಯಾದ ಕಲಿನ್‌ಗಾರ್ಡ್ ಪ್ರದೇಶ ನ್ಯಾಟೋ ಸದಸ್ಯ ರಾಷ್ಟ್ರಗಳಾದ ಲಿಥುವೇನಿಯಾ ಮತ್ತು ಪೋಲೆಂಡ್ ರಾಷ್ಟ್ರಗಳ ಮಧ್ಯದಲ್ಲಿದೆ. ಅಲ್ಲಿ ಅಣ್ವಸ್ತ್ರಗಳನ್ನು ಸ್ಥಾಪಿಸುವುದರಿಂದ, ತನ್ನ ಸಾರ್ವಭೌಮತ್ವಕ್ಕೆ ಧಕ್ಕೆಯಾಗದಂತೆ ತಡೆಯಲು ಸೂಕ್ತವಾಗುತ್ತದೆ ಎಂದು ರಷ್ಯಾ ಭಾವಿಸಿದೆ. ಓರ್ವ ಹಿರಿಯ ರಷ್ಯನ್ ಸರ್ಕಾರಿ ಅಧಿಕಾರಿಯೊಬ್ಬರು ನ್ಯೂಕ್ಲಿಯರ್ ಸಾಮರ್ಥ್ಯ ಹೊಂದಿರುವ ಇಸ್ಕಾಂದರ್ ಕ್ಷಿಪಣಿಗಳನ್ನು ಕಲಿನ್‌ಗಾರ್ಡ್‌ನಲ್ಲಿ ಅಳವಡಿಸಲಾಗಿದೆ ಎಂದಿದ್ದಾರೆ. ಅಸೋಸಿಯೇಟೆಡ್ ಪ್ರೆಸ್ ಸಂಸ್ಥೆಯ ಪ್ರಕಾರ, ಅಮೆರಿಕಾ ಸರ್ಕಾರ ರಷ್ಯಾ ಬಳಿ ಅಂದಾಜು 2,000 ಅಣ್ವಸ್ತ್ರಗಳಿದ್ದು, ಅದರಲ್ಲಿ ವಿವಿಧ ರೀತಿಯ ಬಾಂಬ್‌ಗಳು, ಸಿಡಿತಲೆಗಳು ಮತ್ತು ಆರ್ಟಿಲರಿಗಳಿದ್ದು, ಅವುಗಳನ್ನು ವಿಮಾನದ ಮೂಲಕ ಸಾಗಿಸಬಹುದಾಗಿದೆ.

1990ರ ದಶಕದ ಅಣ್ವಸ್ತ್ರ ಪ್ರಸರಣ ತಡೆ

1991ರ ಕೊನೆಯಲ್ಲಿ ಸೋವಿಯತ್ ಒಕ್ಕೂಟ ಕುಸಿತವಾದಾಗ, ಬೆಲಾರಸ್, ಉಕ್ರೇನ್ ಮತ್ತು ಕಜಕಿಸ್ತಾನಗಳು ಅಣ್ವಸ್ತ್ರಗಳನ್ನು ತ್ಯಜಿಸಿದವು. ಆಯುಧಗಳನ್ನು ತ್ಯಜಿಸುವುದನ್ನು ಹೊಂದಿದ್ದ ಬುಡಾಪೆಸ್ಟ್ ಒಪ್ಪಂದವನ್ನು ಪ್ರಾಂತೀಯ ಸಮಗ್ರತೆಯನ್ನು ರಕ್ಷಿಸುವ ಸಲುವಾಗಿ ಅಮೆರಿಕಾ, ರಷ್ಯಾ ಹಾಗೂ ಬ್ರಿಟನ್‌ಗಳೂ ಬೆಂಬಲಿಸಿದ್ದವು. ಆದರೆ ಲುಕಶೆಂಕೋ ನಾವು ಬೆಲಾರಸ್‌ನ ಅಣ್ವಸ್ತ್ರವನ್ನು ಬಿಟ್ಟುಕೊಡಲು ಸಿದ್ಧವಿರಲಿಲ್ಲ‌. ಆದರೆ ಆಗಿನ ರಷ್ಯನ್ ಅಧ್ಯಕ್ಷರಾದ ಬೋರಿಸ್ ಯೆಲ್ಟ್‌ಸಿನ್ ಅವರ ಒತ್ತಡದಿಂದಾಗಿ ಹಾಗೆ ಮಾಡಬೇಕಾಯಿತು ಎಂದಿದ್ದರು. ಉಕ್ರೇನ್ ಪದೇ ಪದೇ 2014ರಲ್ಲಿ ರಷ್ಯಾ ಕ್ರಿಮಿಯಾವನ್ನು ವಶಪಡಿಸಿಕೊಂಡಿದ್ದು ಮತ್ತು 2022ರಲ್ಲಿ ತನ್ನ ಮೇಲೆ ದಾಳಿ ನಡೆಸಿದ್ದು ಬುಡಾಪೆಸ್ಟ್ ಒಪ್ಪಂದದ ಉಲ್ಲಂಘಿಸಿದೆ ಎಂದು ಆರೋಪಿಸಿದೆ.

ಎರಡನೇ ಮಹಾಯುದ್ಧದ ನಂತರದ ಬದಲಾವಣೆಗಳು

ಎರಡನೇ ಮಹಾಯುದ್ಧದಲ್ಲಿ ಸೋವಿಯತ್ ಒಕ್ಕೂಟದ ಸಾಮರ್ಥ್ಯವೂ ಪಾಶ್ಚಾತ್ಯ ಜಗತ್ತಿನ ಕುರಿತಾದ ಸೋವಿಯತ್ ಸಂಶಯಗಳನ್ನು ನಿವಾರಿಸಲಿಲ್ಲ. ಜೋಸೆಫ್ ಸ್ಟಾಲಿನ್ ಅವರಿಗೆ ವಿದೇಶೀ ಪ್ರಭಾವ ಮತ್ತು ಸಂಪರ್ಕದ ಪರಿಣಾಮಗಳ ಕುರಿತಾದ ಭಯವಿತ್ತು. ಶೀತಲ ಸಮರದ ಅವಧಿಯಾದ್ಯಂತ ಸೋವಿಯತ್ ನಾಯಕರು ಪಾಶ್ಚಾತ್ಯ ಉದಾರವಾದ ಮತ್ತು ಪಾಶ್ಚಾತ್ಯ ದೇಶಗಳ ತಾಂತ್ರಿಕ ಅಭಿವೃದ್ಧಿ ತನ್ನ ಜನರ ಮೇಲೆ ಪ್ರಭಾವ ಬೀರಬಹುದು ಎಂದು ಅನುಮಾನ ಹೊಂದಿದ್ದರು. ರಷ್ಯಾದ ಆಂತರಿಕ ಸಮರ ಮತ್ತು ನಾಜಿ಼ ಆಕ್ರಮಣದ ಸಂದರ್ಭದ ಅನುಭವಗಳು ಸೋವಿಯತ್ ಒಕ್ಕೂಟಕ್ಕೆ ಮಿಲಿಟರಿ ಅಥವಾ ಇನ್ನಾವುದೋ ಕಾರಣದಿಂದ ಪಾಶ್ಚಾತ್ಯ ಜಗತ್ತಿನೆದುರು ದುರ್ಬಲಗೊಂಡಿದ್ದೇನೋ ಎಂಬ ಭಾವನೆ ನೀಡಿದ್ದವು.

ವ್ಲಾಡಿಮಿರ್‌ ಪುಟಿನ್ ಸೇರಿದಂತೆ, ಹಲವಾರು ರಷ್ಯನ್ನರು 1991ರ ಸೋವಿಯತ್ ಒಕ್ಕೂಟದ ಪತನವನ್ನು ದುರಂತ ಎಂದೇ ಪರಿಗಣಿಸಿದ್ದಾರೆ. 1991ರ ಬಳಿಕ, ತನ್ನದೇ ಹಿತ್ತಲಿನಲ್ಲಿ ರಷ್ಯಾದ ಪ್ರಭಾವ ಕಡಿಮೆಯಾಗುತ್ತಾ ಬಂದಿತ್ತು. ಅದೇ ಸಮಯದಲ್ಲಿ ಪಾಶ್ಚಾತ್ಯ ಪ್ರಭಾವ ಮತ್ತು ನ್ಯಾಟೋದ ಮಿಲಿಟರಿ ಸಹಯೋಗ ವಿಸ್ತರಿಸುತ್ತಾ ಬಂತು. ಪಾಶ್ಚಾತ್ಯ ಜಗತ್ತು ನ್ಯಾಟೋ ಜರ್ಮನಿಯಿಂದ ಆಚೆಗೆ ವಿಸ್ತರಿಸುವುದಿಲ್ಲ ಎಂದು ಮಾತು ನೀಡಿ, ಅದನ್ನು ಮುರಿದ ಕಾರಣದಿಂದ ಪುಟಿನ್ ಈಗ ರಷ್ಯಾ ಪಾಶ್ಚಾತ್ಯ ಮುತ್ತಿಗೆಗೆ ಸಿಲುಕಿದೆ ಎಂದು ಭಾವಿಸಿದ್ದಾರೆ. ಉಕ್ರೇನ್ ಮೇಲೆ ಅವರು ಕೈಗೊಂಡ ದಾಳಿ ಐತಿಹಾಸಿಕವಾಗಿ ರಷ್ಯಾದ ಆಡಳಿತದಡಿಯಲ್ಲಿದ್ದ ಪ್ರದೇಶಗಳ ಮೇಲೆ ಪಾಶ್ಚಾತ್ಯ ಪ್ರಭಾವವನ್ನು ತಡೆಯುವ ಅಂತಿಮ ಪ್ರಯತ್ನದಂತೆ ಕಂಡುಬರುತ್ತಿದೆ.

ರಷ್ಯಾ ಮತ್ತು ಪುಟಿನ್ ಇಬ್ಬರೂ ದಾಳಿ ನಡೆಸಲು ಸಿದ್ಧವಾಗಿರುವ, ಮೂಲೆಗೆ ತಳ್ಳಲ್ಪಟ್ಟ ಹುಲಿಯಂತೆ ಕಂಡುಬರುತ್ತಿದ್ದಾರೆ. ಅದು ನಡೆಸುವ ದಾಳಿ ಅತ್ಯಂತ ಘೋರವಾಗಿರುತ್ತದೆ! ರಷ್ಯಾದ ಪರಮಾಣು ಸಾಮರ್ಥ್ಯವನ್ನು ಗಮನಿಸಿ, ಪಾಶ್ಚಾತ್ಯ ಜಗತ್ತು ತಾನು ಹುಲಿಯ ಬಾಲವನ್ನು ಹೇಗೆ ತುಳಿಯಬೇಕು ಎಂದು ಮರು ಆಲೋಚಿಸುವುದು ಸೂಕ್ತವಾಗಿದೆ. ಪಾಶ್ಚಾತ್ಯ ವಿರೋಧಿಗಳ ಕುರಿತಾಗಿ ರಷ್ಯಾ ಅಸಮಾಧಾನದ, ತಿರಸ್ಕಾರದ ನೆನಪುಗಳನ್ನು ಹೊಂದಿದೆ. ಅದು ಸಾಲದೆಂಬಂತೆ, ರಷ್ಯಾ ಕನಿಷ್ಠ ಒಂದು ದಶಕದ ಹಿಂದೆ ತೋರುತ್ತಿದ್ದ ನಿಗ್ರಹವನ್ನೂ ಈಗ ತೋರುತ್ತಿಲ್ಲ!

<strong>ಗಿರೀಶ್ ಲಿಂಗಣ್ಣ</strong>
ಗಿರೀಶ್ ಲಿಂಗಣ್ಣ

ಈ ಬರಹದ ಲೇಖಕರು ರಕ್ಷಣಾ ವಿಶ್ಲೇಷಕ ಮತ್ತು ಜರ್ಮನಿಯ ADD Engineering GmbH ನ ಅಂಗಸಂಸ್ಥೆಯಾದ ಆಡ್ ಎಂಜಿನಿಯರಿಂಗ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com