ಖಲಿಸ್ತಾನಿ ಉಗ್ರ ಲಖ್ಬೀರ್ ಸಿಂಗ್ ರೋಡೆ
ಖಲಿಸ್ತಾನಿ ಉಗ್ರ ಲಖ್ಬೀರ್ ಸಿಂಗ್ ರೋಡೆ

ಖಲಿಸ್ತಾನಿ ಉಗ್ರ ಲಖ್ಬೀರ್ ಸಿಂಗ್ ರೋಡೆ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ನಿಧನ

ಪಾಕಿಸ್ತಾನದ ನಿಷೇಧಿತ ಉಗ್ರ ಸಂಘಟನೆಗಳಾದ ಇಂಟರ್‌ನ್ಯಾಶನಲ್ ಸಿಖ್ ಯೂತ್ ಫೆಡರೇಶನ್ ಮತ್ತು ಖಲಿಸ್ತಾನ್ ಲಿಬರೇಶನ್ ಫೋರ್ಸ್ (ಕೆಎಲ್‌ಎಫ್) ಮುಖ್ಯಸ್ಥ, ಖಲಿಸ್ತಾನಿ ಉಗ್ರ ಲಖ್ಬೀರ್ ಸಿಂಗ್ ರೋಡೆ ಹೃದಯಾಘಾತದಿಂದ ನಿಧನ ಹೊಂದಿದ್ದಾನೆಂದು ತಿಳಿದುಬಂದಿದೆ.
Published on

ಚಂಡೀಗಢ: ಪಾಕಿಸ್ತಾನದ ನಿಷೇಧಿತ ಉಗ್ರ ಸಂಘಟನೆಗಳಾದ ಇಂಟರ್‌ನ್ಯಾಶನಲ್ ಸಿಖ್ ಯೂತ್ ಫೆಡರೇಶನ್ ಮತ್ತು ಖಲಿಸ್ತಾನ್ ಲಿಬರೇಶನ್ ಫೋರ್ಸ್ (ಕೆಎಲ್‌ಎಫ್) ಮುಖ್ಯಸ್ಥ, ಖಲಿಸ್ತಾನಿ ಉಗ್ರ ಲಖ್ಬೀರ್ ಸಿಂಗ್ ರೋಡೆ ಹೃದಯಾಘಾತದಿಂದ ನಿಧನ ಹೊಂದಿದ್ದಾನೆಂದು ತಿಳಿದುಬಂದಿದೆ.
    
ನಿಷೇಧಿತ ಉಗ್ರ ಸಂಘಟನೆ 'ಖಲಿಸ್ತಾನ್ ಜಿಂದಾಬಾದ್ ಫೋರ್ಸ್‌'ನ ಮುಖ್ಯಸ್ಥನಾಗಿದ್ದ ರೋಡೆ, ಭಾರತದಲ್ಲಿ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಈತ ಲಾಹೋರ್‌ನಲ್ಲಿ ವಾಸವಿದ್ದ. ಖಲಿಸ್ತಾನಿ ಪ್ರತ್ಯೇಕತಾವಾದಿ ಚಳವಳಿಯ ಮಾಸ್ಟರ್ ಆಗಿದ್ದ ಭಿಂದ್ರನ್‌ವಾಲೆ ಸಾವಿನ ನಂತರ ಈತ ಪಾಕಿಸ್ತಾನ ಪರಾರಿಯಾಗಿ ಲಾಹೋರ್‌ನಲ್ಲಿ ನೆಲೆಸಿದ್ದ  ಎಂದು ಗುಪ್ತಚರ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

ಖಲಿಸ್ತಾನಿ ಚಳವಳಿಯ ಹಿಂದಿನ ಮಾಸ್ಟರ್‌ ಮೈಂಡ್ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಯ ಸೋದರಳಿಯನಾಗಿದ್ದ ಲಖ್ಬೀರ್, ಭಾರತದ 'ಮೋಸ್ಟ್ ವಾಂಟೆಡ್' ಉಗ್ರರಲ್ಲಿ ಒಬ್ಬನಾಗಿದ್ದ. ಲಖ್ಬೀರ್ ಸಿಂಗ್ ರೋಡೆ ನಿಧನದ ಸುದ್ದಿಯನ್ನು ಅವರ ಸಹೋದರ ಮತ್ತು ಮಾಜಿ ಅಕಲ್ ತಖ್ತ್ ಜತೇದಾರ್ ಖಚಿತಪಡಿಸಿದ್ದಾರೆ. ಸಹೋದರನ ಅಂತ್ಯಕ್ರಿಯೆಯನ್ನು ಸೋಮವಾರ ಪಾಕಿಸ್ತಾನದಲ್ಲಿಯೇ ನಡೆಸಲಾಗಿದೆ ಎಂದು ಹೇಳಿದ್ದಾರೆ.

ಲಖ್ಬೀರ್ ಮಧುಮೇಹದಿಂದ ಬಳಲುತ್ತಿದ್ದ. ಕೆಲ ದಿನಗಳ ಹಿಂದಷ್ಟೇ ಬೈಪಾಸ್ ಸರ್ಜರಿ ಕೂಡ ಆಗಿತ್ತು. ಕೆಲ ದಿನಗಳಿಂದ ಆತನ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿತ್ತು ಎಂದು ತಿಳಿಸಿದ್ದಾರೆ.

ಲಖ್ಬೀರ್ 1985 ರಲ್ಲಿ ಏರ್ ಇಂಡಿಯಾ ವಿಮಾನದ ಕನಿಷ್ಕ ಬಾಂಬ್ ಸ್ಫೋಟದಲ್ಲಿ ಆರೋಪಿಯಾಗಿದ್ದ ಹಿನ್ನೆಲೆಯಲ್ಲಿ ಈತನನ್ನು ಯುಎಪಿಎ ಅಡಿಯಲ್ಲಿ `ಭಯೋತ್ಪಾದಕ' ಪಟ್ಟಿಗೆ ಸೇರಿಸಲಾಗಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೂಡ 2021ರ ಲುಧಿಯಾನ ಕೋರ್ಟ್ ಸಂಕೀರ್ಣದಲ್ಲಿ ಸಂಭವಿಸಿದ ಸ್ಫೋಟದ ಪ್ರಕರಣದಲ್ಲಿ ಈತನನ್ನು ಮಾಸ್ಟರ್ ಮೈಂಡ್ ಎಂದು ಘೋಷಿಸಿತ್ತು. ಪಂಜಾಬ್‌ನಲ್ಲಿ ಶಾಂತಿ ಕದಡಲು ಪಾಕಿಸ್ತಾನದಿಂದ ಸುಧಾರಿತ ಸ್ಫೋಟಕ ಸಾಧನಗಳನ್ನು ಕಳ್ಳಸಾಗಣೆ ಮಾಡಿದ ಆರೋಪ ಕೂಡ ಈತನ ಮೇಲಿತ್ತು.

ಇದಲ್ಲದೆ, ತನ್ನ ವಶಕ್ಕೆ ನೀಡುವಂತೆ 2002 ರಲ್ಲಿ 20 ಭಯೋತ್ಪಾದಕರ ಪಟ್ಟಿಯನ್ನು ಭಾರತ ಪಾಕಿಸ್ತಾನಕ್ಕೆ ಸಲ್ಲಿಸಿತ್ತು. ಈ ಪಟ್ಟಿಯಲ್ಲಿ ಲಖ್ಬೀರ್ ಸಿಂಗ್ ಕೂಡ ಇದ್ದ ಎಂದು ತಿಳಿದುಬಂದಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಕ್ಟೋಬರ್‌ನಲ್ಲಿ ದಾಳಿ ನಡೆಸಿ ಪಂಜಾಬ್‌ನ ಮೊಗಾದಲ್ಲಿರುವ ಈತನ ಆಸ್ತಿಗಳನ್ನು ಜಪ್ತಿ ಮಾಡಿತ್ತು. 2021 ಮತ್ತು 2023 ರ ನಡುವೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ರೋಡೆ ವಿರುದ್ಧದ ಆರು ಭಯೋತ್ಪಾದಕ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿತ್ತು.

ಈತ ಭಾರತದಲ್ಲಿ ಶಾಂತಿ ಕದಡಲು ಪಾಕಿಸ್ತಾನ ಮೂಲದ ಐಎಸ್‌ಐ ಜೊತೆ ನಿಕಟವಾಗಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿತ್ತು. ಅಲ್ಲದೆ, 2020 ರಲ್ಲಿ ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಕಾಮ್ರೇಡ್ ಬಲ್ವಿಂದರ್ ಸಿಂಗ್ ಅವರ ಹತ್ಯೆ ಹಿಂದೆಯ ಮಾಸ್ಟರ್ ಮೈಂಡ್ ಕೂಡ ಲಖ್ಬೀರ್ ಆಗಿದ್ದ ಮೂಲಗಳು ತಿಳಿಸಿವೆ.

ಮಾರ್ಚ್ 22, 2002 ರಂದು ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆಗಳ ತಡೆ ಕಾಯ್ದೆ (POTA) ಅಡಿಯಲ್ಲಿ ISYF ಅನ್ನು ನಿಷೇಧಿಸಲಾಗಿದೆ. ಬ್ರಿಟನ್ ನಲ್ಲಿಯೂ ಈ ಸಂಘಟನೆಯನ್ನು ನಿಷೇಧಿಸಲಾಗಿತ್ತು. ಇದಾದ ಬಳಿಕ ಸಂಘಟನೆಯು ತನ್ನ ಹೆಸರನ್ನು ಸಿಖ್ ಫೆಡರೇಶನ್-ಯುಕೆ (ಎಸ್‌ಎಫ್‌ಯುಕೆ) ಎಂದು ಬದಲಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com