ಯಾವುದೇ ಕ್ಷಣದಲ್ಲಿ ಯುದ್ಧ, ಸಂಭಾವ್ಯ ಸೇನಾ ಕಾಳಗಕ್ಕೆ ಸಿದ್ಧರಾಗಿರಿ: ಉತ್ತರ ಕೊರಿಯಾ ಸೇನೆಗೆ ಸರ್ವಾಧಿಕಾರಿ ಕಿಮ್ ಎಚ್ಚರಿಕೆ

ಇಡೀ ಜಗತ್ತು ಹೊಸ ವರ್ಷ 2024ರ ಸ್ವಾಗತಕ್ಕೆ ಸಜ್ಜಾಗುತ್ತಿದ್ದರೆ ಅತ್ತ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮಾತ್ರ ಸಂಭಾವ್ಯ ಯುದ್ಧಕ್ಕೆ ಸಿದ್ಧರಾಗಿರುವಂತೆ ತನ್ನ ಸೇನೆಗೆ ಎಚ್ಚರಿಕೆ ನೀಡಿದ್ದಾರೆ.
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ (ಸಂಗ್ರಹ ಚಿತ್ರ)
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ (ಸಂಗ್ರಹ ಚಿತ್ರ)

ಪ್ಯೋಂಗ್ಯಾಂಗ್: ಇಡೀ ಜಗತ್ತು ಹೊಸ ವರ್ಷ 2024ರ ಸ್ವಾಗತಕ್ಕೆ ಸಜ್ಜಾಗುತ್ತಿದ್ದರೆ ಅತ್ತ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮಾತ್ರ ಸಂಭಾವ್ಯ ಯುದ್ಧಕ್ಕೆ ಸಿದ್ಧರಾಗಿರುವಂತೆ ತನ್ನ ಸೇನೆಗೆ ಎಚ್ಚರಿಕೆ ನೀಡಿದ್ದಾರೆ.

ಹೌದು.. ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ದಕ್ಷಿಣ ಕೊರಿಯಾ ಮೇಲೆ ಪರಮಾಣು ದಾಳಿಯ ಹೊಸ ಬೆದರಿಕೆವೊಡ್ಡಿದ್ದು, ಪರ್ಯಾಯ ದ್ವೀಪದಲ್ಲಿ ಯಾವುದೇ ಸಮಯದಲ್ಲಿ ಸಂಭವಿಸಬಹುದಾದ ಯುದ್ಧಕ್ಕೆ ಸನ್ನದ್ಧವಾಗಿರಲು ಮಿಲಿಟರಿ ಶಸ್ತ್ರಾಗಾರವನ್ನು ನಿರ್ಮಿಸುವಂತೆ ಆದೇಶಿಸಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

2024ಕ್ಕೆ ತನ್ನ ದೇಶದ ಮಿಲಿಟರಿ, ರಾಜಕೀಯ ಮತ್ತು ಆರ್ಥಿಕ ನೀತಿ ನಿರ್ಧಾರಗಳನ್ನು ನಿಗದಿಪಡಿಸಿದ ಪಕ್ಷದ ಐದು ದಿನಗಳ ಸಭೆಗಳ ಅಂತ್ಯದಲ್ಲಿ ಸುದೀರ್ಘ ಭಾಷಣ ಮಾಡಿದ ಕಿಮ್, ಅಮೆರಿಕ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಅಮೆರಿಕವು ವಿವಿಧ ರೀತಿಯ ಮಿಲಿಟರಿ ಬೆದರಿಕೆಯನ್ನು ಒಡ್ಡುತ್ತಿದೆ ಎಂದು ಆರೋಪಿಸಿದ ಕಿಮ್, ಅಗಾಧ ಯುದ್ಧ ಪ್ರತಿಕ್ರಿಯೆ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ತನ್ನ ಸಶಸ್ತ್ರ ಪಡೆಗಳಿಗೆ ಆದೇಶಿಸಿದ್ದು, ನಮ್ಮ ಮೇಲೆ ಆಕ್ರಮಣ ಮಾಡಲು ಶತ್ರುಗಳು ಹವಣಿಸುತ್ತಿರುವ ಹಿನ್ನೆಲೆಯಲ್ಲಿ ಕೊರಿಯಾ ಪರ್ಯಾಯ ದ್ವೀಪದಲ್ಲಿ ಯಾವುದೇ ಸಮಯದಲ್ಲಿ ಯುದ್ಧವು ಭುಗಿಲೇಳಬಹುದು ಎಂದು ಕಿಮ್ ಹೇಳಿದ್ದಾರೆ.

ಅಂತೆಯೇ ಮುಂಬರುವ ವರ್ಷದಲ್ಲಿ ಇನ್ನೂ ಮೂರು ಗೂಢಚಾರಿ ಉಪಗ್ರಹಗಳನ್ನು ಉಡಾವಣೆ ಮಾಡುವುದು, ಮಾನವರಹಿತ ಡ್ರೋನ್‌ಗಳನ್ನು ನಿರ್ಮಿಸುವುದು ಮತ್ತು ವಿದ್ಯುನ್ಮಾನ ಯುದ್ಧ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದು, ಪರಮಾಣು ಮತ್ತು ಕ್ಷಿಪಣಿ ಪಡೆಗಳನ್ನು ಬಲಪಡಿಸುವುದು ಸೇರಿದಂತೆ ಹೆಚ್ಚಿನ ಮಿಲಿಟರಿ ಅಭಿವೃದ್ಧಿಯ ಯೋಜನೆಗಳನ್ನು ಸಭೆ ಘೋಷಿಸಿದೆ ಎಂದು ಅಧಿಕೃತ ಕೊರಿಯಾ ಕೇಂದ್ರ ಸುದ್ದಿ ಸಂಸ್ಥೆ (ಕೆಸಿಎನ್‌ಎ) ತಿಳಿಸಿದೆ. ಉತ್ತರ ಕೊರಿಯಾ ಈ ವರ್ಷ ವಿಚಕ್ಷಣ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಅತ್ಯಾಧುನಿಕ ಖಂಡಾಂತರ ಕ್ಷಿಪಣಿಯನ್ನೂ(ಐಸಿಬಿಎಂ) ಪರೀಕ್ಷೆ ನಡೆಸಿದೆ. 

ಉತ್ತರ ಕೊರಿಯಾ ಯುದ್ಧ ದಾಹಕ್ಕೆ ತಡೆ ಹಾಕುವ ಪ್ರಯತ್ನದಲ್ಲಿ ಅಮೆರಿಕವು, ಈ ತಿಂಗಳ ಆರಂಭದಲ್ಲಿ ದಕ್ಷಿಣ ಕೊರಿಯಾದ ಬಂದರು ನಗರವಾದ ಬುಸಾನ್‌ನಲ್ಲಿ ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಯನ್ನು ನಿಯೋಜಿಸಿತ್ತು. ದಕ್ಷಿಣ ಕೊರಿಯಾ ಮತ್ತು ಜಪಾನ್ ಜೊತೆ ಯುದ್ಧ ತಾಲೀಮು ನಡೆಸಿದ ಅಮೆರಿಕ, ದೀರ್ಘ ಶ್ರೇಣಿಯ ಬಾಂಬರ್‌ಗಳ ಪ್ರಯೋಗ ನಡೆಸಿತ್ತು.

ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನಕ್ಕೆ ಹಿಂತಿರುಗಿದರೆ ನಿರ್ಬಂಧಗಳ ಪರಿಹಾರವನ್ನು ಗೆಲ್ಲಲು ಅಮೆರಿಕದೊಂದಿಗೆ ಶೃಂಗಸಭೆಯ ರಾಜತಾಂತ್ರಿಕತೆಯನ್ನು ಪ್ರಾರಂಭಿಸಲು ಉತ್ತೇಜಕ ಪರಮಾಣು ಸಾಮರ್ಥ್ಯವು ತನಗೆ ಮತ್ತೊಂದು ಅವಕಾಶವನ್ನು ನೀಡುತ್ತದೆ ಎಂದು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಭಾವಿಸುತ್ತಿದ್ದಾರೆ ಎಂದು ಉತ್ತರ ಕೊರಿಯಾದ ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com