ಟರ್ಕಿಯ ಮಲತ್ಯದಲ್ಲಿ ನನಾಶಗೊಂಡಿದ್ದ ಕಟ್ಟಡದಿಂದ ಮಗುವನ್ನು ರಕ್ಷಣೆ ಮಾಡಿರುವುದು.
ಟರ್ಕಿಯ ಮಲತ್ಯದಲ್ಲಿ ನನಾಶಗೊಂಡಿದ್ದ ಕಟ್ಟಡದಿಂದ ಮಗುವನ್ನು ರಕ್ಷಣೆ ಮಾಡಿರುವುದು.

ಟರ್ಕಿಯಲ್ಲಿ ಮತ್ತೆರಡು ಬಾರಿ ಪ್ರಬಲ ಕಂಪನ: ಮೃತರ ಸಂಖ್ಯೆ 7,900ಕ್ಕೆ ಏರಿಕೆ; ರಕ್ಷಣಾ ಕಾರ್ಯಾಚರಣೆಗೆ ಹಿಮಪಾತ ಅಡ್ಡಿ

ಭೂಕಂಪನದ ಮಹಾ ದುರಂತಕ್ಕೆ ಟರ್ಕಿ ಹಾಗೂ ಸಿರಿಯಾ ರಾಷ್ಟ್ರಗಳು ಅಕ್ಷರಶಃ ತತ್ತರಿಸಿ ಹೋಗಿವೆ. ಪ್ರಬಲ ಭೂಕಂಪನದಿಂದಾಗಿ ಕಟ್ಟಡಗಳು ನೆಲಸಮಗೊಂಡಿದ್ದು, ಜನರ ಆಕ್ರಂದನ, ನೆರವಾಗಿನ ಕೂಗು ಮುಗಿಲು ಮುಟ್ಟಿದೆ. ಈ ನಡುವೆ ಒಂದರ ಮೇಲೊಂದರಂತೆ ಕಂಪನಗಳು ಎದುರಾಗುತ್ತಿದ್ದು, ಜನಜೀವನವನ್ನು ಮತ್ತಷ್ಟು ಛಿದ್ರಗೊಳಿಸಿದೆ.

ಅಂಕಾರಾ(ಟರ್ಕಿ)/ಅಜ್ಮರಿನ್ (ಸಿರಿಯಾ): ಭೂಕಂಪನದ ಮಹಾ ದುರಂತಕ್ಕೆ ಟರ್ಕಿ ಹಾಗೂ ಸಿರಿಯಾ ರಾಷ್ಟ್ರಗಳು ಅಕ್ಷರಶಃ ತತ್ತರಿಸಿ ಹೋಗಿವೆ. ಪ್ರಬಲ ಭೂಕಂಪನದಿಂದಾಗಿ ಕಟ್ಟಡಗಳು ನೆಲಸಮಗೊಂಡಿದ್ದು, ಜನರ ಆಕ್ರಂದನ, ನೆರವಾಗಿನ ಕೂಗು ಮುಗಿಲು ಮುಟ್ಟಿದೆ. ಈ ನಡುವೆ ಒಂದರ ಮೇಲೊಂದರಂತೆ ಕಂಪನಗಳು ಎದುರಾಗುತ್ತಿದ್ದು, ಜನಜೀವನವನ್ನು ಮತ್ತಷ್ಟು ಛಿದ್ರಗೊಳಿಸಿದೆ.

ಈ ನಡುವೆ ಸೋಮವಾರದ ಭೂಕಂಪದಿಂದ ದೇಶ ಚೇತರಿಸಿಕೊಳ್ಳುವ ಮೊದಲೇ ಮಂಗಳವಾರ ಮತ್ತೆ ರಿಕ್ಟರ್ ಮಾಪಕದಲ್ಲಿ 7.6 ಮತ್ತು 6 ತೀವ್ರತೆ ಹೊಂದಿದ್ದ ಎರಡು ಭೂಕಂಪ ಸಂಭವಿಸಿದ್ದು, ಪತನದ ಅಂಚಿನಲ್ಲಿದ್ದ ಮತ್ತಷ್ಟು ಕಟ್ಟಡಗಳನ್ನು ನೆಲಸಮ ಮಾಡಿವೆ.

ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪನ ಪರಿಣಾಮ ಮೃತರ ಸಂಖ್ಯೆ ಕನಿಷ್ಠ 7,926ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಟರ್ಕಿಯಲ್ಲಿ ಕನಿಷ್ಠ 5,894 ಜನರು ಸಾವನ್ನಪ್ಪಿದ್ದು, 34,810 ಜನರು ಗಾಯಗೊಂಡಿದ್ದಾರೆ ಎಂದು ಟರ್ಕಿಯ ಉಪಾಧ್ಯಕ್ಷ ಫುವಾಟ್ ಒಕ್ಟೇ ಹೇಳಿದ್ದಾರೆ.

ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಮೂರು ತಿಂಗಳ ಅವಧಿಗೆ ಟರ್ಕಿಯ 10 ಪ್ರಾಂತ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ರಾಜಧಾನಿ ಅಂಕಾರಾದಲ್ಲಿರುವ ರಾಜ್ಯ ಮಾಹಿತಿ ಸಮನ್ವಯ ಕೇಂದ್ರವನ್ನು ಉದ್ದೇಶಿಸಿ ಮಾತನಾಡಿದ ಎರ್ಡೊಗನ್, "ಸಂವಿಧಾನದ 119 ನೇ ವಿಧಿ ನಮಗೆ ನೀಡಿದ ಅಧಿಕಾರದ ಆಧಾರದ ಮೇಲೆ ನಾವು ತುರ್ತು ಪರಿಸ್ಥಿತಿಯನ್ನು ಘೋಷಿಸಲು ನಿರ್ಧರಿಸಿದ್ದೇವೆ" ಎಂದು ಹೇಳಿದರು.

ದಕ್ಷಿಣ ಟರ್ಕಿಯಲ್ಲಿನ ವಿನಾಶಕಾರಿ ಭೂಕಂಪಗಳಿಂದ ನಲುಗಿರುವ 10 ಪ್ರಾಂತ್ಯಗಳನ್ನು ವಿಪತ್ತು ವಲಯವೆಂದು ಘೋಷಿಸಿದಲಾಗಿದ್ದು, ಮೂರು ತಿಂಗಳ ತುರ್ತು ಪರಿಸ್ಥಿತಿ  ಮತ್ತು 7 ದಿನಗಳ ಶೋಕಾಚರಣೆಯನ್ನು ಘೋಷಿಸಿದರು.

ಈ  ನಡುವೆ ಟರ್ಕಿ ಮತ್ತು ಸಿರಿಯಾದಲ್ಲಿನ ರಕ್ಷಣಾ ಕಾರ್ಯಾಚರಣೆಯೊಂದಿಗೆ ಕೈಜೋಡಿಸಿರುವ ಮೆಕ್ಸಿಕೋ ತನ್ನ ದೇಶದ ಪ್ರಸಿದ್ಧ ರಕ್ಷಣಾ ನಾಯಿಗಳನ್ನು ಟರ್ಕಿಗೆ ರವಾನಿಸಿದೆ ಎಂದು ಸಿಎನ್ಎನ್ ವರದಿ ಮಾಡಿದೆ.

ಮೆಕ್ಸಿಕೋ, ಉತ್ತರ ಅಮೆರಿಕಾದ ಟೆಕ್ಟೋನಿಕ್ ಪ್ಲೇಟ್‌ನ ಅಂಚಿನಲ್ಲಿರುವ ಕಾರಣ ಭೂಕಂಪಗಳು ಇಲ್ಲಿ ಹೆಚ್ಚಾಗಿ ಸಂಭವಿಸಿರುತ್ತದೆ. ಹೀಗಾಗಿ ನಾಯಿಗಳಿಗೆ ವಿಶೇಷ ತರಬೇತಿಗಳನ್ನು ನೀಡಲಾಗಿರುತ್ತದೆ.

 ಟರ್ಕಿಯಲ್ಲಿ ಮೊದಲ ಭೂಕಂಪನ ರಿಕ್ಟರ್ ಮಾಪನದಲ್ಲಿ 7.8ರಷ್ಟು ದಾಖಲಾಗಿತ್ತು. ಎರಡನೇ ಕಂಪನ 7.6 ತೀವ್ರತೆಯದ್ದಾಗಿದ್ದರೆ, ಮೂರನೆಯದ್ದು 6.0 ತೀವ್ರತೆ ಹೊಂದಿತ್ತು. ಈಗ ನಾಲ್ಕನೇ ಕಂಪನ 5.9 ರಷ್ಟು ದಾಖಲಾಗಿದೆ.

ಟರ್ಕಿ ಮತ್ತು ಸಿರಿಯಾದ ದುರಂತವು 5,600ಕ್ಕೂ ಹೆಚ್ಚು ಕಟ್ಟಡಗಳು ನೆಲಕಚ್ಚುವಂತೆ ಮಾಡಿದೆ. ಅನೇಕ ನಗರಗಳಲ್ಲಿ ಕಟ್ಟಡಗಳು ನಾಮಾವಶೇಷವಾಗಿವೆ.

ದಕ್ಷಿಣ ಟರ್ಕಿ ಮತ್ತು ಉತ್ತರ ಸಿರಿಯಾ ನಡುವಿನ 250 ಮೈಲು ಉದ್ದದ ಪ್ರದೇಶದಲ್ಲಿ ಭೂಕಂಪದಿಂದ ಭಾರೀ ಹಾನಿಯಾಗಿದ್ದು, ಅಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಮತ್ತಷ್ಟು ವಿಚಾರಗಳು ಬಹಿರಂಗಗೊಳ್ಳಲಿದೆ. ಅದರಲ್ಲೂ ಎರಡು ದೇಶಗಳಲ್ಲಿನ ಕೆಲ ಪ್ರದೇಶಗಳು ಇನ್ನೂ ಯಾರ ಸಂಪರ್ಕಕ್ಕೂ ಬಂದಿಲ್ಲ. ಇದು ಬೇರೆಲ್ಲ ವಿಷಯಗಳಿಗಿಂದ ಮತ್ತಷ್ಟು ಆತಂಕಕ್ಕೆ ಗುರಿ ಮಾಡಿದೆ. ಇದರ ಜೊತೆಗೆ ಹಿಮಪಾತ, ಭಾರೀ ಶೀತ ವಾತಾವರಣ ರಕ್ಷಣಾ ಕಾರ್ಯಾಚರಣೆಗೆ ಹಿನ್ನಡೆಯನ್ನುಂಟು ಮಾಡುತ್ತಿದೆ ಎಂದು ತಿಳಿದುಬಂದಿದೆ.

ಸಾವಿನ ಸಂಖ್ಯೆ 20,000 ದಾಟುವ ಸಾಧ್ಯತೆಗಳಿವೆ...
ಟರ್ಕಿಯೊಂದರಲ್ಲಿಯೇ ಮೃತರ ಸಂಖ್ಯೆ 5,894 ದಾಖಲಾಗಿದೆ. ಆದರೆ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದ್ದು, ಒಟ್ಟಾರೆ ಎರಡೂ ದೇಶಗಳಲ್ಲಿನ ಮರಣ ಪ್ರಮಾಣ 20,000 ದಾಟಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ.

ಸಿರಿಯಾದಲ್ಲಿ 1,440ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯುತ್ತಿದ್ದಾರೆ. ಇನ್ನು ಅವಶೇಷಗಳ ಅಡಿಗಳಲ್ಲಿ ಎಷ್ಟು ಜನರು ಸಿಲುಕಿದ್ದಾರೆ ಎಂದು ಊಹಿಸುವುದೂ ಅಸಾಧ್ಯವಾಗಿದೆ.

ಸಿರಿಯಾದ ದಶಕಗಳ ಕಾಲದ ನಾಗರಿಕ ಯುದ್ಧದಿಂದ ಸಂತ್ರಸ್ತರಾಗಿ ಟರ್ಕಿಯ ಗಾಜಿಯಾಂಟೆಪ್‌ನಲ್ಲಿ ನೆಲೆಯೂರಿರುವ ಲೆಕ್ಕವಿಲ್ಲದಷ್ಟು ನಿರಾಶ್ರಿತರ ಸಂಕಷ್ಟ ಹೇಳತೀರಾಗಿದೆ. ಇಡೀ ಪ್ರದೇಶದಲ್ಲಿ ಆಕ್ರಂದನ ಮುಗಿಲುಮುಟ್ಟಿದೆ. ಅವರಿದ್ದ ಕಟ್ಟಡ ನೆಲಸಮವಾಗಿದ್ದು, ಪಕ್ಕದಲ್ಲಿದ್ದ ಮತ್ತೊಂದು ಕಟ್ಟಡ ನೋಡನೋಡುತ್ತಿದ್ದಂತೆಯೇ ಪುಡಿಪುಡಿಯಾಗಿದ್ದು, ಅವರ ಆತಂಕವನ್ನು ಹೆಚ್ಚಿಸಿದೆ.

ಭಾರತ ಸೇರಿ 40ಕ್ಕೂ ಹೆಚ್ಚು ರಾಷ್ಟ್ರಗಳಿಂದ ನೆರವು...
ಭಾರತ, ರಷ್ಯಾ, ನ್ಯೂಜಿಲ್ಯಾಂಡ್, ಉಕ್ರೇನ್, ಅಮೆರಿಕ ಸೇರಿದಂತೆ 40ಕ್ಕೂ ಅಧಿಕ ದೇಶಗಳು ಟರ್ಕಿ ಮತ್ತು ಸಿರಿಯಾ ದೇಶಗಳಿಗೆ ತುರ್ತು ಪರಿಹಾರ ಸಾಮಗ್ರಿಗಳನ್ನು ರವಾನಿಸಿವೆ.

ಭಾರತದಿಂದ ಟರ್ಕಿಗೆ ಭೂಕಂಪ ಪರಿಹಾರದ ಮೊದಲ ಬ್ಯಾಚ್ ವಸ್ತುಗಳು ರವಾನೆಯಾಗಿವೆ. ಇದರ ಜತೆಗೆ ಎನ್‌ಡಿಆರ್‌ಎಫ್ ಪತ್ತೆ ಹಾಗೂ ರಕ್ಷಣಾ ತಂಡಗಳು, ವಿಶೇಷ ಪರಿಣತ ಶ್ವಾನದಳ, ವೈದ್ಯಕೀಯ ಪೂರೈಕೆಗಳು, ಡ್ರಿಲ್ಲಿಂಗ್ ಯಂತ್ರಗಳು ಹಾಗೂ ಇತರೆ ಅಗತ್ಯ ಸಾಧನಗಳನ್ನು ಕಳುಹಿಸಲಾಗಿದೆ ಎಂದು ವಿಶೇಶಾಂಗ ಸಚಿವಾಲಯ ತಿಳಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com