'ಮೋದಿ' ಉಪನಾಮ ವಿವಾದ: ರಾಹುಲ್ ಗಾಂಧಿ ವಿರುದ್ಧ ಬ್ರಿಟನ್ ಕೋರ್ಟ್ ನಲ್ಲಿ ದೂರು ದಾಖಲಿಸುವೆ ಎಂದ ಲಲಿತ್ ಮೋದಿ

'ಮೋದಿ' ಉಪನಾಮ ವಿವಾದ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದು ಅಲ್ಲದೆ ಬ್ರಿಟನ್ ಕೋರ್ಟ್ ನಲ್ಲಿ ದೂರು ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಲಲಿತ್ ಮೋದಿ-ರಾಹುಲ್ ಗಾಂಧಿ
ಲಲಿತ್ ಮೋದಿ-ರಾಹುಲ್ ಗಾಂಧಿ

ಲಂಡನ್: 'ಮೋದಿ' ಉಪನಾಮ ವಿವಾದ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದು ಅಲ್ಲದೆ ಬ್ರಿಟನ್ ಕೋರ್ಟ್ ನಲ್ಲಿ ದೂರು ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ರಾಹುಲ್ ಗಾಂಧಿ 'ಮೋದಿ ಉಪನಾಮ' ಮತ್ತು ಮೋದಿ ಉಪನಾಮದವರು ಪಲಾಯನವಾದಿಗಳು ಎಂದು ಕರೆದಿದ್ದಕ್ಕಾಗಿ ಬ್ರಿಟಿಷ್ ನ್ಯಾಯಾಲಯದಲ್ಲಿ ದೂರು ದಾಖಲಿಸುವುದಾಗಿ ಹೇಳಿದರು. 2019ರಲ್ಲಿ ಕರ್ನಾಟಕದ ಕೋಲಾರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ ರಫೇಲ್ ಒಪ್ಪಂದದ ಬಗ್ಗೆ ಪ್ರಧಾನಿ ಮೋದಿಯನ್ನು ಗುರಿಯಾಗಿಸಿಕೊಂಡು 59,000 ಕೋಟಿ ರೂಪಾಯಿ ಒಪ್ಪಂದದಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿದ್ದರು. ಈ ವೇಳೆ 'ಮೋದಿ ಉಪನಾಮ' ಬಗ್ಗೆ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದರು. ರಾಹುಲ್ ಗಾಂಧಿ ಎಲ್ಲ ಕಳ್ಳರಿಗೂ ಮೋದಿ ಎಂಬ ಒಂದೇ ಉಪನಾಮ ಇರುವುದು ಹೇಗೆ ಎಂದು ಪ್ರಶ್ನಿಸಿದ್ದರು.

ಈ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಸೂರತ್ ಕೋರ್ಟ್ ಎರಡು ವರ್ಷಗಳ ಶಿಕ್ಷೆ ವಿಧಿಸಿದ್ದು ತದನಂತರ ಅವರನ್ನು ಲೋಕಸಭೆಯ ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.

ಮೋದಿ ಉಪನಾಮ ವಿವಾದ ಕುರಿತಂತೆ ಲಲಿತ್ ಮೋದಿ ಒಂದರ ಹಿಂದೆ ಒಂದರಂತೆ ಹಲವಾರು ಟ್ವೀಟ್ ಗಳನ್ನು ಮಾಡಿದ್ದಾರೆ. ಗಾಂಧಿಯ ಬಹುತೇಕ ಎಲ್ಲಾ ಸಹಾಯಕರು ನಾನು ಪರಾರಿಯಾಗಿದ್ದೇನೆ ಎಂದು ಮತ್ತೆ ಮತ್ತೆ ಹೇಳುವುದನ್ನು ನಾನು ನೋಡಿದ್ದೇನೆ. ಏಕೆ? ಹೇಗೆ? ಮತ್ತು ಇಲ್ಲಿಯವರೆಗೆ ನಾನು ಯಾವಾಗ ಶಿಕ್ಷೆಗೊಳಗಾದೆ? ಪಪ್ಪು ಅಕಾ ರಾಹುಲ್ ಗಾಂಧಿಯಂತೆ ನಾನು ಶಿಕ್ಷೆಗೆ ಗುರಿಯಾಗಿಲ್ಲ. ಎಲ್ಲಾ ವಿರೋಧ ಪಕ್ಷದ ನಾಯಕರಿಗೆ ಬೇರೆ ಕೆಲಸವಿಲ್ಲ ಎಂದು ಕಿಡಿಕಾರಿದ್ದಾರೆ.

ರಾಹುಲ್ ಗಾಂಧಿಯನ್ನು ಯುಕೆ ನ್ಯಾಯಾಲಯಕ್ಕೆ ಕರೆದೊಯ್ಯಲು ನಿರ್ಧರಿಸಿದ್ದೇನೆ. ರಾಹುಲ್ ಗಾಂಧಿ ಕೋರ್ಟ್​ಗೆ ಬರಬೇಕು ಎಂದರೆ, ನಿಖರ ಸಾಕ್ಷಿಯೊಂದಿಗೇ ಬರಬೇಕು. ಅರ್ಧಂಬರ್ಧ ಮೂರ್ಖನಂತಾಗಿರುವ ರಾಹುಲ್ ಗಾಂಧಿ, ಕೋರ್ಟ್​ಗೆ ಬಂದು ನಿಂತು ತನ್ನನ್ನು ತಾನು ಸಂಪೂರ್ಣವಾಗಿ ಮೂರ್ಖನನ್ನಾಗಿಸಿಕೊಳ್ಳುವುದನ್ನು ನಾನು ನೋಡಬೇಕು ಎಂದು ಲಲಿತ್ ಮೋದಿ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com