ನ್ಯಾಯಾಂಗ ನಿಂದನೆ ಮಾಡಿದ್ದೀರಿ, ಒಂದು ಗಂಟೆಯಲ್ಲಿ ಸುಪ್ರೀಂ ಕೋರ್ಟ್ ಮುಂದೆ ಇಮ್ರಾನ್ ಖಾನ್ ಹಾಜರುಪಡಿಸಿ: ಪಾಕ್ ಸಿಜೆ

ಪಾಕಿಸ್ತಾನದ ಸುಪ್ರೀಂ ಕೋರ್ಟ್ ಇಂದು ಗುರುವಾರ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಒಂದು ಗಂಟೆಯೊಳಗೆ ಕೋರ್ಟ್ ಗೆ ಹಾಜರುಪಡಿಸುವಂತೆ ಆದೇಶಿಸಿದೆ.
ಇಮ್ರಾನ್ ಖಾನ್
ಇಮ್ರಾನ್ ಖಾನ್

ಇಸ್ಲಾಮಾಬಾದ್: ನ್ಯಾಯಾಲಯದ ರಿಜಿಸ್ಟ್ರಾರ್‌ನ ಅನುಮತಿಯಿಲ್ಲದೆ ನ್ಯಾಯಾಲಯದ ಆವರಣಕ್ಕೆ ಪ್ರವೇಶಿಸಿ ಬಂಧಿಸುವ ಮೂಲಕ ಭ್ರಷ್ಟಾಚಾರ ನಿಗ್ರಹ ಸಂಸ್ಥೆ "ನ್ಯಾಯಾಂಗ ನಿಂದನೆ" ಎಸಗಿದೆ ಎಂದು ಛೀಮಾರಿ ಹಾಕಿದ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಇಂದು ಗುರುವಾರ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಒಂದು ಗಂಟೆಯೊಳಗೆ ಕೋರ್ಟ್ ಗೆ ಹಾಜರುಪಡಿಸುವಂತೆ ಆದೇಶಿಸಿದೆ.

ಅಲ್-ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ತಮ್ಮ ಬಂಧನ ವಿರುದ್ಧ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಅಧ್ಯಕ್ಷ ಇಮ್ರಾನ್ ಖಾನ್ ಮನವಿಯನ್ನು ಆಲಿಸಿದ ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಉಮರ್ ಅತಾ ಬಂಡಿಯಾಲ್, ನ್ಯಾಯಮೂರ್ತಿ ಮುಹಮ್ಮದ್ ಅಲಿ ಮಜರ್ ಮತ್ತು ನ್ಯಾಯಮೂರ್ತಿ ಅಥರ್ ಮಿನಲ್ಲಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಇಂದು ಈ ನಿರ್ದೇಶನ ನೀಡಿದೆ.

ಲಾಹೋರ್‌ನಿಂದ ಬಂದಿದ್ದ 70 ವರ್ಷದ ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್ ಹೈಕೋರ್ಟ್‌ನ ಆವರಣದಿಂದ ಬಂಧಿಸಿದ ರೀತಿಗೆ ಪೀಠವು ವಿಚಾರಣೆಯ ಸಮಯದಲ್ಲಿ ಸಿಟ್ಟು ಹೊರಹಾಕಿದೆ. ಬಂಧನ ಕ್ರಮ ಸರಿಯಿಲ್ಲ ಎಂದು ಹೇಳಿದೆ. 90 ಮಂದಿ ನ್ಯಾಯಾಲಯದ ಆವರಣವನ್ನು ಪ್ರವೇಶಿಸಿದರೆ ಅದರ ಘನತೆ ಏನಾಗಬೇಕು, ಯಾವುದೇ ವ್ಯಕ್ತಿಯನ್ನು ನ್ಯಾಯಾಲಯದ ಆವರಣದಿಂದ ಹೇಗೆ ಬಂಧಿಸಲು ಸಾಧ್ಯ ಎಂದು ಮುಖ್ಯ ನ್ಯಾಯಾಧೀಶರು ಕೇಳಿದರು ಎಂದು ಡಾನ್ ಪತ್ರಿಕೆ ಉಲ್ಲೇಖಿಸಿದೆ.

ಈ ಹಿಂದೆ, ನ್ಯಾಯಾಲಯದ ಒಳಗೆ ವಿಧ್ವಂಸಕ ಕೃತ್ಯಕ್ಕಾಗಿ ವಕೀಲರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ, ಒಬ್ಬ ವ್ಯಕ್ತಿಯು ನ್ಯಾಯಾಲಯಕ್ಕೆ ಶರಣಾಗಿದ್ದರೆ, ಅವರನ್ನು ಬಂಧಿಸುವುದರ ಅರ್ಥವೇನು ಎಂದು ಕೇಳಿದ್ದು, ರಾಷ್ಟ್ರೀಯ ಉತ್ತರದಾಯಿತ್ವ ಬ್ಯೂರೋ (NAB) ನ್ಯಾಯಾಂಗ ನಿಂದನೆ ಎಸಗಿದೆ ಎಂದು ಹೇಳಿದೆ. 

 ಬಂಧನಕ್ಕೆ ಮುನ್ನ ನ್ಯಾಯಾಲಯದ ರಿಜಿಸ್ಟ್ರಾರ್‌ನಿಂದ ಅನುಮತಿ ಪಡೆಯಬೇಕಿತ್ತು. ನ್ಯಾಯಾಲಯದ ಸಿಬ್ಬಂದಿಯೂ ನಿಂದನೆಗೆ ಒಳಗಾಗಿದ್ದಾರೆ ಎಂದು ಹೇಳಿದರು. ನ್ಯಾಯಾಲಯವು ಮತ್ತೆ ಸೇರುವ ಪಾಕಿಸ್ತಾನ ಸ್ಥಳೀಯ ಕಾಲಮಾನ ಸಂಜೆ 4:30 ಕ್ಕೆ ಇಮ್ರಾನ್ ಖಾನ್ ಅವರನ್ನು ಹಾಜರುಪಡಿಸುವಂತೆ ಪೀಠವು NAB ಗೆ ನಿರ್ದೇಶನ ನೀಡಿದೆ.

ಇಮ್ರಾನ್ ಖಾನ್ ಹಾಜರು: ಸುಪ್ರೀಂ ಕೋರ್ಟ್ ನಿಂದ ಆದೇಶ ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಅವರನ್ನು ವಿಚಾರಣೆಗೆ ಹಾಜರುಪಡಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com