ಇಮ್ರಾನ್ ಖಾನ್ ಬಂಧನ: ಪಾಕಿಸ್ತಾನದ ಇತಿಹಾಸದಲ್ಲೇ ಮೊದಲು.. ಸೇನೆ ವಿರುದ್ಧವೇ ತಿರುಗಿ ಬಿದ್ದ ಜನ! ಸಂಘರ್ಷಕ್ಕೆ ತಾತ್ಕಾಲಿಕ ಬ್ರೇಕ್

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ ಆ ದೇಶದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿ ಮಾಡಿದ್ದು, ಸೇನೆ ಮತ್ತು ಜನರ ನಡುವಿನ ಸಂಘರ್ಷದಲ್ಲಿ ಹತ್ತಾರು ಮಂದಿ ಸಾವನ್ನಪ್ಪಿ, ಸಾವಿರಾರು ಮಂದಿ ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ.
ಇಮ್ರಾನ್ ಖಾನ್ ಮತ್ತು ಪಾಕ್ ಸಂಘರ್ಷ
ಇಮ್ರಾನ್ ಖಾನ್ ಮತ್ತು ಪಾಕ್ ಸಂಘರ್ಷ

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ ಆ ದೇಶದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿ ಮಾಡಿದ್ದು, ಸೇನೆ ಮತ್ತು ಜನರ ನಡುವಿನ ಸಂಘರ್ಷದಲ್ಲಿ ಹತ್ತಾರು ಮಂದಿ ಸಾವನ್ನಪ್ಪಿ, ಸಾವಿರಾರು ಮಂದಿ ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ.

ಇಷ್ಟಕ್ಕೂ ಪಾಕಿಸ್ತಾನದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪ್ರಜೆಗಳು ಪಾಕಿಸ್ತಾನ ಸೇನೆಯ ವಿರುದ್ಧ ತಿರುಗಿಬಿದ್ದಿದ್ದಾರೆ. ಪಾಕಿಸ್ತಾನದಲ್ಲಿ ಸರ್ಕಾರದ ವಿರುದ್ಧ ಸಾಕಷ್ಟು ಪ್ರತಿಭಟನೆಗಳು ನಡೆದಿವೆ. ಈ ಹಿಂದೆ, ಆಗಿನ ಮಿಲಿಟರಿ ಸರ್ವಾಧಿಕಾರಿಗಳಾದ ಅಯೂಬ್ ಖಾನ್ ಮತ್ತು ಜಿಯಾ-ಉಲ್ ಹಕ್ ಅಡಿಯಲ್ಲಿ ಪ್ರತಿಭಟನೆಗಳು ನಡೆದವು. ಆದರೆ ಮೇ 9 ರಂದು ಪಾಕಿಸ್ತಾನದ ಸೇನೆಯ ವಿರುದ್ಧವೇ ಬೃಹತ್ ಪ್ರತಿಭಟನೆ ನಡೆದಿದ್ದು, ಪಾಕ್ ಸೇನೆಯ ಕಚೇರಿಗಳನ್ನು ಗುರಿಯಾಗಿಸಿಕೊಂಡು ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ.

ಟಾರ್ಗೆಟ್ ಸರ್ಕಾರವೋ-ಪಾಕಿಸ್ತಾನ ಸೇನೆಯೋ?
ಅವಿಶ್ವಾಸ ನಿರ್ಣಯದ ನಂತರ ಕಳೆದ ವರ್ಷ ಏಪ್ರಿಲ್‌ನಲ್ಲಿ ಇಮ್ರಾನ್ ಖಾನ್ ಅವರನ್ನು ಪ್ರಧಾನಿ ಹುದ್ದೆಯಿಂದ ತೆಗೆದುಹಾಕಲಾಗಿತ್ತು. ಈ ಕ್ರಮದ ಹಿಂದೆ ಪಾಕಿಸ್ತಾನ ಸೇನೆಯ ಕೈವಾಡವಿದೆ ಎಂದು ಸ್ವತಃ ಇಮ್ರಾನ್ ಖಾನ್ ಆರೋಪಿಸಿದ್ದರು. ವಿಶೇಷವಾಗಿ ಅಂದಿನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಅವರನ್ನು ಇಮ್ರಾನ್ ದೂಷಿಸಿದ್ದರು. ಇದೀಗ ಶೆಹಬಾಜ್ ಷರೀಫ್ ಸರ್ಕಾರ ಇಮ್ರಾನ್ ಖಾನ್ ಅವರನ್ನು ಟಾರ್ಗೆಟ್ ಮಾಡುತ್ತಿದೆ. ಇದೀಗ ತಮ್ಮನ್ನು ಸೇನೆ ಹತ್ಯೆ ಮಾಡಲು ಸಂಚು ರೂಪಿಸಿದೆ ಎಂದು ಇಮ್ರಾನ್ ಖಾನ್ ISI ಮುಖ್ಯಸ್ಥ ಮೇಜರ್ ಜನರಲ್ ಫೈಸಲ್ ನಸೀರ್ ಅವರನ್ನು ದೂಷಿಸುತ್ತಿದ್ದು, ಇದು ಸಹಜವಾಗಿಯೇ PTI ಕಾರ್ಯಕರ್ತರು ಸೇನೆ ವಿರುದ್ಧ ತಿರುಗಿ ಬೀಳುವಂತೆ ಮಾಡಿದೆ.

ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರ ಮನೆ, ಪಾಕಿಸ್ತಾನ ಸೇನೆಯ ಕಚೇರಿಗಳು ಪ್ರತಿಭಟನಾಕಾರರ ಆಕ್ರೋಶಕ್ಕೆ ತುತ್ತಾಗಿದ್ದು, ಪ್ರತಿಭಟನೆಯಲ್ಲಿ ತೊಡಗಿರುವವರು ಪಿಟಿಐ ಕಾರ್ಯಕರ್ತರೇ ಅಥವಾ ಸಾಮಾನ್ಯ ಪ್ರಜೆಗಳೇ ಎಂಬುದು ಪ್ರತ್ಯೇಕಿಸುವುದೇ ಸೇನೆಗೆ ದೊಡ್ಡ ತಲೆನೋವಾಗಿದೆ.

ಇಮ್ರಾನ್ ಬಂಧನಕ್ಕೆ ರೇಂಜರ್ ಗಳ ನೇಮಕ: ಅಚ್ಚರಿ ಮೂಡಿಸಿದ ಪಾಕ್ ಸರ್ಕಾರದ ನಡೆ
ಇನ್ನು ಇಮ್ರಾನ್ ಖಾನ್ ಬಂಧನಕ್ಕೆ ಪಾಕಿಸ್ತಾನ ಸರ್ಕಾರ ಪಾಕಿಸ್ತಾನ ಸೇನೆಯ ವಿಶೇಷ ರೇಂಜರ್ ಗಳನ್ನು ನಿಯೋಜಿಸಿತ್ತು. ಇಮ್ರಾನ್ ಬಂಧನ ಅವಶ್ಯಕವಾಗಿದ್ದರೆ ಇಸ್ಲಾಮಾಬಾದ್ ಪೊಲೀಸರನ್ನೇ ಈ ಕಾರ್ಯಾಚರಣೆಗೆ ಬಳಸಿಕೊಳ್ಳಬಹುದಿತ್ತು.  ಆದರೆ ಪಾಕಿಸ್ತಾನ ಸರ್ಕಾರಕ್ಕೆ  ಇಸ್ಲಾಮಾಬಾದ್ ಪೊಲೀಸರು ತನ್ನ ಆದೇಶವನ್ನು ಅನುಸರಿಸುವುದಿಲ್ಲ ಎಂಬ ಭೀತಿಯಿಂದ ಬಂಧನ ಕಾರ್ಯಾಚರಣೆಗೆ ರೇಂಜರ್ ಗಳನ್ನು ಬಳಸಿಕೊಳ್ಳಲಾಗಿದೆ ಎಂಬ ಮಾತಿದೆ. ಇದೇ ವಿಚಾರವಾಗಿ ಪಾಕಿಸ್ತಾನ ಸುಪ್ರೀಂ ಕೋರ್ಟ್ ಕೂಡ ಪಾಕ್ ಸರ್ಕಾರ ಚಾಟಿ ಬೀಸಿದ್ದು, ಬಂಧನ ಕಾರ್ಯಾಚರಣೆಗೆ ಪೊಲೀಸರ ಬದಲಿಗೆ ಅರೆಸೈನಿಕ ಪಡೆ (ವಿಶೇಷ ರೇಂಜರ್ಸ್) ಬಳಸಿಕೊಂಡಿದ್ದೇಕೆ ಎಂದು ಪ್ರಶ್ನೆ ಮಾಡಿದೆ.

ಇದಕ್ಕೆ ಉತ್ತರಿಸಿರುವ ಸರ್ಕಾರ ಸೇನಾ ರೇಂಜರ್‌ಗಳು ಪೊಲೀಸರಿಗಿಂತ ಪ್ರಬಲ ಶಕ್ತಿಯುತ ಪಡೆಗಳಾಗಿದ್ದು, ಈ ಹಿಂದೆ ಇಮ್ರಾನ್ ಖಾನ್ ರನ್ನು ಲಾಹೋರ್‌ನಲ್ಲಿರುವ ಅವರ ನಿವಾಸದಿಂದ ಪೊಲೀಸರು ಬಂಧಿಸಲು ಹೋದಾಗ ಅವರಿಗೆ ಪ್ರವೇಶವನ್ನು ಅನುಮತಿಸಲಿಲ್ಲ. ಮೇ 1 ರಂದು ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ ಹೊರಡಿಸಿದ ಬಂಧನ ವಾರಂಟ್ ಆಧಾರದ ಮೇಲೆ ಇಮ್ರಾನ್ ಖಾನ್  ರನ್ನು ಬಂಧಿಸಲಾಯಿತು ಎಂದು ಸರ್ಕಾರ ಕೋರ್ಟ್ ಗೆ ಮಾಹಿತಿ ನೀಡಿದೆ.

ದ್ವೇಷ ರಾಜಕೀಯಕ್ಕೆ ಮುಂದಾಯಿತೇ ಶಹಬಾಷ್ ಷರೀಫ್ ಸರ್ಕಾರ?
ಪಾಕಿಸ್ತಾನದ ರಾಜಕೀಯ ಎಷ್ಟು ಧ್ರುವೀಕರಣಗೊಂಡಿದೆ ಎಂದರೆ ರಾಜಕಾರಣಿಗಳು ಅಧಿಕಾರಕ್ಕೆ ಬಂದ ನಂತರ ತಮ್ಮ ರಾಜಕೀಯ ವಿರೋಧಿಗಳ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾರೆ. ಇದಕ್ಕೆ ಇಮ್ರಾನ್ ಖಾನ್ ಕೂಡ ಹೊರತಾಗಿರಲಿಲ್ಲ.  ಇಮ್ರಾನ್ ಖಾನ್ ಅಧಿಕಾರದಲ್ಲಿದ್ದಾಗ ವಿಪಕ್ಷಗಳ ನಾಯಕರಾಗಿದ್ದ ನವಾಜ್ ಷರೀಫ್, ಶೆಹಬಾಜ್ ಷರೀಫ್ ಮತ್ತು ಮರ್ಯಮ್ ಷರೀಫ್ ಅವರನ್ನು ಬಂಧಿಸಲಾಗಿತ್ತು.  ಇಮ್ರಾನ್ ಬಂಧನಕ್ಕೆ ಮತ್ತೊಂದು ಕಾರಣ ಎಂದರೆ ಪ್ರಸ್ತುತ ಈಗ ಚುನಾವಣೆ ನಡೆದರೂ ಇಮ್ರಾನ್ ಖಾನ್ ಅವರ ಜನಪ್ರಿಯತೆಯಿಂದಾಗಿ ಅವರು ಗೆಲ್ಲುವ ಸಾಧ್ಯತೆಗಳಿವೆ.  ಹೀಗಾಗಿ ಚುನಾವಣೆ ಯಾವಾಗ ನಡೆದರೂ ಇಮ್ರಾನ್ ಖಾನ್ ಅವರನ್ನು ಕಣಕ್ಕಿಳಿಸಲು ಜನ ಬಯಸುತ್ತಿದ್ದಾರೆ. ಇದೇ ಕಾರಣಕ್ಕೆ ಇಮ್ರಾನ್ ಖಾನ್ ರನ್ನು ಚುನಾವಣೆಯಿಂದಲೇ ದೂರವಿಡಲು ಮತ್ತು ಅವರ ಸ್ಪರ್ಧೆಯನ್ನು ಅನರ್ಹಗೊಳಿಸಲು ಪಾಕ್ ಸರ್ಕಾರ ಮುಂದಾಗಿದೆ ಎಂದೂ ಹೇಳಲಾಗಿದೆ.

ಮತ್ತೊಂದು ಅಂತರ್ಯುದ್ಧದತ್ತ ಪಾಕಿಸ್ತಾನ?
ಇಮ್ರಾನ್ ಖಾನ್ ಅವರಿಗೆ ಪಾಕಿಸ್ತಾನದ ಭದ್ರತಾ ಸಂಸ್ಥೆಗಳಲ್ಲಿ  ಬೆಂಬಲವಿದೆಯೇ ಎಂಬ ಪ್ರಶ್ನೆ ಮೂಡುತ್ತಿದ್ದು, ಇದು ನಿಜವೇ ಆಗಿದ್ದರೆ ಪಾಕಿಸ್ತಾನವು ಮತ್ತೊಂದು ಅಂತರ್ಯುದ್ಧದತ್ತ ಸಾಗುತ್ತಿದೆ.  ಇಮ್ರಾನ್ ಖಾನ್ ಅನುಭವಿ ರಾಜಕಾರಣಿ ಮತ್ತು ಪಾಕಿಸ್ತಾನದ ಸೇನಾ ಅಧಿಕಾರಿಗಳ ಕುಟುಂಬಗಳಲ್ಲಿ ಬೆಂಬಲವನ್ನು ಹೊಂದಿದ್ದಾರೆ. ಈ ಬೆಂಬಲವೇ ಅಂತರ್ಯುದ್ಧಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ.

ಇಮ್ರಾನ್ ಖಾನ್ ಗೆ 2 ವಾರಗಳ ಕಾಲ ಜಾಮೀನು ಮುಂದುವರಿಕೆ: ಪಾಕ್ ಅಂತರ್ಯುದ್ಧಕ್ಕೆ ತಾತ್ಕಾಲಿಕ ಬ್ರೇಕ್
ಪ್ರಸ್ತುತ ಇಮ್ರಾನ್ ಖಾನ್ ಗೆ ಸುಪ್ರೀಂ ಕೋರ್ಟ್ 2 ವಾರಗಳ ಕಾಲ ಜಾಮೀನು ವಿಸ್ತರಣೆ ಮಾಡಿದ್ದು, ಆ ಮೂಲಕ ಪಾಕಿಸ್ತಾನ ಅಂತರ್ಯುದ್ಧಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದೆ. ಆದಾಗ್ಯೂ ಪಾಕಿಸ್ತಾನದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಇಮ್ರಾನ್ ಖಾನ್ ಬಂಧನವಾದರೆ ಮತ್ತೆ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆಯೂ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com