ಗಾಜಾ ವಿಶ್ವದ ಅತಿದೊಡ್ಡ ಭಯೋತ್ಪಾದಕ ಸಂಕೀರ್ಣ, ಬೇರು ಸಹಿತ ಕಿತ್ತೊಗೆಯಬೇಕು: ಇಸ್ರೇಲ್

ಗಾಜಾ ನಗರ ವಿಶ್ವದ ಅತೀ ದೊಡ್ಡ ಭಯೋತ್ಪಾದಕ ಸಂಕೀರ್ಣವಾಗಿದ್ದು ಅದನ್ನು ಬೇರು ಸಹಿತ ಕಿತ್ತು ಹಾಕಬೇಕು ಎಂದು ಇಸ್ರೇಲ್ ಹೇಳಿದೆ.
ಗಾಜಾ - ಇಸ್ರೇಲ್ ಗಡಿ (ಸಂಗ್ರಹ ಚಿತ್ರ)
ಗಾಜಾ - ಇಸ್ರೇಲ್ ಗಡಿ (ಸಂಗ್ರಹ ಚಿತ್ರ)

ಟೆಲ್ ಅವೀವ್: ಗಾಜಾ ನಗರ ವಿಶ್ವದ ಅತೀ ದೊಡ್ಡ ಭಯೋತ್ಪಾದಕ ಸಂಕೀರ್ಣವಾಗಿದ್ದು ಅದನ್ನು ಬೇರು ಸಹಿತ ಕಿತ್ತು ಹಾಕಬೇಕು ಎಂದು ಇಸ್ರೇಲ್ ಹೇಳಿದೆ.

ಗಾಜಾಪಟ್ಟಿಯಲ್ಲಿ ಇಸ್ರೇಲ್ ಸೇನಾ ಪಡೆಗಳು ದಾಳಿ ತೀವ್ರಗೊಳಿಸಿರುವಂತೆಯೇ ಅತ್ತ ಅಮೆರಿಕದಲ್ಲಿರುವ ಇಸ್ರೇಲಿ ರಾಯಭಾರಿ ಮೈಕೆಲ್ ಹೆರ್ಜೋಗ್ ಅವರು ಗಾಜಾ ನಗರ ವಿಶ್ವದ ಅತೀ ದೊಡ್ಡ ಭಯೋತ್ಪಾದಕ ಸಂಕೀರ್ಣವಾಗಿದ್ದು ಅದನ್ನು ಬೇರು ಸಹಿತ ಕಿತ್ತು ಹಾಕಬೇಕು ಎಂದು ಹೇಳಿದ್ದಾರೆ.

ಸಿಬಿಎಸ್‌ನ "ಫೇಸ್ ದಿ ನೇಷನ್" ಸಂದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗಾಜಾ ವಿಶ್ವದ "ಅತಿದೊಡ್ಡ ಭಯೋತ್ಪಾದಕ ಸಂಕೀರ್ಣ". ನೂರಾರು ಉಗ್ರರು ಮತ್ತು ಸಾವಿರಾರು ರಾಕೆಟ್‌ಗಳು, ಇತರ ಶಸ್ತ್ರಾಸ್ತ್ರಗಳ ಜೊತೆಗೆ  310 ಮೈಲುಗಳು (500 ಕಿಲೋಮೀಟರ್) ಭೂಗತ ಸುರಂಗಗಳು ಗಾಜಾವನ್ನು ಹಮಾಸ್ ಉಗ್ರರ ಸ್ವರ್ಗವನ್ನಾಗಿಸಿದೆ. ಇದನ್ನು ನಾವು ವಿರೋಧಿಸುತ್ತೇವೆ. ಮತ್ತು ನಾವು ಅದನ್ನು ಬೇರುಸಹಿತ ಕಿತ್ತುಹಾಕಬೇಕು, ಏಕೆಂದರೆ ನಾವು ಮಾಡದಿದ್ದರೆ, ಅವರು ಮತ್ತೆ ಮತ್ತೆ ದಾಳಿ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.

ಗಾಜಾದ ಪ್ರಮುಖ 3 ಆಸ್ಪತ್ರೆಗಳ ಸುತ್ತುವರೆದ ಇಸ್ರೇಲ್ ಸೇನೆ
ಇನ್ನು ಗಾಜಾದಲ್ಲಿ ದಾಳಿ ತೀವ್ರಗೊಳಿಸಿರುವ ಇಸ್ರೇಲ್ ಸೇನೆ ಹಮಾಸ್ ಉಗ್ರ ಸಂಘಟನೆಯ ಶಂಕಿತ ಪ್ರಧಾನ ಕಚೇರಿಗಳು ಎಂದು ಹೇಳಲಾಗುತ್ತಿರುವ ಶಿಫಾ, ಅಲ್-ಕುಡ್ಸ್ ಮತ್ತು ಇಂಡೋನೇಷಿಯನ್ ಆಸ್ಪತ್ರೆಗಳನ್ನು ಸುತ್ತುವರೆದಿದೆ. ಆದರೆ ಈ ಮೂರು ಆಸ್ಪತ್ರೆಗಳ ಮೇಲಿನ ದಾಳಿ ಕುರಿತು ಮಾಹಿತಿ ಲಭ್ಯವಾಗಿಲ್ಲವಾದರೂ, ಹಮಾಸ್ ತನ್ನ ಚಟುವಟಿಕೆಗಳಿಗೆ ಕತಾರಿ-ನಿಧಿಯ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ ಆಸ್ಪತ್ರೆಯನ್ನು ಬಳಸುತ್ತಿದೆ ಎಂಬುದಕ್ಕೆ ಇಸ್ರೇಲ್ ಸೇನೆ ಪುರಾವೆಗಳನ್ನು ಪ್ರಸ್ತುತಪಡಿಸಿದೆ.

ಇದು ಇಸ್ರೇಲಿ ಸೈನಿಕರು ಬಹಿರಂಗಪಡಿಸಿದ ಭಯೋತ್ಪಾದಕ ಸುರಂಗ ಪ್ರವೇಶದ ದೃಶ್ಯ ಪುರಾವೆಯಾಗಿದ್ದು, ಆಸ್ಪತ್ರೆಯಿಂದ ಇಸ್ರೇಲಿ ಸೈನಿಕರ ಮೇಲೆ ಹಮಾಸ್ ಉಗ್ರರು ಗುಂಡು ಹಾರಿಸುವ ವೀಡಿಯೊವನ್ನು ಇಸ್ರೇಲ್ ಸೇನೆ ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿದೆ. ಮೂಲಗಳ ಪ್ರಕಾರ ಈಗಾಗಲೇ ಅಸ್ತಿತ್ವದಲ್ಲಿರುವ ಭೂಗತ ಭಯೋತ್ಪಾದಕ ಸೌಲಭ್ಯಗಳ ಮೇಲೆ 2016 ರಲ್ಲಿ ನಿರ್ಮಿಸಲಾದ ಇಂಡೋನೇಷಿಯನ್ ಆಸ್ಪತ್ರೆಯಿಂದ 75 ಮೀಟರ್ ದೂರದಲ್ಲಿರುವ ಹಮಾಸ್ ರಾಕೆಟ್ ಉಡಾವಣಾ ಪ್ಯಾಡ್‌ಗಳ ತುಣುಕನ್ನು ಇಸ್ರೇಲ್ ಸೇನೆ ತನ್ನ ವಿಡಿಯೋದಲ್ಲಿ ತೋರಿಸಿದೆ.

ಆಸ್ಪತ್ರೆ ಕಾಂಪೌಂಡ್ ನಿಂದ ಇಸ್ರೇಲ್ ಸೇನೆಯತ್ತ ಹಮಾಸ್ ಉಗ್ರರಿಂದ ರಾಕೆಟ್ ಉಡಾವಣೆ
ಹಮಾಸ್‌ನ ಮುಖ್ಯ ಕೇಂದ್ರ ಕಛೇರಿಯು ಉತ್ತರ ಗಾಜಾ ಪಟ್ಟಿಯಲ್ಲಿರುವ ಬೃಹತ್ ಶಿಫಾ ಆಸ್ಪತ್ರೆ ಸಂಕೀರ್ಣದ ಅಡಿಯಲ್ಲಿದೆ. ತಾಜ್‌ಪಿಟ್ ಪ್ರೆಸ್ ಸರ್ವಿಸ್ ವರದಿ ಮಾಡಿದಂತೆ, ಹಮಾಸ್ ಶಿಫಾ ಆಸ್ಪತ್ರೆಯನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಿದೆ. ಯುದ್ಧದ ಸಮಯದಲ್ಲಿ ಇಸ್ರೇಲ್ ಸೇನೆ ಆಸ್ಪತ್ರೆಯ ಮೇಲೆ ದಾಳಿ ಮಾಡಲು ಧೈರ್ಯ ಮಾಡುವುದಿಲ್ಲ ಎಂದು ತಿಳಿದ ಹಮಾಸ್ ನಾಯಕರು ಅಲ್ಲಿ ಅಡಗಿಕೊಂಡಿದ್ದಾರೆ. ಅದರ ಕಾಂಪೌಂಡ್‌ನಿಂದ ರಾಕೆಟ್‌ಗಳನ್ನು ಉಡಾಯಿಸುತ್ತಿದ್ದಾರೆ. ಕಟ್ಟಡದ ಹೃದಯಭಾಗದಲ್ಲಿರುವ ರೋಗಿಗಳನ್ನು ಒತ್ತೆಯಾಳುಗಳಾಗಿರಿಸಿಕೊಂಡು ತಾವು ರಕ್ಷಣೆ ಪಡೆಯುತ್ತಿದ್ದಾರೆ. ಹತ್ತಿರದ ಸ್ಥಳಗಳಿಗೆ ಶಿಫಾ ಆಸ್ಪತ್ರೆಯನ್ನು ಸಂಪರ್ಕಿಸುವ ಸುರಂಗಗಳನ್ನು ಕೊರೆಯುತ್ತಿದ್ದಾರೆ ಎಂದು ಇಸ್ರೇಲ್ ಸೇನೆ ಹೇಳಿದೆ.

ಶಿಫಾ ಆಸ್ಪತ್ರೆ ಸುರಂಗದಲ್ಲಿ ಅರ್ಧ ಮಿಲಿಯನ್ ಲೀಟರ್ ಇಂಧನ
ಇದೇ ವೇಳೆ ಶುಕ್ರವಾರ ಇಸ್ರೇಲ್ ಸೇನೆ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ, ಹಮಾಸ್ ಸಂಘಟನೆ ಶಿಫಾ ಆಸ್ಪತ್ರೆ ಸುರಂಗದಲ್ಲಿ ಕನಿಷ್ಠ ಅರ್ಧ ಮಿಲಿಯನ್ ಲೀಟರ್ ಇಂಧನವನ್ನು ಸಂಗ್ರಹಿಸಿಟ್ಟಿದೆ ಎಂದು ಆರೋಪಿಸಿದೆ. ತನ್ನ ವಾದಕ್ಕೆ ಪೂರಕವಾಗುವ ಫೋನ್ ಕರೆಯ ರೆಕಾರ್ಡಿಂಗ್ ಅನ್ನು ಬಿಡುಗಡೆ ಮಾಡಿದೆ. ಅಲ್ಲದೆ ತಮ್ಮ ಭಯೋತ್ಪಾದಕ ಮೂಲಸೌಕರ್ಯವನ್ನು ಮರೆಮಾಚಲು ಆಸ್ಪತ್ರೆಗಳನ್ನು ಬಳಕೆ ಮಾಡುತ್ತಿರುವುದನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಇದು ಕೊನೆಗೊಳ್ಳಬೇಕು. ಇದು ಯುದ್ಧಾಪರಾಧ ಎಂದು ಹಮಾಸ್ ವಿರುದ್ಧ ಕಿಡಿಕಾರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com