ಆಘಾತಕಾರಿ ದಾಳಿಗಳ ಮೂಲಕ ಇಸ್ರೇಲ್ ಅನ್ನೇ ಕಂಗೆಡಿಸಿದ 'ಹಮಾಸ್' ಹಿನ್ನೆಲೆ ಏನು?

ಅಕ್ಟೋಬರ್ 7ರಂದು ಬೆಳಗ್ಗೆ ಸರಿಸುಮಾರು 4000ಕ್ಕೂ ಹೆಚ್ಚು ರಾಕೆಟ್ ಗಳನ್ನು ಇಸ್ರೇಲ್ ಮೇಲೆ ಸುರಿಸಲಾಯಿತು. ಇದು ಬಲಿಷ್ಠ ಐರನ್ ಡೋಮ್ ವಾಯು ರಕ್ಷಣಾ ವ್ಯವಸ್ಥೆಯನ್ನೇ ಮೀರಿಸಿತ್ತು.
ಹಮಾಸ್ ಉಗ್ರ ಸಂಘಟನೆ
ಹಮಾಸ್ ಉಗ್ರ ಸಂಘಟನೆ

ಅಕ್ಟೋಬರ್ 7ರಂದು ಬೆಳಗ್ಗೆ ಸರಿಸುಮಾರು 4000ಕ್ಕೂ ಹೆಚ್ಚು ರಾಕೆಟ್ ಗಳನ್ನು ಇಸ್ರೇಲ್ ಮೇಲೆ ಸುರಿಸಲಾಯಿತು. ಇದು ಬಲಿಷ್ಠ ಐರನ್ ಡೋಮ್ ವಾಯು ರಕ್ಷಣಾ ವ್ಯವಸ್ಥೆಯನ್ನೇ ಮೀರಿಸಿತ್ತು. ಇದರ ನಡುವೆ ಅನೇಕ ಭಯೋತ್ಪಾದಕರು ಗಾಜಾ ಪಟ್ಟಿಯಿಂದ ಗಡಿ ಬೇಲಿ ದಾಟಿ ಇಸ್ರೇಲ್‌ಗೆ ನುಗ್ಗಿ ನಾಗರಿಕರು ಮತ್ತು ಸೈನಿಕರ ಮೇಲೆ ದಾಳಿ ಮಾಡಿದ್ದು ಅಲ್ಲದೆ ಅವರನ್ನು ಎಳೆದುಕೊಂಡು ಹೋಗಿ ಒತ್ತೆಯಾಳುಗಳಾಗಿ ಮಾಡಿಕೊಂಡಿದ್ದಾರೆ.

ಶನಿವಾರ ಬೆಳಗಿನ ಜಾವದಲ್ಲಿ ಸ್ಫೋಟಕಗಳೊಂದಿಗೆ ಇಸ್ರೇಲ್ ಗಡಿಯನ್ನು ದಾಟಿದ 1,000ಕ್ಕೂ ಹೆಚ್ಚು ಶಸ್ತ್ರಸರ್ಜಿತ ಬಂದೂಕುಧಾರಿಗಳು ಗಂಟೆಗಟ್ಟಲೆ ದಾಳಿ ಮಾಡಿದರು. ನಾಗರಿಕರ ಮೇಲೆ ಗುಂಡು ಹಾರಿಸಿದರು. ಅಲ್ಲದೆ ನಗರದ ಹೆದ್ದಾರಿಗಳಲ್ಲಿ ಮತ್ತು ಮರುಭೂಮಿಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದ ಟೆಕ್ನೋ ಸಂಗೀತ ಉತ್ಸವದ ಮೇಲೂ ಗುಂಡಿನ ದಾಳಿ ಸಿಕ್ಕಸಿಕ್ಕವನ್ನು ಹತ್ಯೆ ಮಾಡಿದರು.

ಈ ದಾಳಿಯ ಹಿಂದಿರುವ ಸಂಘಟನೆಯೇ ಹಮಾಸ್. ಇದು ಪ್ಯಾಲೇಸ್ಟಿನ್ ಉಗ್ರಗಾಮಿ ಗುಂಪು. ಇದರ ಏಕೈಕ ಉದ್ದೇಶ ಇಸ್ರೇಲ್ ಅನ್ನು ಸಂಪೂರ್ಣವಾಗಿ ನಾಶ ಮಾಡಿ, ಪ್ಯಾಲೆಸ್ಟೀನ್ ದೇಶ ಕಟ್ಟುವುದು. ಇನ್ನು ಹಮಾಸ್ ಸಂಘಟನೆಯ ದಾಳಿಯು 1973ರ ಈಜಿಪ್ಟ್ ಮತ್ತು ಸಿರಿಯಾದೊಂದಿಗಿನ ಯುದ್ಧಕ್ಕಿಂತ ಭೀಕರವಾಗಿದ್ದು ಸಾವಿನ ಸಂಖ್ಯೆಯನ್ನು ಹೆಚ್ಚಿಸಿದೆ. 

ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷವು ಈಗಾಗಲೇ ಕನಿಷ್ಠ 1,600 ಜೀವಗಳನ್ನು ಬಲಿ ತೆಗೆದುಕೊಂಡಿದೆ. ಇನ್ನು ದಶಕಗಳಲ್ಲಿ ಮೊದಲ ಬಾರಿಗೆ ಇಸ್ರೇಲ್‌ನ ಬೀದಿಗಳಲ್ಲಿ ಗುಂಡಿನ ಕಾಳಗ ನಡೆದಿದೆ. ಇದರಿಂದ ಕೆರಳಿದ ಇಸ್ರೇಲ್ ನ ಪ್ರತೀಕಾರದ ದಾಳಿ ಗಾಜಾ ಪಟ್ಟಿಯನ್ನು ಛಿದ್ರ ಛಿದ್ರವನ್ನಾಗಿಸುತ್ತಿದೆ. ಇದರ ಮಧ್ಯೆ ಇಸ್ರೇಲ್ ವೈಮಾನಿಕ ದಾಳಿ ನಿಲ್ಲಿಸದಿದ್ದರೆ ಅಂದಾಜು 150 ಒತ್ತೆಯಾಳುಗಳನ್ನು ಕೊಲ್ಲುವುದಾಗಿ ಹಮಾಸ್ ಎಚ್ಚರಿಕೆ ನೀಡಿದೆ. 

ಇಸ್ರೇಲ್, ಈಜಿಪ್ಟ್ ಮತ್ತು ಮೆಡಿಟರೇನಿಯನ್ ಸಮುದ್ರದಿಂದ ಸುತ್ತುವರೆದಿರುವ ಗಾಜಾ ಪಟ್ಟಿ 365 ಚದರ ಕಿಲೋಮೀಟರ್‌ಗಳಷ್ಟು ಪ್ರದೇಶವನ್ನು ಹೊಂದಿದೆ. ಇಲ್ಲಿ 20 ಲಕ್ಷಕ್ಕೂ ಹೆಚ್ಚು ಪ್ಯಾಲೆಸ್ತಿನಿಯರು ವಾಸಿಸುತ್ತಿದ್ದಾರೆ. ಹಮಾಸ್ ಗೆ ಇಸ್ಮಾಯಿಲ್ ಹನಿಯೆಹ್ ನೇತೃತ್ವ ವಹಿಸಿದ್ದು ಪ್ಯಾಲೇಸ್ಟಿನಿಯನ್ ಪ್ರಾಂತ್ಯಗಳಲ್ಲಿನ ಎರಡು ಪ್ರಮುಖ ರಾಜಕೀಯ ಬಣಗಳಲ್ಲಿ ಇದು ಒಂದಾಗಿದೆ.

ಹಮಾಸ್ ಹುಟ್ಟು
ಹಮಾಸ್‌ನ ಮೂಲವನ್ನು ಮುಸ್ಲಿಂ ಬ್ರದರ್‌ಹುಡ್‌ನ ಶಾಖೆಯಲ್ಲಿ ಗುರುತಿಸಬಹುದು. ಈಜಿಪ್ಟ್‌ನಲ್ಲಿ ಹುಟ್ಟಿಕೊಂಡ ಇಸ್ಲಾಮಿಸ್ಟ್ ರಾಜಕೀಯ ಮತ್ತು ಸಾಮಾಜಿಕ ಚಳುವಳಿ 1940 ಮತ್ತು 1970ರ ದಶಕಗಳಲ್ಲಿ ಪ್ಯಾಲೆಸ್ಟೈನ್‌ನಲ್ಲಿ ಸಕ್ರಿಯವಾಗಿತ್ತು. 1987ರಲ್ಲಿ ಇಮಾಮ್ ಶೇಖ್ ಅಹ್ಮದ್ ಯಾಸಿನ್ ಮತ್ತು ಆತನ ಸಹಾಯಕ ಅಬ್ದುಲ್ ಅಜೀಜ್ ಅಲ್-ರಾಂಟಿಸಿ ಹಮಾಸ್ ಅನ್ನು ಸ್ಥಾಪಿಸಲು ಪ್ಯಾಲೆಸ್ಟೈನ್‌ನಲ್ಲಿ ಮುಸ್ಲಿಂ ಬ್ರದರ್‌ಹುಡ್‌ನ ಒಂದು ಭಾಗವನ್ನು ಹೊರಹಾಕಿತ್ತು.

ಇಸ್ರೇಲ್ ವಿರುದ್ಧ ಸಶಸ್ತ್ರ ಹೋರಾಟವನ್ನು ಮುನ್ನಡೆಸುವ ಗುರಿಯೊಂದಿಗೆ ಅಂತಿಮವಾಗಿ ಪ್ಯಾಲೆಸ್ಟೈನ್ ಅನ್ನು ವಿಮೋಚನೆಗೊಳಿಸುವುದು ಹಮಾಸ್ ನ ಉದ್ದೇಶವಾಗಿದೆ. ಹಮಾಸ್ ಇಸ್ರೇಲ್‌ ಒಂದು ದೇಶ ಎಂದು ಗುರುತಿಸಿಲ್ಲ. ಇಸ್ರೇಲ್‌ನೊಂದಿಗಿನ ಯಾವುದೇ ರಾಜಿ ಅಥವಾ ಮಾತುಕತೆಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ಸಶಸ್ತ್ರ ಹೋರಾಟದ ಮೂಲಕ ಪ್ಯಾಲೆಸ್ಟೈನ್ ಅನ್ನು ವಿಮೋಚನೆಗೊಳಿಸುವ ಉದ್ದೇವನ್ನು ಹಮಾಸ್ ಪ್ರತಿಪಾದಿಸುತ್ತದೆ.

1990ರ ದಶಕದಲ್ಲಿ ಪ್ಯಾಲೆಸ್ಟೈನ್ ಲಿಬರೇಶನ್ ಆರ್ಗನೈಸೇಶನ್(PLO) ಮತ್ತು ಇಸ್ರೇಲ್ ಶಾಂತಿ ಮಾತುಕತೆ ಪ್ರಕ್ರಿಯೆಯಲ್ಲಿ ತೊಡಗಿದ್ದವು. ಅಂದು ಕೆಲವು ಪ್ಯಾಲೆಸ್ತೀನಿಯನ್ನರನ್ನು ದೂರವಿಡಲಾಗಿತ್ತು. ಇದು ಪರ್ಯಾಯವಾಗಿ ಹಮಾಸ್‌ನ ಜನಪ್ರಿಯತೆಯನ್ನು ಹೆಚ್ಚಿಸಿತು. ಅಲ್ಲದೆ ಹಮಾಸ್ 1996ರ ಪ್ಯಾಲೇಸ್ಟಿನಿಯನ್ ಶಾಸಕಾಂಗ ಚುನಾವಣೆಯಲ್ಲೂ ಭಾಗವಹಿಸಿತ್ತು. ಇದು ಅದರ ಬೆಳವಣಿಗೆಯನ್ನು ಎತ್ತಿ ತೋರಿಸುತ್ತದೆ.

2006ರಲ್ಲಿ ಫತಾಹ್ ಭ್ರಷ್ಟಾಚಾರದ ಬಗ್ಗೆ ಟೀಕಿಸಿ ಹಮಾಸ್ ಅಭಿಯಾನ ನಡೆಸಿತ್ತು. ಅಂದಿನ ಚುನಾವಣೆಯಲ್ಲಿ 132 ಸ್ಥಾನಗಳಲ್ಲಿ 74 ಸ್ಥಾನಗಳನ್ನು ಪಡೆದು, ಹಮಾಸ್ ಮತ್ತೊಮ್ಮೆ ಪ್ಯಾಲೇಸ್ಟಿನಿಯನ್ ಸಂಸತ್ತಿನ ಚುನಾವಣೆಯಲ್ಲಿ ಆಘಾತಕಾರಿ ವಿಜಯವನ್ನು ಗಳಿಸಿತು. ಆದರೆ ಇಸ್ರೇಲ್, ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ಯೂನಿಯನ್ ಹಮಾಸ್ ಸರ್ಕಾರವನ್ನು ಗುರುತಿಸಲು ನಿರಾಕರಿಸಿದವು.

ಅದರ ಮುಂದಿನ ವರ್ಷದಲ್ಲಿ ಹಮಾಸ್ ಮತ್ತು ಫತಾಹ್ ನಡುವಿನ ಉದ್ವಿಗ್ನತೆಗಳು ಗಾಜಾದಲ್ಲಿ ರಕ್ತಸಿಕ್ತ ಪ್ಯಾಲೇಸ್ಟಿನಿಯನ್ ಅಂತರ್ಯುದ್ಧವಾಗಿ ಹೊರಹೊಮ್ಮಿತು. ಇದು ಹಮಾಸ್ ಗಾಜಾಪಟ್ಟಿಯಲ್ಲಿ ನಿಯಂತ್ರಣವನ್ನು ವಶಪಡಿಸಿಕೊಳ್ಳುವುದರೊಂದಿಗೆ ಕೊನೆಗೊಂಡಿತು. ಅಂದಿನಿಂದ, ಹಮಾಸ್ ಗಾಜಾ ಪಟ್ಟಿಯನ್ನು ವಾಸ್ತವಿಕ ಸರ್ಕಾರವಾಗಿ ಆಳುತ್ತಿದೆ. 2007ರಲ್ಲಿ ಗಾಜಾದ ಮೇಲೆ ದಿಗ್ಬಂಧನವನ್ನು ಇಸ್ರೇಲ್ ಹೇರಿತು. ಹಮಾಸ್ ಅನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಸರಕುಗಳು ಮತ್ತು ಜನರ ಓಡಾಟವನ್ನು ನಿರ್ಬಂಧಿಸಿತು.

ಇನ್ನು 2008-09, 2012 ಮತ್ತು 2014ರಲ್ಲಿ ಇಸ್ರೇಲ್‌ನೊಂದಿಗೆ ಮೂರು ಪ್ರಮುಖ ಯುದ್ಧಗಳನ್ನು ಹಮಾಸ್ ನಡೆಸಿತು. ಹಮಾಸ್ ತನ್ನ ರಾಕೆಟ್ ಬಂಡಾರವನ್ನು ಹೆಚ್ಚಿಸಿತು. ಅಲ್ಲದೆ ಗಾಜಾದಲ್ಲಿ ಸುರಂಗ ಮೂಲಸೌಕರ್ಯ ನಿರ್ಮಿಸುವುದನ್ನು ಮುಂದುವರೆಸಿತು. ವೆಸ್ಟ್ ಬ್ಯಾಂಕ್ ನಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿತು. ಗಾಜಾದಲ್ಲಿನ ಹಮಾಸ್ ಆಡಳಿತವನ್ನು ಮಾನವ ಹಕ್ಕುಗಳ ಗುಂಪುಗಳು ಸರ್ವಾಧಿಕಾರಿ ಎಂದು ಟೀಕಿಸಿವೆ.

ಹಮಾಸ್ ಬೆಂಬಲಕ್ಕೆ ನಿಂತಿರುವ ದೇಶಗಳು
ಆರಂಭದಲ್ಲಿ ಹಮಾಸ್‌ಗೆ ಸೌದಿ ಅರೇಬಿಯಾ ಮತ್ತು ಗಲ್ಫ್ ರಾಷ್ಟ್ರಗಳು ಬೆಂಬಲ ನೀಡಿದ್ದವು. ಆದರೆ ಈಗ ಹಮಾಸ್‌ ಗೆ ಇರಾನ್, ಕತಾರ್ ಮತ್ತು ಟರ್ಕಿ ಮಿತ್ರರಾಷ್ಟ್ರಗಳಾಗಿದ್ದು ಆರ್ಥಿಕ ಮತ್ತು ಮಿಲಿಟರಿ ಬೆಂಬಲವನ್ನು ನೀಡುತ್ತಿವೆ. ಏತನ್ಮಧ್ಯೆ, 2013ರಿಂದ ಹಮಾಸ್‌ನ ಗಡಿಯಾಚೆಗಿನ ಚಟುವಟಿಕೆಗಳನ್ನು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ  ಭೇದಿಸುತ್ತಿದ್ದಾರೆ. ಸಿರಿಯಾದ ಅಂತರ್ಯುದ್ಧದ ಕುರಿತಾದ ಭಿನ್ನಾಭಿಪ್ರಾಯಗಳಿಂದಾಗಿ ಸಿರಿಯಾ ಮತ್ತು ಇರಾನ್‌ ನೊಂದಿಗಿನ ಹಮಾಸ್‌ನ ಸಂಬಂಧಗಳು ಹಳಸಿತ್ತು.

ಇತ್ತೀಚಿನ ವರ್ಷಗಳಲ್ಲಿ ದಿಗ್ಬಂಧನಗಳಿಂದ ಗಾಜಾದಲ್ಲಿ ಹದಗೆಡುತ್ತಿರುವ ಮಾನವೀಯ ಪರಿಸ್ಥಿತಿಗಳಿಂದಾಗಿ ಹಮಾಸ್ ಆರ್ಥಿಕ ಅಸಮಾಧಾನವನ್ನು ಎದುರಿಸುತ್ತಿದೆ. ಆದಾಗ್ಯೂ, ಇಸ್ರೇಲ್‌ ವಿರುದ್ಧದ ದಾಳಿಗಳಿಂದಾಗಿ ಹಮಾಸ್ ಅನೇಕ ಗಾಜಾ ನಿವಾಸಿಗಳ ಬೆಂಬಲವನ್ನು ಪಡೆಯುತ್ತಿದೆ. ಆದರೆ ಫತಾಹ್ ಜೊತೆ ರಾಜಿ ಮಾಡಿಕೊಳ್ಳುವುದು ಕೂಡ ಅಸ್ಪಷ್ಟವಾಗಿಯೇ ಉಳಿದಿದೆ.

ಗಾಜಾದಲ್ಲಿ ಆಡಳಿತ ನಡೆಸುತ್ತಿರುವ ಹಮಾಸ್ ಇಸ್ರೇಲ್‌ಗೆ ಪ್ರಮುಖ ಭದ್ರತಾ ಬೆದರಿಕೆಯನ್ನು ಒಡ್ಡುತ್ತಿದ್ದು ವೆಸ್ಟ್ ಬ್ಯಾಂಕ್ ನಲ್ಲೂ ಬಲವನ್ನು ಉಳಿಸಿಕೊಂಡಿದೆ. ಉಗ್ರಗಾಮಿ ಗುಂಪಿನೊಂದಿಗೆ ವ್ಯವಹರಿಸುವುದು ಇಸ್ರೇಲಿ ರಾಜಕೀಯದಲ್ಲಿ ಭಾರಿ ವಿಭಜನೆಯ ವಿಷಯವಾಗಿ ಉಳಿದಿದೆ.

ಧನಸಹಾಯ
ಇಸ್ರೇಲ್‌ ತನ್ನ ಸುತ್ತಲು ಅನೇಕ ಮುಸ್ಲಿಂ ದೇಶಗಳನ್ನು ಹೊಂದಿದೆ. ಇನ್ನು ಇಸ್ರೇಲ್ ನಿಂದ ಪ್ಯಾಲೆಸ್ತೀನ್ ಅನ್ನು ವಿಮೋಚನೆಗೊಳಿಸುವ ಉದ್ದೇಶ ಹೊಂದಿರುವ ಇತರ ದೇಶಗಳು, ಉಗ್ರ ಸಂಘಟನೆಗಳು ಹಮಾಸ್ ಗೆ ಆರ್ಥಿಕ ನೆರವು ಮತ್ತು ಶಸ್ತ್ರಾಸ್ತ್ರಗಳನ್ನು ನೀಡುತ್ತಿವೆ ಎಂದು ವರದಿಯಾಗಿದೆ.

ಪ್ರತಿ ವರ್ಷ ಹಮಾಸ್ ಗಲ್ಫ್ ಅರಬ್ ರಾಜ್ಯಗಳಲ್ಲಿನ ಶ್ರೀಮಂತ ದಾನಿಗಳಿಂದ ಹಣವನ್ನು ಪಡೆಯುತ್ತಿದೆ. ಜಾತ್ಯತೀತ ಪ್ಯಾಲೆಸ್ಟೈನ್ ಲಿಬರೇಶನ್ ಆರ್ಗನೈಸೇಶನ್ (PLO) ಗೆ ಹೋಲಿಸಿದರೆ ಹಮಾಸ್ ಆಳವಾಗಿ ತಳವೂರಿದೆ. ಇರಾನ್ ಹಮಾಸ್ ನ ಶ್ರೇಷ್ಠ ಹಿತೈಷಿಗಳಲ್ಲಿ ಒಂದಾಗಿದೆ. ಅಲ್ಲದೆ ನಿರ್ಣಾಯಕ ಹಣಕಾಸಿನ ನೆರವು ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದೆ. ಇದೇ ವೇಳೆ ಸೌದಿ ಅರೇಬಿಯಾ, ಕತಾರ್ ಮತ್ತು ಕುವೈತ್‌ನಂತಹ ಗಲ್ಫ್ ಅರಬ್ ದೇಶಗಳ ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ ಹಣವನ್ನು ಸಂಗ್ರಹಿಸುತ್ತದೆ.

ಖಾಸಗಿ ವ್ಯವಹಾರಗಳು, ಹೋಟೆಲ್‌ಗಳು, ರಿಯಲ್ ಎಸ್ಟೇಟ್ ಮತ್ತು ಗಾಜಾ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಮಾಸ್ ಹೂಡಿಕೆ ಮಾಡುತ್ತದೆ. ಇದರ ಲಾಭವು ಹಮಾಸ್ ನಿಧಿಗೆ ಭಾರೀ ಕೊಡುಗೆ ನೀಡುತ್ತಿದೆ. ಅಷ್ಟೇ ಅಲ್ಲದೆ ಗಾಜಾ-ಈಜಿಪ್ಟ್ ಗಡಿಯಲ್ಲಿ ಭೂಗತ ಸುರಂಗಗಳ ಮೂಲಕ ಶಸ್ತ್ರಾಸ್ತ್ರಗಳು, ಐಷಾರಾಮಿ ವಸ್ತುಗಳು ಮತ್ತು ಇಂಧನವನ್ನು ಕಳ್ಳಸಾಗಣೆ ಮಾಡುವಂತಹ ಕಳ್ಳಸಾಗಣೆ ಚಟುವಟಿಕೆಗಳ ಮೂಲಕ ಹಮಾಸ್ ಆದಾಯವನ್ನು ಗಳಿಸುತ್ತದೆ. ಈ ಸುರಂಗಗಳನ್ನು ಭೇದಿಸುವ ಪ್ರಯತ್ನಗಳಲ್ಲಿ ಇಸ್ರೇಲ್ ಮತ್ತು ಈಜಿಪ್ಟ್ ನಿರತವಾಗಿದೆ.

ಗಾಜಾದ ಜನರಿಂದ ತೆರಿಗೆಯನ್ನು ಸಂಗ್ರಹಿಸುವ ಮೂಲಕ ಹಮಾಸ್ ತನ್ನ ಹಣವನ್ನು ಪಡೆಯುತ್ತದೆ. ಇದರ ಆದಾಯವೂ ವರ್ಷಕ್ಕೆ 16,000 ಕೋಟಿಯಿಂದ 48,000 ಕೋಟಿ ಎಂದು ಅಂದಾಜಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com