ಹಮಾಸ್ ಬಂಡುಕೋರರ ದಾಳಿ: ಒತ್ತೆಯಾಳು ಬಿಡುಗಡೆಯಾಗುವವರೆಗೂ ಗಾಜಾಕ್ಕೆ ನೀರು, ವಿದ್ಯುತ್ ಇಲ್ಲ: ಇಸ್ರೇಲ್
ಇಸ್ರೇಲ್: ಪ್ಯಾಲೆಸ್ತೈನ್ ನ ಬಂಡುಕೋರರು ಒತ್ತೆಯಾಳು ಬಿಡುಗಡೆ ಮಾಡುವವರೆಗೂ ಗಾಜಾಕ್ಕೆ ನೀರು, ವಿದ್ಯುತ್ ಸೇರಿದಂತೆ ಮತ್ತಿತರ ಅಗತ್ಯ ಮೂಲಸೌಕರ್ಯ ಒದಗಿಸುವುದಿಲ್ಲ ಎಂದು ಇಸ್ರೇಲ್ ಹೇಳಿದೆ. ಅಪಹರಣಕ್ಕೊಳಗಾದ ಇಸ್ರೇಲಿಗರು ಮನೆಗೆ ಮರಳುವವರೆಗೂ ಗಾಜಾಕ್ಕೆ ವಿದ್ಯುತ್, ನೀರು ಒದಗಿಸುವುದಿಲ್ಲ, ಇಂಧನ ಟ್ರಕ್ ಪ್ರವೇಶಿಸುವುದಿಲ್ಲ ಎಂದು ಇಸ್ರೇಲ್ ಇಂಧನ ಸಚಿವ ಕಾಟ್ಜ್ ಗುರುವಾರ ಹೇಳಿದ್ದಾರೆ. ದಶಕಗಳಲ್ಲಿ ಅತಿ ಕೆಟ್ಟ ದಾಳಿಗೆ ಇಸ್ರೇಲ್ ಒಳಗಾಗಿದ್ದು, ಹಮಾಸ್ ಬಂಡುಕೋರರು ನೂರಾರು ಇಸ್ರೇಲಿಗರು, ವಿದೇಶಿಗರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದೆ ಎಂದು ತಿಳಿದುಬಂದಿದೆ.
ಹಮಾಸ್ ನ ಶಸ್ತ್ರ ಸಜ್ಜಿತ ಅಲ್-ಕಸ್ಸಾಮ್ ಬ್ರಿಗೇಡ್ಸ್ ಬುಧವಾರ ಬಿಡುಗಡೆ ಮಾಡಿದ ವಿಡಿಯೋವೊಂದರಲ್ಲಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದ ಮಹಿಳೆಯರು ಮತ್ತು ಇಬ್ಬರು ಮಕ್ಕಳನ್ನು ಬಿಡುಗಡೆ ಮಾಡುವುದನ್ನು ತೋರಿಸುತ್ತದೆ. ಇದು ರಕ್ಕಸ ಸಂಘಟನೆಯ ನಿಜವಾದ ಮುಖವನ್ನು ಮರೆಮಾಚಲು, ಬೆದರಿಕೆಯ ತಂತ್ರವಾಗಿದೆ ಎಂದು ಇಸ್ರೇಲ್ ಹೇಳಿರುವುದಾಗಿ ಅಲ್ ಜಝೀರಾ ವರದಿ ಮಾಡಿದೆ. ಹಮಾಸ್ ನಾಶಮಾಡುವುದಾಗಿ ಇಸ್ರೇಲ್ ಪ್ರತಿಜ್ಞೆ ಮಾಡಿದೆ ಮತ್ತು ಶನಿವಾರದ ದಾಳಿಗೆ ಶಿಕ್ಷೆಯಾಗಿ ಗಾಜಾ ಪಟ್ಟಿಯನ್ನು ಪೂರ್ಣ ವಶಕ್ಕೆ ಪಡೆದಿರುವುದಾಗಿ ಘೋಷಿಸಿದೆ. ಇದರಿಂದ 1,300 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 3,000 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.
ಪ್ಯಾಲೇಸ್ಟಿನಿಯನ್ ಮೂಲಗಳ ಪ್ರಕಾರ, ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯ ಪರಿಣಾಮವಾಗಿ 1,350 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 5,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗುರುವಾರ ಬ್ರಸೆಲ್ಸ್‌ನಲ್ಲಿ ನಡೆದ ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (ನ್ಯಾಟೋ) ಸಭೆಯಲ್ಲಿ ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ತಮ್ಮ 31 ಸಹವರ್ತಿಗಳಿಗೆ ಪರಿಸ್ಥಿತಿ ಕುರಿತು ವಿವರಿಸಿದ್ದಾರೆ.
ಇಸ್ರೇಲಿ ರಕ್ಷಣಾ ಪಡೆಗಳು (ಐಡಿಎಫ್) ಹಮಾಸ್ ನಾಶಪಡಿಸುತ್ತದೆ ಮತ್ತು 'ಮಕ್ಕಳ ರಕ್ತದೊಂದಿಗೆ ಪ್ರತಿಯೊಬ್ಬ ಬಂಡುಕೋರರನ್ನು ಬೇಟೆಯಾಡುತ್ತದೆ' ಎಂದು ಅವರು ಪ್ರತಿಪಾದಿಸಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.ಮಕ್ಕಳು, ಮಹಿಳೆಯರು, ಪುರುಷರು ಮತ್ತು ವೃದ್ಧರ ಮೇಲೆ ಹಮಾಸ್ ಭಯೋತ್ಪಾದಕರು ನಡೆಸಿದ ದೌರ್ಜನ್ಯಗಳ ಬಗ್ಗೆ ಗ್ಯಾಲಂಟ್ ವಿವರಿಸಿದ್ದಾರೆ. "ನಮಗೆ ತೀವ್ರ ಹೊಡೆತ ಬಿದ್ದಿದೆ. ಆದರೂ ತಪ್ಪು ಮಾಡಬೇಡಿ. ಇದು 2023, 1943 ಅಲ್ಲ. ನಾವು ಒಂದೇ ಯಹೂದಿಗಳು, ಆದರೆ ನಾವು ವಿಭಿನ್ನ ಸಾಮರ್ಥ್ಯಗಳನ್ನು ಹೊಂದಿದ್ದೇವೆ. ಇಸ್ರೇಲ್ ರಾಜ್ಯವು ಪ್ರಬಲವಾಗಿದೆ. ನಾವು ಒಗ್ಗಟ್ಟಾಗಿದ್ದೇವೆ ಮತ್ತು ಶಕ್ತಿಯುತವಾಗಿದ್ದೇವೆ ಎಂದು ಅವರು ಹೇಳಿದ್ದಾರೆ.
ಅಕ್ಟೋಬರ್ 7 ರಂದು ಹಮಾಸ್ ದಾಳಿಯನ್ನು ಪ್ರಾರಂಭಿಸಿದ ನಂತರ ಇಸ್ರೇಲ್‌ಗೆ ದೊರೆತ ಜಾಗತಿಕ ಬೆಂಬಲದ ಪ್ರದರ್ಶನಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಹೇಳಿದೆ. ಕಳೆದ ವಾರಾಂತ್ಯದಲ್ಲಿ ದಕ್ಷಿಣ ಇಸ್ರೇಲ್‌ನ ವಿವಿಧ ಭಾಗಗಳಲ್ಲಿ ನುಸುಳಿದಾಗ ಹಮಾಸ್ ಇಸ್ರೇಲ್‌ಗೆ ಐಸಿಸ್ ಧ್ವಜಗಳನ್ನು ತಂದಿದೆ ಎಂದು ಇಸ್ರೇಲಿ ರಕ್ಷಣಾ ಪಡೆಗಳು ತಿಳಿಸಿವೆ.
ಈ ಕುರಿತು ಎಕ್ಸ್ ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಇಸ್ರೇಲಿ ಮಕ್ಕಳು, ಮಹಿಳೆಯರು ಮತ್ತು ಪುರುಷರನ್ನು ಹತ್ಯಾಕಾಂಡ ಮಾಡಲು ಹಮಾಸ್ ISIS ಧ್ವಜಗಳನ್ನು ತಂದಿದೆ. ಹಮಾಸ್ ನರಹಂತಕ ಭಯೋತ್ಪಾದಕ ಸಂಘಟನೆಯಾಗಿದೆ. ಹಮಾಸ್ ISIS ಗಿಂತ ಕೆಟ್ಟದಾಗಿದೆ ಎಂದು ಆರೋಪಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ