ಇಸ್ರೇಲ್ ಎಚ್ಚರಿಕೆ ಬೆನ್ನಲ್ಲೇ ಪ್ಯಾಲೆಸ್ತೀನಿಯರ ಸಾಮೂಹಿಕ ಸ್ಥಳಾಂತರ, ವಿಶ್ವಸಂಸ್ಥೆ ಅಸಮಾಧಾನ

24 ಗಂಟೆಗಳಲ್ಲಿ ಜಾಗ ಖಾಲಿ ಮಾಡಿ ಎಂಬ ಇಸ್ರೇಲ್ ಎಚ್ಚರಿಕೆ ಬೆನ್ನಲ್ಲೇ ಇತ್ತ ಗಾಜಾಪಟ್ಟಿಯಲ್ಲಿನ ಪ್ಯಾಲೆಸ್ತೀನಿಯನ್ನರು ದಕ್ಷಿಣ ಗಾಜಾಗೆ ಸಾಮೂಹಿಕ ವಲಸೆ ಆರಂಭಿಸಿದ್ದಾರೆ.
ಗಾಜಾಪಟ್ಟಿಯಲ್ಲಿ ಇಸ್ರೇಲ್ ಕಾರ್ಯಾಚರಣೆ
ಗಾಜಾಪಟ್ಟಿಯಲ್ಲಿ ಇಸ್ರೇಲ್ ಕಾರ್ಯಾಚರಣೆ

ನವದೆಹಲಿ: 24 ಗಂಟೆಗಳಲ್ಲಿ ಜಾಗ ಖಾಲಿ ಮಾಡಿ ಎಂಬ ಇಸ್ರೇಲ್ ಎಚ್ಚರಿಕೆ ಬೆನ್ನಲ್ಲೇ ಇತ್ತ ಗಾಜಾಪಟ್ಟಿಯಲ್ಲಿನ ಪ್ಯಾಲೆಸ್ತೀನಿಯನ್ನರು ದಕ್ಷಿಣ ಗಾಜಾಗೆ ಸಾಮೂಹಿಕ ವಲಸೆ ಆರಂಭಿಸಿದ್ದಾರೆ.

ಹಮಾಸ್ ಉಗ್ರರ ಕಾರ್ಯಾಚರಣೆಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಿರುವ ಇಸ್ರೇಲ್ ಸೇನೆ ಇದೀಗ ಗಾಜಾ ಪಟ್ಟಿಯ ಉತ್ತರ ಭಾಗದಲ್ಲಿನ ಜನರನ್ನು 24 ಗಂಟೆಗಳಲ್ಲಿ ಜಾಗಖಾಲಿ ಮಾಡಿ ಎಂಬ ಎಚ್ಚರಿಕೆ ನೀಡಿದ್ದು, ಈ ಹಿನ್ನಲೆಯಲ್ಲಿ ಶುಕ್ರವಾರ ಸಾವಿರಾರು ಪ್ಯಾಲೆಸ್ಟೀನಿಯನ್ನರು ಆಶ್ರಯ ಅರಸಿ ಹುಡುಕಿಕೊಂಡು ದಕ್ಷಿಣ ಗಾಜಾಕ್ಕೆ ಪಲಾಯನ ಮಾಡುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಪ್ಯಾಲೇಸ್ಟಿನಿಯನ್ ರೆಡ್ ಕ್ರೆಸೆಂಟ್‌ನ ವಕ್ತಾರ ನೆಬಲ್ ಫರ್ಸಾಖ್ ಅವರು, ಆಹಾರ, ನೀರು, ಇಂಧನ ಮರೆತು ಬಿಡಿ.. ಇಲ್ಲಿ ನೀವು ಅವುಗಳನ್ನು ಸಾಧಿಸಿದರೆ, ಇಲ್ಲಿ ಬದುಕುವುದೇ ದುಸ್ತರವಾಗಿದೆ. ಪ್ರತೀ ನಿಮಿಷ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಜೀವನ ನಡೆಸುವಂತಾಗಿದೆ ಎಂದು ಗದ್ಗದಿತರಾದರು.

ಇಸ್ರೇಲ್‌ನ ಸೇನೆಯು 1.1 ಮಿಲಿಯನ್‌ಗಿಂತಲೂ ಹೆಚ್ಚು ಜನರಿರುವ ಉತ್ತರ ಗಾಜಾವನ್ನು ಮುತ್ತಿಗೆ ಹಾಕಿದ್ದು, ಈ ಬೆಳವಣಿಗೆ ಬೆನ್ನಲ್ಲೇ ಇಸ್ರೇಲ್ ಸೇನೆಯ ದಾಳಿಯಿಂದ ರಕ್ಷಿಸಿಕೊಳ್ಳಲು ಪ್ಯಾಲೆಸ್ತೀನಿಯನ್ನರು ದಕ್ಷಿಣ ಗಾಜಾಕ್ಕೆ ಸಾಮೂಹಿಕ ಪಲಾಯನ ಮಾಡುತ್ತಿದ್ದಾರೆ.ಆದಾಗ್ಯೂ, ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಹಮಾಸ್ ನಿವಾಸಿಗಳನ್ನು "ನಿಮ್ಮ ಮನೆಗಳಲ್ಲಿ ಸ್ಥಿರವಾಗಿರಿ ಮತ್ತು ಇಸ್ರೇಲ್ ವಿರುದ್ಧ ದೃಢವಾಗಿ ನಿಲ್ಲುವಂತೆ" ಒತ್ತಾಯಿಸುತ್ತಿದೆ.

ವಿಶ್ವಸಂಸ್ಥೆ ಅಸಮಾಧಾನ
ಇಸ್ರೇಲ್ ಸೇನೆಯ ಈ ಆದೇಶದ ಬೆನ್ನಲ್ಲೇ ಈ ಬೆಳವಣಿಗೆಯನ್ನು ಖಂಡಿಸಿರುವ ವಿಶ್ವಸಂಸ್ಥೆ ಈ ಆದೇಶವು "ವಿನಾಶಕಾರಿ ಮಾನವೀಯ ಪರಿಣಾಮಗಳನ್ನು" ಹೊಂದಿರುತ್ತದೆ ಎಂದು ಹೇಳಿದೆ. ಈ ಬಗ್ಗೆ ಮಾತನಾಡಿರುವ ವಿಶ್ವಸಂಸ್ಥೆ ವಕ್ತಾರ ಸ್ಟೀಫನ್ ಡುಜಾರಿಕ್, 'ಸಂಘರ್ಷದಲ್ಲಿ ಸುಮಾರು 1,800 ಗಜಾ ನಿವಾಸಿಗಳು ಅವರಲ್ಲಿ ಹೆಚ್ಚಿನವರು ನಾಗರಿಕರು ಮತ್ತು 580ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ ಕ್ಷಿಪಣಿ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದಾರೆ.

ಈಗಲೂ ಸುಮಾರು ದಕ್ಷಿಣ ಗಾಜಾ 10ಲಕ್ಷಕ್ಕೂ ಅಧಿಕ ಮಂದಿ ಜೀವಭಯದಲ್ಲಿದ್ದು, 24 ಗಂಟೆಗಳಲ್ಲಿ ಅವರನ್ನು ಜಾಗ ಖಾಲಿ ಮಾಡುವಂತೆ ಆದೇಶಿಸುವುದು ಸರಿಯಲ್ಲ. ಇದು ತಾರ್ಕಿಕವಾಗಿ ಅಸಾಧ್ಯಕೂಡ.. ಈಗಾಗಲೇ ಕನಿಷ್ಠ 423,000 ಜನರು ಅಂದರೆ ಪ್ರತೀ ಐದು ಗಜಾ ನಿವಾಸಿಗಳಲ್ಲಿ ಒಪ್ಪರು ವೈಮಾನಿಕ ದಾಳಿಯಲ್ಲಿ ತಮ್ಮ ನೆಲೆ-ನಿವಾಸ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಆಹಾರ, ಇಂಧನ, ನೀರು ಮತ್ತು ಔಷಧಗಳ ಸ್ಥಗಿತತೆಯಿಂದ ಹತಾಶರಾಗಿರುವ ಪ್ಯಾಲೇಸ್ಟಿನಿಯನ್ನರು ಸಂಕಷ್ಟದಲ್ಲಿದ್ದಾರೆ. ಈ ಪ್ರದೇಶದ ಏಕೈಕ ವಿದ್ಯುತ್ ಸ್ಥಾವರವು ಇಂಧನದ ಕೊರತೆಯಿಂದಾಗಿ ಸ್ಥಗಿತಗೊಂಡಿದ್ದು ಇದು ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com