ಗಾಜಾಗೆ ನುಗ್ಗಿದ ಇಸ್ರೇಲ್ ಟ್ಯಾಂಕ್ ಗಳಿಂದ ಸೀಮಿತ ದಾಳಿ; ಆಸ್ಪತ್ರೆ, ಬ್ರೆಡ್ ತಯಾರಿಕೆಗೆ ಇಂಧನ ಕೊರತೆ ಬಿಸಿ, ವಿಶ್ವಸಂಸ್ಥೆ ಕಳವಳ

ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ಸೇನಾದಾಳಿ ತೀವ್ರಗೊಂಡಿದ್ದು, ನಿನ್ನೆ ತಡರಾತ್ರಿ ಗಾಜಾಪಟ್ಟಿಗೆ ನುಗ್ಗಿದ್ದ ಇಸ್ರೇಲ್ ಸೇನಾ ಟ್ಯಾಂಕರ್ ಗಳು ಹಮಾಸ್ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ ವಾಪಸ್ ಆಗಿವೆ.
ಗಾಜಾಗೆ ನುಗ್ಗಿದ ಇಸ್ರೇಲ್ ಟ್ಯಾಂಕ್ ಗಳು
ಗಾಜಾಗೆ ನುಗ್ಗಿದ ಇಸ್ರೇಲ್ ಟ್ಯಾಂಕ್ ಗಳು

ಟೆಲ್ ಅವೀವ್: ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ಸೇನಾದಾಳಿ ತೀವ್ರಗೊಂಡಿದ್ದು, ನಿನ್ನೆ ತಡರಾತ್ರಿ ಗಾಜಾಪಟ್ಟಿಗೆ ನುಗ್ಗಿದ್ದ ಇಸ್ರೇಲ್ ಸೇನಾ ಟ್ಯಾಂಕರ್ ಗಳು ಹಮಾಸ್ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ ವಾಪಸ್ ಆಗಿವೆ.

ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್), ಗಿವಾಟಿ (ಕಾಲಾಳುಪಡೆ) ಬ್ರಿಗೇಡ್‌ನ ನೇತೃತ್ವದಲ್ಲಿ ರಾತ್ರೋರಾತ್ರಿ ಉತ್ತರ ಗಾಜಾ ಪಟ್ಟಿಯ ಪ್ರದೇಶದಲ್ಲಿ ಟ್ಯಾಂಕ್‌ಗಳನ್ನು ಬಳಸಿಕೊಂಡು ಉದ್ದೇಶಿತ ದಾಳಿಯನ್ನು ನಡೆಸಿತು. ಇದು ಮುಂದಿನ ಹಂತದ ಯುದ್ಧಕ್ಕಾಗಿ ಪ್ರದೇಶವನ್ನು ಸಿದ್ಧಪಡಿಸುವ ಅಂದರೆ ಗಾಜಾಪಟ್ಟಿಗೆ  ಸೇನೆ ನುಗ್ಗಿಸುವ ಭಾಗವಾಗಿದೆ ಎಂದು IDF ಹೇಳಿದೆ.

ಕಾರ್ಯಾಚರಣೆಯ ಭಾಗವಾಗಿ, IDF, ಪಡೆಗಳು ಅನೇಕ ಭಯೋತ್ಪಾದಕರನ್ನು ಪತ್ತೆ ಮಾಡಿ ದಾಳಿ ಮಾಡಿತು. ಭಯೋತ್ಪಾದಕ ಮೂಲಸೌಕರ್ಯಗಳನ್ನು ನಾಶಪಡಿಸಿತು, ಟ್ಯಾಂಕ್ ವಿರೋಧಿ ಕ್ಷಿಪಣಿ ಉಡಾವಣೆ ಸ್ಥಾನಗಳನ್ನು ನಾಶಪಡಿಸಿತು ಮತ್ತು ಭವಿಷ್ಯದ ಕಾರ್ಯಾಚರಣೆಗಳಿಗೆ ಪ್ರದೇಶವನ್ನು ಸಿದ್ಧಪಡಿಸುವ ಕೆಲಸವನ್ನು ನಡೆಸಿತು. ಕಾರ್ಯಾಚರಣೆಯ ಕೊನೆಯಲ್ಲಿ IDF ಪಡೆಗಳು ಪ್ರದೇಶವನ್ನು ತೊರೆದು ಇಸ್ರೇಲ್ ಗಡಿಗೆ ವಾಪಸ್ ಆದವು.

ಇದೇ ವೇಳೆ 'ಇಸ್ರೇಲ್ ತನ್ನ ಅಸ್ತಿತ್ವಕ್ಕಾಗಿ ಯುದ್ಧದಲ್ಲಿದೆ' ಎಂಬ ತನ್ನ ಮಾತುಗಳನ್ನು ಪುನರುಚ್ಚರಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಹಮಾಸ್ ಯುದ್ಧದ ವಿರುದ್ಧ ತನ್ನ ಗುರಿ 'ದೇಶವನ್ನು ಉಳಿಸುವುದು' ಮತ್ತು ಗಾಜಾದಲ್ಲಿ ಹಮಾಸ್ ಅನ್ನು ನಾಶಮಾಡುವ ನೆಲದ ಆಕ್ರಮಣವು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಭರವಸೆ ನೀಡಿದರು ಎಂದು ಟೈಮ್ಸ್ ಆಫ್ ಇಸ್ರೇಲ್ ಬುಧವಾರ ವರದಿ ಮಾಡಿದೆ. 

ಇಂಧನ ಕೊರತೆ: ಬ್ರೆಡ್ ತಯಾರಿಕೆ ಮೇಲೆ ಗಂಭೀರ ಪ್ರಭಾವ, ಸಂಕಷ್ಟದಲ್ಲಿ ಆಸ್ಪತ್ರೆ ರೋಗಿಗಳು
ಇದೇ ವೇಳೆ ಗಾಜಾ ಮೇಲಿನ ಇಸ್ರೇಲ್ ದಾಳಿ ಹಿನ್ನಲೆಯಲ್ಲಿ ಗಾಜಾದಲ್ಲಿನ ಇಂಧನ ಪೂರೈಕೆ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಇಂಧನ ಪೂರೈಕೆ ವ್ಯತ್ಯಯದಿಂದಾಗಿ ಗಾಜಾ ಆಸ್ಪತ್ರೆಗಳು ಮತ್ತು ಗಾಜಾದಲ್ಲಿನ ಬ್ರೆಡ್ ತಯಾರಿಕಾ ಘಟಕಗಳು ಸಂಕಷ್ಟಕ್ಕೀಡಾಗಿವೆ. ಈಗಾಗಲೇ ವಿಶ್ವಸಂಸ್ಥೆಯ ಗಾಜಾ ಘಟಕ ತನ್ನ ಇಂಧನ ಸರಬರಾಜನ್ನು ಗಾಜಾ ಆಸ್ಪತ್ರೆ ಮತ್ತು ಬ್ರೆಡ್ ತಯಾರಿಕಾ ಘಟಕಗಳೊಂದಿಗೆ ಹಂಚಿಕೊಂಡಿದೆಯಾದರೂ ಅದು ಸಾಲುತ್ತಿಲ್ಲ. ಗಾಜಾಗೆ ಟ್ರಕ್ ಗಳ ಮೂಲಕ ರಾಫಾ ಗಡಿಯಲ್ಲಿ ಇಂಧನ ಪೂರೈಕೆ ಮಾಡಲಾಗುತ್ತಿದೆಯಾದರೂ ಅದು ಬೇಡಿಕೆಗೆ ಅನುಗುಣವಾಗಿ ಇಲ್ಲ. ಇದರಿಂದ ಆಸ್ಪತ್ರೆಯಲ್ಲಿ ರೋಗಿಗಳು ಸಂಕಷ್ಟಕ್ಕೀಡಾಗುವಂತೆ ಮಾಡಿದೆ. ಅಲ್ಲದೆ ಗಾಜಾದಲ್ಲಿನ ನಿರಾಶ್ರಿತ ಶಿಬಿರಗಳಲ್ಲಿರುವ ಜನರಿಗಾಗಿ ಬ್ರೆಡ್ ತಯಾರಿಕೆ ಮೇಲೂ ಗಂಭೀರ ಪರಿಣಾಮ ಬೀರಿದೆ. 

ಈ ಬಗ್ಗೆ ಮಾತನಾಡಿರುವ UNRWA ವಕ್ತಾರ ತಮಾರಾ ಅಲ್ರಿಫೈ, "ನಾವು ಗಂಭೀರ ಇಂಧನ ಕೊರತೆ ಎದುರಿಸುತ್ತಿದ್ದು, ಈಗಿರುವ ಇಂಧನವನ್ನು ಆಸ್ಪತ್ಪೆಗಳ ಇನ್ಕ್ಯುಬೇಟರ್‌ಗಳಿಗಾಗಿ  ಮೀಸಲಿಡಬೇಕೋ ಅಥವಾ ಬೇಕರಿಗಳ ಬ್ರೆಡ್ ತಯಾರಿಕೆಗಾಗಿ ನೀಡಬೇಕೋ ಎಂಬ ಗೊಂದಲದಲ್ಲಿದ್ದೇವೆ. ಗಾಜಾದ ಅರ್ಧಕ್ಕಿಂತ ಹೆಚ್ಚು ಪ್ರಾಥಮಿಕ ಆರೋಗ್ಯ ಸೌಲಭ್ಯಗಳು ಮತ್ತು ಅದರ ಮೂರನೇ ಒಂದು ಭಾಗದಷ್ಟು ಆಸ್ಪತ್ರೆಗಳು ಇಂಧನ ಕೊರತೆಯಿಂದ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಗಾಜಾ ನಗರದ ಅಲ್-ಶಿಫಾ ಆಸ್ಪತ್ರೆಯಲ್ಲಿ, ಔಷಧಿ ಮತ್ತು ಶುದ್ಧ ನೀರಿನ ಕೊರತೆಯು ಅಪಾಯಕಾರಿ ಸೋಂಕಿನ ಪ್ರಮಾಣಕ್ಕೆ ಕಾರಣವಾಗಿದೆ ಎಂದು ಡಾಕ್ಟರ್ಸ್ ವಿಥೌಟ್ ಬಾರ್ಡರ್ಸ್ ಗುಂಪು ಹೇಳಿದೆ. ಗಾಯಾಳುಗಳಲ್ಲಿ ಸೋಂಕು ಹರಡುವುದನ್ನು ತಡೆಯಲು ಅಂಗಚ್ಛೇದನಗಳು (ಅಂಗಾಂಗ ಕತ್ತರಿಸುವಿಕೆ) ಹೆಚ್ಚಾಗಿ ಅಗತ್ಯವಿದೆ ಎಂದು ಅದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com