ನಾಜಿ ಮಾಜಿ ಯೋಧನ ಗೌರವಿಸಿದ್ದಕ್ಕೆ ಟೀಕೆಗೆ ಗುರಿ: ಕ್ಷಮೆಯಾಚಿಸಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ
ನಾಜಿ ಮಾಜಿ ಯೋಧನ ಗೌರವಿಸಿದ ಹಿನ್ನೆಲೆಯಲ್ಲಿ ತೀವ್ರ ವಿರೋಧ ಹಾಗೂ ಟೀಕೆಗೆ ಗುರಿಯಾಗಿದ್ದ ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊ ಅವರು ಸಂಸತ್ತಿನ ಪರವಾಗಿ ಕ್ಷಮೆಯಾಚಿಸಿದ್ದಾರೆ.
Published: 28th September 2023 10:34 AM | Last Updated: 28th September 2023 03:56 PM | A+A A-

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ
ಒಟ್ಟಾವಾ: ನಾಜಿ ಮಾಜಿ ಯೋಧನ ಗೌರವಿಸಿದ ಹಿನ್ನೆಲೆಯಲ್ಲಿ ತೀವ್ರ ವಿರೋಧ ಹಾಗೂ ಟೀಕೆಗೆ ಗುರಿಯಾಗಿದ್ದ ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊ ಅವರು ಸಂಸತ್ತಿನ ಪರವಾಗಿ ಕ್ಷಮೆಯಾಚಿಸಿದ್ದಾರೆ.
ಸೆಪ್ಟೆಂಬರ್ 22ರಂದು ಕೆನಡಾದ ಸಂಸತ್ತನ್ನುದ್ದೇಶಿಸಿ ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ಭಾಷಣ ಮಾಡಿದ್ದರು. ಈ ವೇಳೆ 98 ವರ್ಷದ ನಾಜಿ ಮಾಜಿ ಯೋಧ ಯಾರೋಸ್ಲಾವ್ ಹುಂಕಾ ಅವರನ್ನು ಕೆನಡಾದ ಸ್ಪೀಕರ್ ಆ್ಯಂಥೋನಿ ರೋಟಾ ಗೌರವಿಸಿದ್ದರು. ಹುಂಕಾ ಅವರು ಎರಡನೇ ಮಹಾ ಯುದ್ಧದಲ್ಲಿ ಭಾಗವಹಿಸಿದ್ದರು.
ನಾಜಿ ಯೋಧನಿಗೆ ಗೌರವ ನೀಡಿರುವುದನ್ನು ಖಂಡಿಸಿದ್ದ ವಿರೋಧ ಪಕ್ಷಗಳು ಟ್ರುಡೊ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದವು. ಈ ಸಂಬಂಧ ಸಾಕಷ್ಟು ಟೀಕೆಗಳೂ ವ್ಯಕ್ತವಾಗಿದ್ದವು.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಟ್ರುಡೋ ಅವರು, ‘ನಮ್ಮ ನಡೆಯಿಂದ ಸಂಸತ್ತು ಮತ್ತು ಕೆನಡಾಕ್ಕೆ ತೀವ್ರ ಮುಜುಗರ ಉಂಟಾಗಿದೆ. ಶುಕ್ರವಾರ ಈ ಸದನದಲ್ಲಿದ್ದ ನಾವೆಲ್ಲರೂ ಪೂರ್ವಪರ ಯೋಚಿಸಿದೆ ನಿಂತು ಚಪ್ಪಾಳೆ ತಟ್ಟಿದ್ದೇವೆ. ಅದಕ್ಕಾಗಿ ತೀವ್ರವಾಗಿ ವಿಷಾದಿಸುತ್ತೇವೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೆನಡಾ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವಾಗಿದೆ: ಟುಡ್ರೋ ವಿರುದ್ಧ ಲಂಕಾ ವಿದೇಶಾಂಗ ಸಚಿವರ ಆರೋಪ
ಮಾಜಿ ಯೋಧ ಯಾರೋಸ್ಲಾವ್ ಹುಂಕಾ ಅವರನ್ನು ಗೌರವಿಸಿರುವುದು ಹತ್ಯಾಕಾಂಡದಲ್ಲಿ ಮಡಿದ ಜನರಿಗೆ ಮಾಡಿದ ದೊಡ್ಡ ಅವಮಾನವಾಗಿದೆ. ಇದರಿಂದ ಯುಹೂದಿ ಸೇರಿದಂತೆ ಎರಡನೇ ಮಹಾಯುದ್ಧದಲ್ಲಿ ನಾಜಿ ಆಡಳಿತದಿಂದ ತತ್ತರಿಸಿದ ಅನೇಕ ಗುಂಪುಗಳಿಗೆ ನೋವಾಗಿದೆ. ಆ ವ್ಯಕ್ತಿಯನ್ನು(ನಾಜಿ ಯೋಧ) ಆಹ್ವಾನಿಸಿ ಗೌರವಿಸಿರುವ ಸಂಬಂಧ ಸ್ಪೀಕರ್ ಅವರು ತಪ್ಪೊಪ್ಪಿಕೊಂಡು ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಉಕ್ರೇನ್ ಯಾವುದಕ್ಕಾಗಿ ಹೋರಾಡುತ್ತಿದೆ ಎಂಬುದರ ಕುರಿತು ಸುಳ್ಳು ಪ್ರಚಾರ ನೀಡಲು ರಷ್ಯಾ ಮತ್ತು ಅದರ ಬೆಂಬಲಿಗ ರಾಷ್ಟ್ರಗಳು ಈ ಸಣ್ಣ ದೋಷವನ್ನು ರಾಜಕೀಯಗೊಳಿಸುತ್ತಿವೆ’ ಎಂದು ಕಿಡಿಕಾರಿದರು.