
ಲಂಡನ್: ಪೂರ್ವ ಲಂಡನ್‌ನ ಹೈನಾಲ್ಟ್‌ನಲ್ಲಿ ಲಾಂಗ್ ಹಿಡಿದು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮೆಟ್ರೋಪಾಲಿಟನ್ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ವ್ಯಕ್ತಿಯೊಬ್ಬ ಜನ ನಿಬಿಡ ರಸ್ತೆಗಳಲ್ಲಿ ತನ್ನ ಎದುರಿಗೆ ಬಂದ ಎಲ್ಲರ ಮೇಲೂ ಮನ ಬಂದಂತೆ ಕತ್ತಿ ಬೀಸುತ್ತಿದ್ದ. ಸಿಕ್ಕ ಸಿಕ್ಕವರ ಮೇಲೆ ಏಕಾಏಕಿ ಕತ್ತಿ ಬೀಸಿದ ಪರಿಣಾಮ 13 ವರ್ಷದ ಬಾಲಕ ಸಾವನ್ನಪ್ಪಿದ್ದು, ಇಬ್ಬರು ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದರು. ಕೂಡಲೇ ಕಾರ್ಯಾಚರಣೆ ನಡೆಸಿದ ಲಂಡನ್ ಮೆಟ್ರೋ ಪಾಲಿಟನ್ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
"ಕೈಯಲ್ಲಿ ಕತ್ತಿ(ಲಾಂಗ್) ಹಿಡಿದಿದ್ದ ವ್ಯಕ್ತಿ ಇತರ ಸಾರ್ವಜನಿಕರ ಮೇಲೆ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾನೆ ಎಂದು" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
"ನಾವು ಗಾಯಗೊಂಡವರ ಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದ್ದೇವೆ." ಲಂಡನ್ ಆಂಬ್ಯುಲೆನ್ಸ್ ಸೇವೆ, ಐದು ಜನರಿಗೆ ಚಿಕಿತ್ಸೆ ನೀಡಿದೆ ಮತ್ತು ಅವರೆಲ್ಲರನ್ನು ಆಸ್ಪತ್ರೆಗೆ ಕರೆದೊಯ್ದಿದೆ ಎಂದು ಪೊಲೀಸರು ಹೇಳಿದ್ದಾರೆ.
ಲಂಡನ್‌ನ ಸ್ಥಳೀಯ ಕಾಲಮಾನ ಬೆಳಗ್ಗೆ 7 ಗಂಟೆಗೆ ಈ ಘಟನೆ ನಡೆದಿದೆ. ಬೆಳಗಿನ ಹೊತ್ತು ಕಚೇರಿಗೆ ತೆರಳುವ ಒತ್ತಡದಲ್ಲಿದ್ದ ಜನರಿಗೆ ಈ ಘಟನೆ ಆಘಾತ ತಂದಿತ್ತು. ಕೂಡಲೇ ಪೊಲೀಸರಿಗೆ ಕರೆ ಮಾಡಿದ ಸಾರ್ವಜನಿಕರು ವ್ಯಕ್ತಿಯೊಬ್ಬ ತನ್ನ ಕೈಯಲ್ಲಿ ಕತ್ತಿ ಹಿಡಿದು ಎಲ್ಲರ ಮೇಲೂ ಮನಬಂದಂತೆ ಬೀಸುತ್ತಿದ್ದಾನೆ ಎಂದು ಹೇಳಿದ್ದಾರೆ. ಕೂಡಲೇ ಪೊಲೀಸರು ಕಾರ್ಯ ಪ್ರವೃತ್ತರಾಗಿ, ವ್ಯಕ್ತಿಯನ್ನು ಬಂಧಿಸಿದ್ದಾರೆ.
Advertisement