
ಢಾಕಾ: ಹಿಂಸಾಚಾರದಲ್ಲಿ ಬೇಯುತ್ತಿರುವ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಉದ್ರಿಕ್ತರ ಗುಂಪೊಂದು ಸೋಮವಾರ ಭಾರತೀಯ ಸಾಂಸ್ಕೃತಿಕ ಕೇಂದ್ರವನ್ನು ಧ್ವಂಸಗೊಳಿಸಿದ್ದು, ನಾಲ್ಕು ಹಿಂದೂ ದೇವಾಲಯಗಳಿಗೆ ಹಾನಿಯಾಗಿದೆ ಎಂದು ಸಮುದಾಯದ ಮುಖಂಡರೊಬ್ಬರು ತಿಳಿಸಿದ್ದಾರೆ.
ದೇಶಾದ್ಯಂತ ಕನಿಷ್ಠ 4 ಹಿಂದೂ ದೇವಾಲಯಗಳಿಗೆ ಸಣ್ಣ ಪ್ರಮಾಣದ ಹಾನಿಯಾಗಿದೆ ಎಂಬ ವರದಿಗಳು ಬಂದಿವೆ ಎಂದು ಹಿಂದೂ ಬೌದ್ಧ ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್ ನಾಯಕಿ ಕಾಜೋಲ್ ದೇಬನಾಥ್ ತಿಳಿಸಿದ್ದಾರೆ.
ಪ್ರಧಾನಿ ಶೇಖ್ ಹಸೀನಾ ಪದಚ್ಯುತಿ ನಂತರ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೆಲವು ಹಿಂದೂ ಸಮುದಾಯದ ಮುಖಂಡರು ಭಯಭೀತರಾಗಿದ್ದಾರೆ. ಢಾಕಾದ ಧನ್ಮಂಡಿ ಪ್ರದೇಶದಲ್ಲಿರುವ ಇಂದಿರಾಗಾಂಧಿ ಸಾಂಸ್ಕೃತಿಕ ಕೇಂದ್ರವನ್ನು ಧ್ವಂಸಗೊಳಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬಂಗಬಂಧು ಸ್ಮಾರಕ ಮ್ಯೂಸಿಯಂ ಸೇರಿದಂತೆ ಢಾಕಾದಲ್ಲಿನ ಹಲವು ಕಡೆಗಳಲ್ಲಿ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. 1975 ರಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವಾಗ ಹತ್ಯೆಗೀಡಾದ ಹಸೀನಾ ಅವರ ತಂದೆ ಶೇಖ್ ಮುಜಿಬುರ್ ರೆಹಮಾನ್ ಅವರ ಸ್ಮರಣಾರ್ಥ ಈ ಮ್ಯೂಸಿಯಂ ಸ್ಥಾಪಿಸಲಾಗಿದೆ.
ಮಾರ್ಚ್ 2010 ರಲ್ಲಿ ಔಪಚಾರಿಕವಾಗಿ ಉದ್ಘಾಟನೆಗೊಂಡ ಇಂದಿರಾ ಗಾಂಧಿ ಭಾರತೀಯ ಸಾಂಸ್ಕೃತಿಕ ಕೇಂದ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರಗೋಷ್ಠಿಗಳು, ಕಾರ್ಯಾಗಾರ ಆಯೋಜಿಸುವ ಮೂಲಕ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ದ್ವಿಪಕ್ಷೀಯ ಸಾಂಸ್ಕೃತಿಕ ವಿನಿಮಯವನ್ನು ಪ್ರೋತ್ಸಾಹಿಸಲಾಗುತಿತ್ತು.
ಯೋಗ, ಹಿಂದಿ, ಭಾರತೀಯ ಶಾಸ್ತ್ರೀಯ ಗಾಯನ, ಸಂಗೀತ ಮತ್ತು ಕಥಕ್ ಮತ್ತು ಮಣಿಪುರಿಯಂತಹ ಭಾರತೀಯ ನೃತ್ಯಗಳಿಗೆ ಭಾರತ ಮೂಲದ ವೃತ್ತಿಪರರು ಮತ್ತು ತರಬೇತುದಾರರು ಇಲ್ಲಿ ತರಬೇತಿ ನೀಡುತ್ತಿದ್ದರು. ಭಾರತೀಯ ಕಲೆ, ಸಂಸ್ಕೃತಿ, ರಾಜಕೀಯ, ಅರ್ಥಶಾಸ್ತ್ರ ಮತ್ತು ಕಾದಂಬರಿ ಕ್ಷೇತ್ರಗಳಲ್ಲಿ 21,000 ಕ್ಕೂ ಹೆಚ್ಚು ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯ ಈ ಕೇಂದ್ರದಲ್ಲಿತ್ತು.
Advertisement