ನ್ಯೂಜೆರ್ಸಿ: ಬೃಹತ್ ಗಾತ್ರದ ಬೆಂಗಾಲ್ ಟೈಗರ್ ಇದ್ದ ಬೋನಿನೊಳಗೆ ಮಹಿಳೆಯೊಬ್ಬರು ಅಕ್ರಮ ಪ್ರವೇಶ ಮಾಡಿ ಪ್ರಾಣಕ್ಕೆ ಸಂಚಕಾರ ತಂದುಕೊಂಡಿದ್ದ ಆಘಾತಕಾರಿ ಘಟನೆ ಅಮೆರಿಕದಲ್ಲಿ ನಡೆದಿದೆ.
ಅಮೆರಿಕದ ನ್ಯೂಜೆರ್ಸಿಯ ಕೊಹನ್‌ಜಿಕ್ ಮೃಗಾಲಯಕ್ಕೆ ಭೇಟಿ ನೀಡಿದ್ದ ಮಹಿಳೆ ನೋಡ ನೋಡುತ್ತಲೇ ಬೇಲಿ ಹಾರಿ ಬಂಗಾಳ ಹುಲಿ (Bengal Tiger) ಆವರಣದೊಳಗೆ ಹೋಗಿದ್ದಾರೆ. ಈ ವೇಳೆ ಮಹಿಳೆ ಬೃಹತ್ ಗಾತ್ರದ ಹುಲಿಯನ್ನು ಮುಟ್ಟಲು ಪ್ರಯತ್ನಿಸಿದ್ದು, ಹುಲಿ ಆಕೆಯನ್ನು ಇನ್ನೇನು ಹಿಡಿದೇ ಬಿಟ್ಟಿತು ಎನ್ನುವಷ್ಟರಲ್ಲಿ ಅಲ್ಲಿನ ಸಿಬ್ಬಂದಿ ಜೋರಾಗಿ ಕೂಗಿದ್ದಾರೆ. ಈ ವೇಳೆ ಎಚ್ಚೆತ್ತ ಮಹಿಳೆ ಮತ್ತೆ ಹಿಂದಕ್ಕೆ ಹೋಗಿ ಹುಲಿ ಇದ್ದ ತಂತಿ ಬೇಲಿಯಿಂದ ಹೊರಗೆ ಬಂದಿದ್ದಾಳೆ.
ವಿಡಿಯೋದಲ್ಲಿರುವಂತೆ ಹುಲಿ ಆಕೆಯನ್ನು ಕಚ್ಚಿ ಎಳೆಯಲು ಯತ್ನಿಸುವಾಗ ಆಕೆ ಕೂದಲೆಳೆ ಅಂತರದಲ್ಲಿ ಅಲ್ಲಿಂದ ದೂರ ಹೋಗಿದ್ದಾಳೆ. ಈ ಹುಲಿ ಸುಮಾರು 500 ಪೌಂಡ್ ತೂಕ ಹೊಂದಿದ್ದು, ಎಂತಹ ದೈತ್ಯ ದೇಹಿಯನ್ನಾದರೂ ಕ್ಷಣಾರ್ಧದಲ್ಲಿ ಮುಗಿಸಿಬಿಡುವ ತಾಕತ್ತು ಹೊಂದಿದೆ ಎಂದು ಹೇಳಲಾಗಿದೆ.
ಎಚ್ಚರಿಕೆ ಫಲಕ ಹಾಕಿದ ಸಿಬ್ಬಂದಿ
ಈ ಪ್ರಕರಣದ ಬೆನ್ನಲ್ಲೇ ಸ್ಥಳೀಯ ರಕ್ಷಣಾ ಸಿಬ್ಬಂದಿ ಮೃಗಾಲಯದಲ್ಲಿ ಯಾವುದೇ ಕಾರಣಕ್ಕೂ ಫೆನ್ಸಿಂಗ್ ದಾಟಿ ಮುಂದೆ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ನಿಯಮ ದಾಟಿ ಹೋದರೆ ಅಂತಹವರನ್ನು ಕಾನೂನಾತ್ಮಕವಾಗಿ ಶಿಕ್ಷಿಸಲಾಗುತ್ತದೆ ಮತ್ತು ಮೃಗಾಲಯ ಪ್ರವೇಶಿಸದಂತೆ ನಿಷೇಧಿಸಲಾಗುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾರೆ.
ಬ್ರಿಡ್ಜ್‌ಟನ್ ನಗರದ ಮನರಂಜನೆ ಮತ್ತು ಸಾರ್ವಜನಿಕ ವ್ಯವಹಾರಗಳ ನಿರ್ದೇಶಕ ಜಾನ್ ಮೆಡಿಕಾ ಅವರು ಈ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, "ನಮ್ಮ ಅತಿಥಿಗಳು ಮತ್ತು ಪ್ರವಾಸಿಗರ ಸುರಕ್ಷತೆಯೊಂದಿಗೆ ಪ್ರಾಣಿಗಳ ಉತ್ತಮ ಗುಣಮಟ್ಟದ ಆರೈಕೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ. ಯಾವುದೇ ಪ್ರವಾಸಿಗರ ನಡವಳಿಕೆ ಪ್ರಾಣಿಗಳು, ಸಿಬ್ಬಂದಿ ಮತ್ತು ಸಾರ್ವಜನಿಕರನ್ನು ಅಪಾಯಕಾರಿ ಪರಿಸ್ಥಿತಿಯಲ್ಲಿ ಇರಿಸುವುದು ಸ್ವೀಕಾರಾರ್ಹವಲ್ಲ ಮತ್ತು ಅದಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಇನ್ನು ನ್ಯೂಜೆರ್ಸಿಯ ಕೊಹನ್‌ಜಿಕ್ ಮೃಗಾಲಯದಲ್ಲಿ ರಿಷಿ ಮತ್ತು ಮಹೇಶ ಎಂಬ 2 ಬೆಂಗಾಲ್ ಟೈಗರ್ ಗಳಿದ್ದು, 2016ರಲ್ಲಿ ಇವು ಮರಿಗಳಾಗಿದ್ದಾಗ ಮೃಗಾಲಯಕ್ಕೆ ತರಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಂದಹಾಗೆ ಭಾರತೀಯ ಹುಲಿಗಳು ಎಂದೂ ಕರೆಯಲ್ಪಡುವ ಬಂಗಾಳ ಹುಲಿಗಳು ಅಳಿವಿನಂಚಿನಲ್ಲಿರುವ ಹುಲಿ ಜಾತಿಗಳಾಗಿವೆ. ಅಕ್ಟೋಬರ್ 2022ರ ಹೊತ್ತಿಗೆ, ಇವುಗಳಲ್ಲಿ ಕೇವಲ 3,500 ಹುಲಿಗಳು ಮಾತ್ರ ಕಾಡಿನಲ್ಲಿ ಉಳಿದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸೈಬೀರಿಯನ್ ಹುಲಿಗಳನ್ನು ಹೊರತು ಪಡಿಸಿದರೆ ಬೆಂಗಾಲ್ ಟೈಗರ್ ಜಾತಿಯ ಹುಲಿಗಳು ಜಗತ್ತಿನ 2ನೇ ಅತಿ ದೊಡ್ಡ ಹುಲಿಗಳಾಗಿವೆ.
Advertisement