ಢಾಕಾ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯಗಳ ವರದಿ ಬಗ್ಗೆ ಅಲ್ಲಿನ ಬಾಂಗ್ಲಾ ನ್ಯಾಷನಲ್ ಪಾರ್ಟಿ (BNP) ಕಾರ್ಯದರ್ಶಿ ಮಿರ್ಜಾ ಫಕ್ರುಲ್ ಇಸ್ಲಾಂ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತ- ಬಾಂಗ್ಲಾ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಹೊಸ ಅಧ್ಯಾಯವನ್ನು ಆರಂಭಿಸುವುದು ನಿರ್ಣಾಯಕವಾಗಿದ್ದು, ಇದಕ್ಕಾಗಿ ಭಾರತ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಗಡಿಪಾರು ಮಾಡಬೇಕಾಗುತ್ತದೆ, ಒಂದು ವೇಳೆ ಹಸೀನಾ ಭಾರತದಲ್ಲೇ ಇದ್ದರೆ, ಅದು ಬಾಂಗ್ಲಾ- ಭಾರತದ ಸಂಬಂಧಕ್ಕೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (BNP) ಯ ಎರಡನೇ ಪ್ರಭಾವಿ ನಾಯಕನಾಗಿರುವ ಮಿರ್ಜಾ ಫಕ್ರುಲ್ ಇಸ್ಲಾಂ, ಭಾರತಕ್ಕೆ ಸಂಬಂಧಿಸಿದಂತೆ ತಮ್ಮ ಪಕ್ಷ ಹಿಂದಿನ ಭಿನ್ನಾಭಿಪ್ರಾಯಗಳನ್ನು ಬಿಡಲು ಮತ್ತು ಸಹಕರಿಸಲು ಸಿದ್ದವಾಗಿದೆ ಎಂದು ಹೇಳಿದ್ದು ಭಾರತದೊಂದಿಗೆ ಬಲವಾದ ಸಂಬಂಧಕ್ಕಾಗಿ ತಮ್ಮ ಪಕ್ಷದ ಆಶಯವನ್ನು ಒತ್ತಿ ಹೇಳಿದರು.
ಪಿಟಿಐ ಗೆ ಸಂದರ್ಶನ ನೀಡಿರುವ ಮಿರ್ಜಾ ಫಕ್ರುಲ್ ಇಸ್ಲಾಂ, ಬಾಂಗ್ಲಾದೇಶದ ನೆಲದಲ್ಲಿ ಭಾರತದ ಭದ್ರತೆಗೆ ಧಕ್ಕೆ ತರುವಂತಹ ಯಾವುದೇ ಚಟುವಟಿಕೆಗಳನ್ನು BNP ಎಂದಿಗೂ ಅನುಮತಿಸುವುದಿಲ್ಲ ಎಂದ ಇದೇ ವೇಳೆ ಭರವಸೆ ನೀಡಿದರು.
ಬಾಂಗ್ಲಾದೇಶದ ಜನರ ಮನಸ್ಸನ್ನು ಅರ್ಥಮಾಡಿಕೊಳ್ಳಲು ವಿಫಲವಾಗಿರುವುದು ಭಾರತದ ರಾಜತಾಂತ್ರಿಕ ವೈಫಲ್ಯ ಎಂದು ಪ್ರತಿಪಾದಿಸಿದ ಫಕ್ರುಲ್ ಇಸ್ಲಾಂ, ಜನರ ದಂಗೆಯ ನಂತರ ಹಸೀನಾ ಸರ್ಕಾರದ ಪತನದ ನಂತರವೂ ಭಾರತದ ಸರ್ಕಾರ ಬಾಂಗ್ಲಾ ಸರ್ಕಾರದ ಭಾಗವಾಗಿರುವ BNP ಯ ಜೊತೆ ಮಾತನಾಡಿಲ್ಲ. ಚೀನಾ, ಅಮೇರಿಕಾ, ಬ್ರಿಟನ್ ಮತ್ತು ಪಾಕಿಸ್ತಾನಗಳು ಈಗಾಗಲೇ ಬಿಎನ್ ಪಿಯನ್ನು ತಲುಪುವ ಕೆಲಸ ಮಾಡಿವೆ ಎಂದು ಹೇಳಿದ್ದಾರೆ.
ಬಾಂಗ್ಲಾದಲ್ಲಿರುವ ಅಲ್ಪಸಂಖ್ಯಾತರ ಸುರಕ್ಷತೆ ಬಾಂಗ್ಲಾದ ಆಂತರಿಕ ವಿಚಾರವಾಗಿದ್ದು, ಘಟನೆಗಳು ಕೋಮುವಾದಕ್ಕಿಂತ ಹೆಚ್ಚಾಗಿ ರಾಜಕೀಯ ಪ್ರೇರಿತವಾಗಿವೆ, ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿ ವರದಿಗಳು ವಾಸ್ತವಿಕವಾಗಿ ತಪ್ಪು ಎಂದು ಹೇಳಿದ್ದಾರೆ.
Advertisement