
ನವದೆಹಲಿ: ಅಮೆರಿಕದಲ್ಲಿ ಕೇರಳ ಮೂಲದ ದಂಪತಿ ಹಾಗೂ ಅವರ ಅವಳಿ ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. ಆನಂದ್ ಸುಜಿತ್ ಹೆನ್ರಿ ಹಾಗೂ ಪತ್ನಿ ಆಲಿಸ್ ಪ್ರಿಯಾಂಕಾ ಮತ್ತು 4 ವರ್ಷದ ಇಬ್ಬರು ಅವಳಿ ಮಕ್ಕಳು ಮೃತಪಟ್ಟಿದ್ದಾರೆ.
ಸಂಬಂಧಿಕರು ಕರೆ ಮಾಡಿದಾಗ ರಿಸೀವ್ ಮಾಡದ ಕಾರಣ ಅವರು ಮನೆಗೆ ಬಂದಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮನೆಗೆ ಬಂದು ತಪಾಸಣೆ ನಡೆಸಿದಾಗ ದಂಪತಿ ಶವ ಬಾತ್ ರೂಮ್ನಲ್ಲಿ ಕಂಡುಬಂದಿದೆ. ಇಬ್ಬರು ಮಕ್ಕಳು ಕೋಣೆಯಲ್ಲಿ ಶವವಾಗಿದ್ದರು.
ಸ್ಯಾನ್ ಮಾಟಿಯೊ ಪೊಲೀಸರ ಪ್ರಕಾರ, ಇಬ್ಬರು ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ. ಇನ್ನಿಬ್ಬರ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಪ್ರಕರಣವನ್ನು ಕೊಲೆ- ಆತ್ಮಹತ್ಯೆ ಎಂದು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಆನಂದ್ ಮತ್ತು ಆಲಿಸ್ ಇಬ್ಬರೂ ಐಟಿ ವೃತ್ತಿಪರರಾಗಿದ್ದು, ಕಳೆದ ಒಂಬತ್ತು ವರ್ಷಗಳಿಂದ ಅಮೇರಿಕಾದಲ್ಲಿ ನೆಲೆಸಿದ್ದರು. ಆನಂದ್ ಸಾಫ್ಟ್‌ವೇರ್ ಇಂಜಿನಿಯರ್ ಮತ್ತು ಆಲಿಸ್ ಹಿರಿಯ ವಿಶ್ಲೇಷಕರಾಗಿದ್ದರು. ಅವರು ಎರಡು ವರ್ಷಗಳ ಹಿಂದೆ ನ್ಯೂಜೆರ್ಸಿಯಿಂದ ಸ್ಯಾನ್ ಮಾಟಿಯೊ ಕೌಂಟಿಗೆ ತೆರಳಿದ್ದರು.
ಸಾಫ್ಟ್‌ವೇರ್ ಎಂಜಿನಿಯರ್ ಆನಂದ್ ಮತ್ತು ಹಿರಿಯ ವಿಶ್ಲೇಷಕ ಆಲಿಸ್ ಎರಡು ವರ್ಷಗಳ ಹಿಂದೆ ನ್ಯೂಜೆರ್ಸಿಯಿಂದ ಸ್ಯಾನ್ ಮ್ಯಾಟಿಯೊ ಕೌಂಟಿಗೆ ಸ್ಥಳಾಂತರಗೊಂಡಿದ್ದರು. ನೆರೆಹೊರೆಯವರು ಹಾಗೂ ಸಹೋದ್ಯೋಗಿಗಳು ಇವರು ನಮಗೆ ಉತ್ತಮ ಸ್ನೇಹಿತರಾಗಿದ್ದರು, ಒಳ್ಳೆಯವರು ಎಂದೇ ಹೇಳಿದ್ದಾರೆ.
ನ್ಯಾಯಾಲಯದ ದಾಖಲೆ ಪ್ರಕಾರ ಆನಂದ್ ಡಿಸೆಂಬರ್ 2016ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ ಅದಲ್ಲಿಗೇ ನಿಂತಿತ್ತು. ಸ್ಯಾನ್ ಮ್ಯಾಟಿಯೊ ಕೌಂಟಿಯ ಕ್ರಿಮಿನಲ್ ಇನ್ವೆಸ್ಟಿಗೇಷನ್ ಬ್ಯೂರೋ (CIB) ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಮೃತದೇಹಗಳನ್ನು ಸ್ಯಾನ್ ಮ್ಯಾಟಿಯೊ ಕೌಂಟಿ ಕರೋನರ್ ಅವರ ವಶಕ್ಕೆ ತೆಗೆದುಕೊಳ್ಳಲಾಗಿದೆ.
Advertisement