ಆಗಸದಲ್ಲೇ ಹಾರಿಹೋದ ವಿಮಾನದ ಕಿಟಕಿ; ತುರ್ತು ಲ್ಯಾಂಡಿಂಗ್, ಪೈಲಟ್ ಸಮಯ ಪ್ರಜ್ಞೆಯಿಂದ 180 ಮಂದಿ ಜೀವ ಸೇಫ್!

ಒಂಟಾರಿಯೊಗೆ ತೆರಳುತ್ತಿದ್ದ ವಿಮಾನವೊಂದು ಮಾರ್ಗ ಮಧ್ಯೆಯೇ ಬಾಗಿಲು ಮುರಿದು ಹಾರಿಹೋದ ಪರಿಣಾಮ ವಿಮಾನ ತುರ್ತು ಲ್ಯಾಂಡಿಂಗ್ ಮಾಡಿರುವ ಘಟನೆ ವರದಿಯಾಗಿದೆ.
ಆಗಸದಲ್ಲೇ ಹಾರಿಹೋದ ವಿಮಾನದ ಕಿಟಕಿ
ಆಗಸದಲ್ಲೇ ಹಾರಿಹೋದ ವಿಮಾನದ ಕಿಟಕಿ

ಕ್ಯಾಲಿಫೋರ್ನಿಯಾ: ಒಂಟಾರಿಯೊಗೆ ತೆರಳುತ್ತಿದ್ದ ವಿಮಾನವೊಂದು ಮಾರ್ಗ ಮಧ್ಯೆಯೇ ಬಾಗಿಲು ಮುರಿದು ಹಾರಿಹೋದ ಪರಿಣಾಮ ವಿಮಾನ ತುರ್ತು ಲ್ಯಾಂಡಿಂಗ್ ಮಾಡಿರುವ ಘಟನೆ ವರದಿಯಾಗಿದೆ.

ಅಲಾಸ್ಕಾ ಏರ್‌ಲೈನ್ಸ್‌ನ ಬೋಯಿಂಗ್ 737 ವಿಮಾನದ ಕಿಟಕಿಯು ಗಾಳಿಯ ಒತ್ತಡಕ್ಕೆ ಸಿಲುಕಿ ಹಾರಿಹೋದ ಪರಿಣಾಮ, ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ಒರೆಗಾನ್‌ನ ಪೋರ್ಟ್‌ಲ್ಯಾಂಡ್‌ನಿಂದ ಕ್ಯಾಲಿಫೋರ್ನಿಯಾದ ಒಂಟಾರಿಯೊಗೆ ಹಾರುತ್ತಿದ್ದ ಅಲಾಸ್ಕಾ ಏರ್‌ಲೈನ್ಸ್ ವಿಮಾನದಲ್ಲಿ ಕಿಟಕಿ ಒಡೆದು ಹಾರಿಹೋಗಿತ್ತು. ಪರಿಣಾಮ ಶುಕ್ರವಾರ ಸಂಜೆ ಪೋರ್ಟ್‌ಲ್ಯಾಂಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೈಲಟ್‌ಗೆ ತುರ್ತು ಲ್ಯಾಂಡಿಂಗ್ ಮಾಡಬೇಕಾಯಿತು.

ಆನ್‌ಲೈನ್‌ನಲ್ಲಿ ಲಭ್ಯವಿರುವ FAA ದಾಖಲೆಗಳ ಪ್ರಕಾರ, ಅಲಾಸ್ಕಾ ಫ್ಲೈಟ್ 1282, ಬೋಯಿಂಗ್ 737-9 MAX ನಲ್ಲಿ ಈ ಘಟನೆ ಸಂಭವಿಸಿದ್ದು, ಇದನ್ನು ನವೆಂಬರ್ 2023 ರಲ್ಲಿ ಫೆಡರಲ್ ಏವಿಯೇಷನ್ ಅಥಾರಿಟಿ (FAA) ನಿಂದ ಪ್ರಮಾಣೀಕರಿಸಲಾಯಿತು.

ವಿಮಾನ ಆಗಸದಲ್ಲಿ 16,000 ಅಡಿ ಎತ್ತರದಲ್ಲಿರುವಾಗಲೇ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ವಿಮಾನದ ಕಿಟಕಿಯಿಂದ ಸಣ್ಣ ಶಬ್ಧ ಕೇಳಿಬಂದಿದ್ದು, ನೋಡ ನೋಡುತ್ತಲೇ ಕಿಟಕಿಯಲ್ಲಿ ರಂದ್ರವಾಗಿ ಗಾಳಿ ಒತ್ತಡಕ್ಕೆ ಸಿಲುಕಿ ಹಾರಿ ಹೋಯಿತು. ಈ ವೇಳೆ ಕಿಟಕಿಯ ಬಳಿ ಕುಳಿತಿದ್ದ ಮಗು ಗಾಳಿ ಒತ್ತಡಕ್ಕೆ ಸಿಲುಕಿ ಅಪಾಯಕ್ಕೆ ಸಿಲುಕಿತ್ತು. ಆದರೆ ಮಗುವಿನ ಅಂಗಿ ಮಾತ್ರ ಹರಿದು ಹೋಗಿದೆ ಎಂದು ವರದಿಯಾಗಿದೆ. ಕೆಲವು ಪ್ರಯಾಣಿಕರ ಫೋನ್‌ಗಳೂ ಕೂಡ ಕಿಟಿಕಿ ಮೂಲಕ ಹಾರಿಹೋಗಿದ್ದು, ಡಿಕಂಪ್ರೆಷನ್‌ನಿಂದಾಗಿ ಕಿಟಕಿಯ ಪಕ್ಕದ ಆಸನವೂ ಕೂಡ ಹಾರಿಹೋಗಿದೆ.

ಈ ವೇಳೆ ವಿಮಾನದ ಆಮ್ಲಜನಕದ ಮಾಸ್ಕ್ ಗಳು ಕೆಳಗೆ ಬಿದ್ದಿದ್ದು, ಕೆಲ ಪ್ರಯಾಣಿಕರು ಉಸಿರಾಟದ ತೊಂದರೆಯಿಂದಾಗಿ ಅವುಗಳನ್ನು ಬಳಸಿಕೊಂಡರು. 

ಪೈಲಟ್ ಸಮಯ ಪ್ರಜ್ಞೆಯಿಂದ ಉಳಿದ 180 ಮಂದಿ ಜೀವ
ಇನ್ನು ವಿಮಾನದಲ್ಲಿ 174 ಪ್ರಯಾಣಿಕರು ಮತ್ತು 6 ಸಿಬ್ಬಂದಿ ಸೇರಿ ಒಟ್ಟು 180 ಮಂದಿ ಇದ್ದರು. ಕಿಟಕಿ ಹಾರಿಹೋಗುತ್ತಿದ್ದಂತೆಯೇ ಪೈಲಟ್ ವಾಯು ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದು, ಈ ವೇಳೆ ಅವರಿಗೆ ಸಮೀಪದ ಪೋರ್ಟ್‌ಲ್ಯಾಂಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡುವಂತೆ ಸೂಚಿಸಿದ್ದಾರೆ. ಪೈಲಟ್ ಕೂಡ ತಡ ಮಾಡದೇ ಪೋರ್ಟ್‌ಲ್ಯಾಂಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ವಿಮಾನ ಕೊಂಡೊಯ್ದು ತುರ್ತು ಲ್ಯಾಂಡಿಂಗ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ವಿಡಿಯೋಗಳು ವ್ಯಾಪಕ ವೈರಲ್ ಆಗುತ್ತಿವೆ.

ಅಲಾಸ್ಕಾ ಏರ್‌ಲೈನ್ಸ್ ಕೂಡ ಟ್ವಿಟರ್ ನಲ್ಲಿ ಘಟನೆಯನ್ನು ಒಪ್ಪಿಕೊಂಡಿದ್ದು, ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com