
ಇಸ್ಲಾಮಾಬಾದ್: ಬಲೂಚಿಸ್ತಾನ ಪ್ರಾಂತ್ಯದ ಉಗ್ರ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ ಒಂದು ದಿನದ ನಂತರ ಪಾಕಿಸ್ತಾನ ಬುಧವಾರ ಇರಾನ್‌ನಲ್ಲಿರುವ ತನ್ನ ರಾಯಭಾರಿಯನ್ನು ವಾಪಸ್ ಕರೆಯಿಸಿಕೊಂಡಿದೆ ಮತ್ತು ಮುಂಬರುವ ದಿನಗಳಲ್ಲಿ ಎಲ್ಲಾ ಯೋಜಿತ ಉನ್ನತ ಮಟ್ಟದ ದ್ವಿಪಕ್ಷೀಯ ಭೇಟಿಗಳನ್ನು ಸ್ಥಗಿತಗೊಳಿಸಿದೆ.
ಕಳೆದ ರಾತ್ರಿ ಇರಾನ್ ನಡೆದಸಿದ ವೈಮಾನಿಕ ದಾಳಿ ಪಾಕಿಸ್ತಾನದ ಸಾರ್ವಭೌಮತ್ವದ ಮೇಲೆ ನಡೆದ ಅಪ್ರಚೋದಿತ ದಾಳಿಯಾಗಿದ್ದು, ಇದು ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ. ಇದರಿಂದಾಗಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಪಾಕಿಸ್ತಾನ ಹೇಳಿದೆ.
ಈ ಕಾನೂನುಬಾಹಿರ ಕೃತ್ಯ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಮತ್ತು ಈ ದಾಳಿಯನ್ನು ಪಾಕಿಸ್ತಾನ ಸರ್ಕಾರವು ತೀವ್ರವಾಗಿ ಖಂಡಿಸಿದೆ ಎಂದು ವಿದೇಶಾಂಗ ಕಚೇರಿ ಹೇಳಿದೆ.
"ಪಾಕಿಸ್ತಾನವು ಇರಾನ್‌ನಿಂದ ತನ್ನ ರಾಯಭಾರಿಯನ್ನು ಹಿಂಪಡೆಯಲು ನಿರ್ಧರಿಸಿದೆ ಮತ್ತು ಪ್ರಸ್ತುತ ಇರಾನ್‌ಗೆ ಭೇಟಿ ನೀಡುತ್ತಿರುವ ಪಾಕಿಸ್ತಾನದ ಇರಾನ್ ರಾಯಭಾರಿ ಸದ್ಯಕ್ಕೆ ಹಿಂತಿರುಗದಿರಬಹುದು ಎಂದು ನಾವು ಅವರಿಗೆ ತಿಳಿಸಿರುವುದಾಗಿ ಪಾಕಿಸ್ತಾನ ವಿದೇಶಾಂಗ ಇಲಾಖೆಯ ವಕ್ತಾರೆ ಮುಮ್ತಾಜ್ ಜಹ್ರಾ ಬಲೋಚ್ ಹೇಳಿದ್ದಾರೆ.
ಮುಂಬರುವ ದಿನಗಳಲ್ಲಿ ಪಾಕಿಸ್ತಾನ ಮತ್ತು ಇರಾನ್ ನಡುವೆ ನಡೆಯುವ ಅಥವಾ ನಿಗದಿಯಾಗಿದ್ದ ಎಲ್ಲಾ ಉನ್ನತ ಮಟ್ಟದ ಭೇಟಿಗಳನ್ನು ಸ್ಥಗಿತಗೊಳಿಸಲು ನಾವು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
Advertisement