ಹಮಾಸ್ ಸೇನಾ ಮುಖ್ಯಸ್ಥನ ಗುರಿಯಾಗಿಸಿ ಇಸ್ರೇಲ್ ವೈಮಾನಿಕ ದಾಳಿ: 71 ಪ್ಯಾಲೆಸ್ತೀನಿಯರು ಸಾವು
ಗಾಜಾ: ಹಮಾಸ್‌ನ ಸೇನಾ ಮುಖ್ಯಸ್ಥನನ್ನು ಗುರಿಯಾಗಿಸಿಕೊಂಡು ಇಸ್ರೇಲಿ ಸೇನೆಯು ಗಾಜಾದ ಮೇಲೆ ಅತ್ಯಂತ ಭೀಕರ ವೈಮಾನಿಕ ದಾಳಿ ನಡೆಸಿದೆ. ಶನಿವಾರದಂದು ಗಾಜಾದಲ್ಲಿ ಹಮಾಸ್ ಸೇನಾ ಮುಖ್ಯಸ್ಥ ಮೊಹಮ್ಮದ್ ಡೀಫ್ ನನ್ನು ಗುರಿಯಾಗಿಸಿಕೊಂಡು ಇಸ್ರೇಲಿ ವೈಮಾನಿಕ ದಾಳಿ ನಡೆಸಿದೆ ಎಂದು ಗಾಜಾ ಭದ್ರತಾ ಅಧಿಕಾರಿ ಮತ್ತು ಇಸ್ರೇಲಿ ಸೇನೆ ತಿಳಿಸಿದ್ದಾರೆ.
ಇಸ್ರೇಲ್ ವಾಯುದಾಳಿಯಲ್ಲಿ ಕನಿಷ್ಠ 71 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಎನ್‌ಕ್ಲೇವ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ. ಆದರೆ ದಾಳಿಯಲ್ಲಿ ಡೀಫ್ ಸಾವನ್ನಪ್ಪಿದ್ದಾನೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಭದ್ರತಾ ಅಧಿಕಾರಿ ಹೇಳಿದ್ದಾರೆ.
ಹಮಾಸ್ ಭಯೋತ್ಪಾದಕ ಮೊಹಮ್ಮದ್ ಡೀಫ್ ಅಲ್-ಮವಾಸಿಯ ಕಟ್ಟಡವೊಂದರಲ್ಲಿ ಅಡಗಿಕೊಂಡಿದ್ದಾನೆ ಎಂಬ ಸ್ಪಷ್ಟ ಮಾಹಿತಿ ಸಿಗುತ್ತಿದ್ದಂತೆ ಇಸ್ರೇಲ್ ವಾಯುದಾಳಿ ನಡೆಸಿತ್ತು. ಅಕ್ಟೋಬರ್ 7ರ ಇಸ್ರೇಲ್ ಮೇಲಿನ ಹಮಾಸ್ ಭೀಕರ ದಾಳಿಯ ಮಾಸ್ಟರ್‌ಮೈಂಡ್‌ಗಳಲ್ಲಿ ಡೀಫ್ ಒಬ್ಬ ಎನ್ನಲಾಗಿದೆ. ಈ ಹಿಂದೆ ಆತನನ್ನು ಕೊಲ್ಲುವ ಉದ್ದೇಶದಿಂದ ಇಸ್ರೇಲ್ ನಡೆಸಿದ ಇತರ ಏಳು ದಾಳಿಗಳಲ್ಲಿ ಆತ ಬದುಕುಳಿದಿದ್ದನು. ಇಸ್ರೇಲ್‌ನ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಡೀಫ್ ಅಗ್ರಸ್ಥಾನದಲ್ಲಿದ್ದಾನೆ. ಇನ್ನು ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 71 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದು 289 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ