
ದುಬೈ: ದುಬೈ ಆಡಳಿತಗಾರನ ಪುತ್ರಿ ಶೈಖಾ ಮಹ್ರಾ ಬಿಂತ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ತಮ್ಮ ಪತಿ ಶೇಖ್ ಮನಾ ಬಿನ್ ಮೊಹಮ್ಮದ್ ಬಿನ್ ರಶೀದ್ ಬಿನ್ ಮನಾ ಅಲ್ ಮಕ್ತೌಮ್ ಅವರಿಗೆ ಇನ್ಸ್ಟಾಗ್ರಾಮ್ ಮೂಲಕ ವಿಚ್ಛೇದನ ನೀಡಿದ್ದಾರೆ.
ರಾಜಕುಮಾರಿ ಶೈಖಾ ಮಹ್ರಾ ಅವರು ಇನ್ಸ್ಟಾಗ್ರಾಮ್ ನಲ್ಲಿ ಮೂರು ಬಾರಿ ತಲಾಖ್ ಹೇಳುವ ಮೂಲಕ ಪತಿಗೆ ವಿಚ್ಛೇದನ ನೀಡುತ್ತಿರುವುದಾಗಿ ಸಾರ್ವಜನಿಕವಾಗಿ ಘೋಷಿಸಿದ್ದಾರೆ.
"ಆತ್ಮೀಯ ಪತಿ," ನೀವು ಇತರ ಸಂಗಾತಿಯೊಂದಿಗೆ ನಿರತರಾಗಿರುವ ಹೊತ್ತಲ್ಲೇ ನಾನು ಈ ಮೂಲಕ ನಮ್ಮ ವಿಚ್ಛೇದನವನ್ನು ಘೋಷಿಸುತ್ತಿದ್ದೇನೆ. ನಾನು ನಿಮಗೆ ವಿಚ್ಛೇದನ ನೀಡುತ್ತಿದ್ದೇನೆ ಎಂದು ಮೂರು ಬಾರಿ ಬರೆದಿದ್ದು. ಕಾಳಜಿ ವಹಿಸಿ. ನಿಮ್ಮ ಮಾಜಿ ಪತ್ನಿ” ಎಂದು ರಾಜಕುಮಾರಿ ಪೋಸ್ಟ್ ಮಾಡಿದ್ದಾರೆ.
ದಂಪತಿಗಳು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ ಎರಡು ತಿಂಗಳ ನಂತರ ಈ ಘೋಷಣೆ ಬಂದಿದೆ.
ಈ ಸುದ್ದಿಯು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ. ದಂಪತಿಗಳು ಸಾಮಾಜಿಕ ಮಾಧ್ಯಮದಲ್ಲಿ ಒಬ್ಬರನ್ನೊಬ್ಬರು ಅನ್ ಫಾಲೋ ಮಾಡಿದ್ದಾರೆ ಮತ್ತು ತಮ್ಮ ಪ್ರೊಫೈಲ್‌ಗಳಿಂದ ಒಟ್ಟಿಗೆ ಇರುವ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ.
ಇಸ್ಲಾಮಿಕ್ ಕಾನೂನಿನಲ್ಲಿ, ತ್ವರಿತ ವಿಚ್ಛೇದನದ ಪ್ರಕ್ರಿಯೆಯನ್ನು “ತಲಾಕ್-ಎ-ಬಿದ್ದತ್” ಎಂದು ಕರೆಯಲಾಗುತ್ತದೆ. ಅಲ್ಲಿ ಪತಿ ತಕ್ಷಣವೇ ಮದುವೆಯನ್ನು ರದ್ದು ಮಾಡಲು “ತಲಾಖ್” ಅನ್ನು ಮೂರು ಬಾರಿ ಹೇಳುತ್ತಾರೆ. ಸಾಂಪ್ರದಾಯಿಕವಾಗಿ, ಇಸ್ಲಾಮಿಕ್ ಕಾನೂನಿನ ಅನೇಕ ವ್ಯಾಖ್ಯಾನಗಳಲ್ಲಿ ಪುರುಷರು ಮಾತ್ರ ತಲಾಖ್ ಹೇಳಬಹುದು. ಮತ್ತೊಂದೆಡೆ, ಮಹಿಳೆಯರು “ಖುಲಾ” ಎಂದು ಕರೆಯಲ್ಪಡುವ ವಿಭಿನ್ನ ಪ್ರಕ್ರಿಯೆಯ ಮೂಲಕ ವಿಚ್ಛೇದನವನ್ನು ಪಡೆಯುವ ಆಯ್ಕೆಯನ್ನು ಹೊಂದಿದ್ದಾರೆ.
ಶೈಖಾ ಮಹ್ರಾ ಅವರು ಕೈಗಾರಿಕೋದ್ಯಮಿ ಶೇಖ್ ಮನ ಬಿನ್ ಮೊಹಮ್ಮದ್ ಬಿನ್ ರಶೀದ್ ಬಿನ್ ಮನ ಅಲ್ ಮಕ್ತೌಮ್ ಅವರನ್ನು ಮೇ 2023 ರಲ್ಲಿ ವಿವಾಹವಾದರು. ಮದುವೆ ಆಗಿ ಒಂದು ವರ್ಷದ ನಂತರ ಮಗಳು ಜನಿಸಿದ್ದಳು.
Advertisement