Bangladesh ಹಿಂಸಾಚಾರ: ಕನಿಷ್ಟ 105 ಮಂದಿ ಸಾವು, ಕರ್ಫ್ಯೂ ಜಾರಿ, 300ಕ್ಕೂ ಅಧಿಕ ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್!

ಮೀಸಲಾತಿ ವಿರೋಧಿಸಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಈ ವರೆಗೂ ಸುಮಾರು 105 ಮಂದಿ ಸಾವಿಗಿಡಾಗಿದ್ದಾರೆ ಎಂದು ತಿಳಿದುಬಂದಿದೆ.
Bangladesh Protests
ಬಾಂಗ್ಲಾದೇಶದಲ್ಲಿ ಪ್ರತಿಭಟನೆ
Updated on

ಢಾಕಾ: ಮೀಸಲಾತಿ ವಿರೋಧಿಸಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಈ ವರೆಗೂ ಸುಮಾರು 105 ಮಂದಿ ಸಾವಿಗಿಡಾಗಿದ್ದಾರೆ ಎಂದು ತಿಳಿದುಬಂದಿದೆ.

ಸರ್ಕಾರಿ ನೌಕರಿಗಳಲ್ಲಿ ಮೀಸಲಾತಿ ವಿರೋಧಿಸಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ಶುಕ್ರವಾರವೂ ಮುಂದುವರೆದಿದ್ದು, ವಿವಿಧ ಪ್ರಕರಣಗಳಲ್ಲಿ ಈ ವರೆಗೂ ಸುಮಾರು 105 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ವಾರದ ಹಿಂದೆ ಆರಂಭಗೊಂಡಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಗುರುವಾರದವರೆಗೆ ದೇಶದ ವಿವಿಧೆಡೆ 75 ಮಂದಿ ಮೃತಪಟ್ಟಿದ್ದರು. ಶುಕ್ರವಾರ ಢಾಕಾದ ಮೂರು ಆಸ್ಪತ್ರೆಗಳಲ್ಲಿ 24 ಮಂದಿ ಹಾಗೂ ರಂಗ್‌ಪುರದಲ್ಲಿ ಆರು ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

Bangladesh Protests
ಕಡಲು, ಕಡಲ ಆರ್ಥಿಕತೆ ಸಂಬಂಧಗಳನ್ನು ಹೆಚ್ಚಿಸಿಕೊಳ್ಳಲು ಭಾರತ- ಬಾಂಗ್ಲಾದೇಶ ನಡುವೆ ಒಪ್ಪಂದ

ಕೆಲವೆಡೆ ಇಂಟರ್ನೆಟ್‌ ಹಾಗೂ ಮೊಬೈಲ್‌ ಸೇವೆ ಕಡಿತಗೊಳಿಸಲಾಗಿದ್ದು ಪ್ರತಿಭಟನಕಾರರ ಮೇಲೆ ಪೊಲೀಸರು, ಭದ್ರತಾ ಪಡೆಗಳು ಗುಂಡಿನ ದಾಳಿ, ಅಶ್ರುವಾಯು ಪ್ರಯೋಗಿಸಿದ್ದಾರೆ. ಕಳೆದೊಂದು ವಾರದಲ್ಲಿ ಸಂಘರ್ಷದಲ್ಲಿ ಮೃತಪಟ್ಟವರ ಸಂಖ್ಯೆ 105ಕ್ಕೆ ಏರಿಕೆಯಾಗಿದೆ. ಶುಕ್ರವಾರ ಬೆಳಿಗ್ಗೆ ರಾಜಧಾನಿ ಢಾಕಾದಲ್ಲಿ ಇಂಟರ್‌ನೆಟ್‌ ಸೇವೆ ಆರಂಭಗೊಂಡರೂ, ನಿಧಾನಗತಿಯಿಂದ ಸಾಮಾಜಿಕ ಜಾಲತಾಣ ಗಳಾದ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಪುಟಗಳು ತೆರೆಯುತ್ತಿರಲಿಲ್ಲ.

ಮಾಧ್ಯಮ, ಪತ್ರಿಕೆ ದತ್ತಾಂಶ ಕಚೇರಿಗಳ ಮೇಲೂ ದಾಳಿ

‘ಗುರುವಾರ ಪ್ರತಿಭಟನಕಾರರು ಡೇಟಾ ಕೇಂದ್ರಗಳು, ಕೆಲ ಮಾಧ್ಯಮ ಮತ್ತು ಪತ್ರಿಕಾ ಕಚೇರಿಗಳ ಮೇಲೂ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ಕೆಲವು ಉಪಕರಣಗಳು ಬೆಂಕಿಗೆ ಆಹುತಿಯಾಗಿವೆ. ಅಲ್ಲದೆ ಸಾಕಷ್ಟು ತಾಂತ್ರಿಕ ಉಪಕರಣಗಳು ಹಾನಿಗೊಳಗಾಗಿದ್ದು, ಇದರಿಂದ ಹಿಂದಿನಂತೆ ಮತ್ತೆ ಇಂಟರ್‌ನೆಟ್‌ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ’ ಎಂದು ಬಾಂಗ್ಲಾದೇಶ ದೂರಸಂಪರ್ಕ ನಿಯಂತ್ರಣ ಆಯೋಗವು ಶುಕ್ರವಾರ ಹೇಳಿಕೆ ನೀಡಿದೆ.

ಕರ್ಫ್ಯೂ ಜಾರಿ

ವಿದ್ಯಾರ್ಥಿಗಳ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ 105 ಸಾವನ್ನಪ್ಪಿರುವ ಬೆನ್ನಲ್ಲೇ ಇದೀಗ ಬಾಂಗ್ಲಾದೇಶ ಸರ್ಕಾರ ದೇಶದಲ್ಲಿ ಕರ್ಫ್ಯೂ ಜಾರಿ ಮಾಡಿದೆ. ಲಕ್ಷಾಂತರ ಸೈನಿಕರನ್ನು ಕಾರ್ಯಾಚರಣೆಗೆ ನಿಯೋಜಿಸಿದ್ದು, ದೇಶಾದ್ಯಂತ ಕಟ್ಟೆಚ್ಚರ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.

300ಕ್ಕೂ ಅಧಿಕ ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್

ಬಾಂಗ್ಲಾದೇಶದಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯಿಂದಾಗಿ ಭಾರತೀಯ ವಿದ್ಯಾರ್ಥಿಗಳು ಅನ್ಯ ಮಾರ್ಗವಿಲ್ಲದೇ ಸ್ವದೇಶಕ್ಕೆ ವಾಪಸ್ ಆಗುವಂತಾಗಿದೆ. ಸಂಘರ್ಷದಿಂದಾಗಿ ಅಲ್ಲಿನ ಸಾರಿಗೆ ಸೇವೆ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಲಭ್ಯವಿರುವ ವಿಧಾನಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್ ಆಗುತ್ತಿದ್ದಾರೆ. ಶುಕ್ರವಾರವಷ್ಟೇ ಈಶಾನ್ಯದಲ್ಲಿ ಸುಮಾರು 300 ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು ಇಂಡೋ-ಭಾರತ ಗಡಿ ಕೇಂದ್ರಗಳ ಮೂಲಕ ಭಾರತಕ್ಕೆ ಆಗಮಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತಕ್ಕೆ ಹಿಂದಿರುಗಿದ ಅನೇಕ ವಿದ್ಯಾರ್ಥಿಗಳು ಎಂಬಿಬಿಎಸ್ ಪದವಿಗಳನ್ನು ಪಡೆಯುತ್ತಿದ್ದರು ಮತ್ತು ಅವರಲ್ಲಿ ಹೆಚ್ಚಿನವರು ಉತ್ತರ ಪ್ರದೇಶ, ಹರಿಯಾಣ, ಮೇಘಾಲಯ ಮತ್ತು ಜಮ್ಮು ಮತ್ತು ಕಾಶ್ಮೀರದ ಮೂಲದವರು ಎನ್ನಲಾಗಿದೆ. ವಿದ್ಯಾರ್ಥಿಗಳು ಶುಕ್ರವಾರ ಹಿಂದಿರುಗಲು ಬಳಸುತ್ತಿದ್ದ ಎರಡು ಪ್ರಮುಖ ಮಾರ್ಗಗಳೆಂದರೆ ತ್ರಿಪುರಾದ ಅಗರ್ತಲಾ ಬಳಿಯ ಅಖುರಾಹ್‌ನಲ್ಲಿರುವ ಅಂತರಾಷ್ಟ್ರೀಯ ಭೂ ಬಂದರು ಮತ್ತು ಮೇಘಾಲಯದ ದೌಕಿಯಲ್ಲಿರುವ ಅಂತರಾಷ್ಟ್ರೀಯ ಭೂ ಬಂದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿವಿಗಳು ಬಂದ್

ಢಾಕಾ ವಿಶ್ವವಿದ್ಯಾನಿಲಯದಲ್ಲಿ ಹಿಂಸಾಚಾರ ಸೋಮವಾರದಿಂದ ಗಮನಾರ್ಹವಾಗಿ ಉಲ್ಬಣಗೊಂಡಿದ್ದು, ಈವರೆಗೂ ಆರು ಜನರು ಸಾವನ್ನಪ್ಪಿದ್ದಾರೆ. ಪರಿಣಾಮ ದೇಶಾದ್ಯಂತ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಸರ್ಕಾರವು ಆದೇಶ ನೀಡಿದೆ.

ಏನಿದು ಮೀಸಲಾತಿ ವಿವಾದ, ವಿರೋಧ ಏಕೆ?

1971ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಯುದ್ಧದಲ್ಲಿ ಹೋರಾಡಿದ ಯೋಧರ ಮಕ್ಕಳು ಸೇರಿದಂತೆ ನಿರ್ದಿಷ್ಟ ಗುಂಪುಗಳಿಗೆ ಸರ್ಕಾರಿ ಉದ್ಯೋಗದ ನೇಮಕಾತಿ ವೇಳೆ ಶೇ 50ರಷ್ಟು ಮೀಸಲಾತಿ ನಿಗದಿಗೊಳಿಸಿ ಬಾಂಗ್ಲಾದೇಶ ಸರ್ಕಾರ ಆದೇಶ ಹೊರಡಿಸಿತ್ತು. ಈ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿ ಸಂಘಟನೆಗಳು, ‘ಅರ್ಹತೆ’ಗೆ ಅನುಗುಣವಾಗಿ ನೇಮಕಾತಿ ವ್ಯವಸ್ಥೆ ಜಾರಿಗೆ ತರಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿವೆ.

‘ಸ್ವಾತಂತ್ರ್ಯ ಚಳವಳಿಯ ನೇತೃತ್ವ ವಹಿಸಿದ್ದ ಪ್ರಧಾನಿ ಶೇಕ್‌ ಹಸೀನಾ ನೇತೃತ್ವದ ಅವಾಮಿ ಲೀಗ್‌ ಪಕ್ಷದ ಬೆಂಬಲಿಗರೇ ಮೀಸಲಾತಿಯಿಂದ ಹೆಚ್ಚಿನ ಲಾಭ ಪಡೆಯಲಿದ್ದು, ಈ ನಿರ್ಧಾರ ತಾರತಮ್ಯದಿಂದ ಕೂಡಿದೆ’ ಎಂದು ಪ್ರತಿಭಟನಕಾರರು ವಾದಿಸಿದ್ದಾರೆ. ಆದರೆ ಮೀಸಲಾತಿಯನ್ನು ಸಮರ್ಥಿಸಿಕೊಂಡಿರುವ ಪ್ರಧಾನಿ, ‘ದೇಶಕ್ಕಾಗಿ ಹೋರಾಡಿದ ಯೋಧರ ಕುಟುಂಬಗಳು ಗೌರವ ಪಡೆಯಲು ಅರ್ಹರು. ಅದಾಗ್ಯೂ ವಿದ್ಯಾರ್ಥಿಗಳಿಗೆ ಸುಪ್ರೀಂಕೋರ್ಟ್‌ನಲ್ಲಿ ನ್ಯಾಯ ಸಿಗುವ ನಂಬಿಕೆಯಿದೆ. ಅವರ ನಂಬಿಕೆ ಹುಸಿಯಾಗುವುದಿಲ್ಲ. ತಾಳ್ಮೆಯಿಂದ ಕಾದುನೋಡಿ ಎಂದು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com