
ನವದೆಹಲಿ: ಭಾರತದ ಉತ್ಪಾದನಾ ಬೆಳವಣಿಗೆಯಲ್ಲಿ ಚೀನಾದ ಪಾಲ್ಗೊಳ್ಳುವಿಕೆಗೆ ಎರಡು ದಿನಗಳ ಹಿಂದೆ ಕೇಂದ್ರ ಸರ್ಕಾರ ಮಂಡಿಸಿದ ಆರ್ಥಿಕ ಸಮೀಕ್ಷೆಯಲ್ಲಿ ಬಲವಾದ ಪ್ರೋತ್ಸಾಹ ನೀಡಿದ ನಂತರ, ಚೀನಾದಿಂದ ಹೂಡಿಕೆಯ ಮೇಲಿನ ನಿರ್ಬಂಧಗಳನ್ನು ಸಡಿಲಿಸಲು ಸರ್ಕಾರವು ಪರಿಗಣಿಸುತ್ತಿದೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿಗೆ ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಚೀನಾ ತಂತ್ರಜ್ಞರ ಮೇಲಿನ ವೀಸಾ ನಿರ್ಬಂಧಗಳನ್ನು ಮತ್ತು ಚೀನಾದ ಹೂಡಿಕೆಗಳ ಮೇಲೆ ನಿರ್ಬಂಧಗಳನ್ನು ಸಡಿಲಿಸಿ ಪ್ರಕ್ರಿಯೆ ಸರಳಗೊಳಿಸಲು ಚೀನಾ ವಿರೋಧಿ ನಿಲುವನ್ನು ಮೃದುಗೊಳಿಸಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಚೀನಾದಿಂದ ಹೂಡಿಕೆ ಮತ್ತು ಆಮದುಗಳ ಮೇಲಿನ ನಿರ್ಬಂಧಗಳನ್ನು ಸಡಿಲಿಸಲು ಪರಿಶೀಲಿಸಲು ಚರ್ಚೆಗಳು ನಡೆಯುತ್ತಿವೆ ಎಂದು ಉನ್ನತ ಸ್ಥಾನದಲ್ಲಿರುವ ಸರ್ಕಾರಿ ಮೂಲವು ದೃಢಪಡಿಸಿದೆ, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇನ್ನೂ ಅಂತಿಮ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ.
2020 ರಲ್ಲಿ ಲಡಾಖ್‌ನ ಗಾಲ್ವಾನ್ ನದಿ ಕಣಿವೆಯಲ್ಲಿ ಗಡಿ ಉದ್ವಿಗ್ನತೆಯ ಮಧ್ಯೆ ಚೀನಾದಿಂದ ಹೂಡಿಕೆಯನ್ನು ನಿರ್ಬಂಧಿಸುವ ಕಠಿಣ ಕ್ರಮವನ್ನು ಕೇಂದ್ರ ಸರ್ಕಾರ ಕೈಗೊಂಡಿತ್ತು. ದೇಶಕ್ಕೆ ಆಗಮಿಸುವ ಚೀನೀ ಪ್ರಜೆಗಳಿಗೆ ವೀಸಾಗಳನ್ನು ನಿರ್ಬಂಧಿಸಿ ಚೀನಾದ ಆಮದುಗಳ ಮೇಲೆ ಹೆಚ್ಚಿನ ಸುಂಕವನ್ನು ವಿಧಿಸಲಾಗಿತ್ತು.
ಸರ್ಕಾರದ ಈ ನಿರ್ಬಂಧಗಳಿಂದಾಗಿ ದೇಶದ ಬೃಹತ್ ಉದ್ಯಮಿಗಳಿಗೆ ಚೀನಾದಿಂದ ತಾಂತ್ರಿಕ ಉಪಕರಣಗಳನ್ನು ಸಂಗ್ರಹಿಸಲು ಮತ್ತು ಚೀನೀ ತಂತ್ರಜ್ಞರನ್ನು ಕರೆಸಲು ಸಾಧ್ಯವಾಗುತ್ತಿರಲಿಲ್ಲ. ಕಳೆದ 3-4 ವರ್ಷಗಳಿಂದ, ನಾವು ನಮ್ಮ ಸ್ವಂತ ಸಾಮರ್ಥ್ಯವನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಉದ್ಯಮಿಗಳು ಹೇಳುತ್ತಿದ್ದರು.
ಆದರೆ ಸರ್ಕಾರದ ಈ ನಿರ್ಬಂಧಗಳಿಂದಾಗಿ ದೊಡ್ಡ ದೊಡ್ಡ ಕೈಗಾರಿಕಾ ಕೇಂದ್ರಗಳ ಬೃಹತ್ ಯೋಜನೆಗಳು, ವಿಶೇಷವಾಗಿ ಹೈಟೆಕ್ ಯೋಜನೆಗಳು ಪೂರ್ಣಗೊಳ್ಳುವಲ್ಲಿ ಸವಾಲುಗಳನ್ನು ಎದುರಿಸುತ್ತಿವೆ. ಇದರಿಂದಾಗಿ ಕೆಲವು ಕಂಪನಿಗಳಿಗೆ ಹೂಡಿಕೆ ನಿಯಮಗಳನ್ನು ಸರಾಗಗೊಳಿಸುವ ಆಯ್ಕೆಗಳನ್ನು ಸರ್ಕಾರ ನೋಡುತ್ತಿದೆ.
ಕಳೆದ ಸೋಮವಾರ ಸಂಸತ್ತಿನಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷೆಯಲ್ಲಿ ಚೀನಾದ ಮೇಲಿನ ಸರ್ಕಾರದ ನಿಲುವಿನ ಮೃದುತ್ವ ಸ್ಪಷ್ಟವಾಗಿ ಗೋಚರವಾಗಿದೆ. ಭಾರತೀಯ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಜಾಗತಿಕ ಪೂರೈಕೆ ಸರಪಳಿಗೆ ಭಾರತವನ್ನು ಜೋಡಿಸಲು ಭಾರತವು ಚೀನಾದ ಪೂರೈಕೆ ಸರಪಳಿಗೆ ಸೇರಿಕೊಳ್ಳುವುದು ಅನಿವಾರ್ಯವಾಗಿದೆ. ಕೇವಲ ಆಮದುಗಳ ಮೇಲೆ ಅವಲಂಬಿತವಾಗುವುದೇ ಅಥವಾ ಭಾಗಶಃ ಚೀನೀ ಹೂಡಿಕೆಯ ಮೇಲೆ ಅವಲಂಬಿತವಾಗುವುದೇ ಎಂದು ಭಾರತ ಆಯ್ಕೆಮಾಡಿಕೊಳ್ಳಬೇಕಿದೆ. ಚೀನಾ ವಿರೋಧಿ ನೀತಿಯು ಭಾರತದ ಉತ್ಪಾದನಾ ವಲಯಕ್ಕೆ ಹಾನಿಕಾರಕವಾಗಿದೆ ಎಂಬ ಸುಳಿವನ್ನು ಈ ಬಾರಿ ಮಂಡನೆಯಾದ ಆರ್ಥಿಕ ಸಮೀಕ್ಷೆ ಹೇಳುತ್ತಿದೆ.
ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆಯನ್ನು ಪಡೆಯುವ ಸಂಸ್ಥೆಗಳಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ಚೀನಾದ ತಂತ್ರಜ್ಞರಿಗೆ ವೀಸಾ ನಿಯಮಗಳನ್ನು ಸರ್ಕಾರ ಸರಾಗಗೊಳಿಸಿದೆ ಮತ್ತು ಪಿಎಲ್‌ಐ ಅಲ್ಲದ ಕಂಪನಿಗಳಿಗೂ ಚೀನೀ ಕಾರ್ಮಿಕರಿಗೆ ವೀಸಾ ಪ್ರಕ್ರಿಯೆಯನ್ನು ಸುಗಮಗೊಳಿಸಲು ಸರ್ಕಾರ ಮುಂದಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
2024ನೇ ಆರ್ಥಿಕ ವರ್ಷದಲ್ಲಿ, ಚೀನಾ ಒಟ್ಟು ವ್ಯಾಪಾರದಲ್ಲಿ 118 ಶತಕೋಟಿ ಡಾಲರ್ ನೊಂದಿಗೆ ಭಾರತದ ಉನ್ನತ ವ್ಯಾಪಾರ ಪಾಲುದಾರ ದೇಶವಾಗಿದೆ.
ಚೀನೀ ಪ್ರೋತ್ಸಾಹಕಗಳು: ಉತ್ಪಾದನೆ-ಸಂಯೋಜಿತ ಪ್ರೋತ್ಸಾಹ ಯೋಜನೆಗಳು ಅನ್ವಯವಾಗುವ 14 ವಲಯಗಳಲ್ಲಿ ಚೀನಾದ ತಂತ್ರಜ್ಞರಿಗೆ ಹೆಚ್ಚಿನ ಬೇಡಿಕೆಯಿದೆ. ಸೌರಶಕ್ತಿ, ಡ್ರೋನ್‌ಗಳು ಮತ್ತು ಸೆಲ್ ಬ್ಯಾಟರಿಯನ್ನು ಒಳಗೊಂಡಿರುವ ಈ ವಲಯಗಳು ಪ್ರತಿಭೆಗಳ ಕೊರತೆಯನ್ನು ಎದುರಿಸುತ್ತಿವೆ.
ಕೌಶಲ್ಯ ಕೊರತೆ: ಭಾರತದಲ್ಲಿ ಹೆಚ್ಚಿನ ಹೈಟೆಕ್ ಉತ್ಪಾದನಾ ಘಟಕಗಳು ಚೀನೀ ನಿರ್ಮಿತ ಯಂತ್ರೋಪಕರಣಗಳನ್ನು ಬಳಸುತ್ತವೆ ಆದರೆ ನುರಿತ ತಂತ್ರಜ್ಞರನ್ನು ಹೊಂದಿಲ್ಲ. ವೀಸಾ ನಿಯಮ ಸಡಿಲಿಕೆಗಳು ಇದಕ್ಕೆ ಸಹಾಯ ಮಾಡಬಹುದೆಂದು ಉದ್ಯಮವು ನಂಬುತ್ತದೆ.
Advertisement