
ನವದೆಹಲಿ: ಲೋಕಸಭಾ ಚುನಾವಣೆ 2024 ರ ಫಲಿತಾಂಶ ಪ್ರಕಟವಾಗಿ ಎನ್ ಡಿಎ ಸರ್ಕಾರ ರಚನೆಗೆ ಮುಂದಾಗಿದೆ. ಈ ಮೂಲಕ ನರೇಂದ್ರ ಮೋದಿ ಪ್ರಧಾನಿಯಾಗಿ ಮತ್ತೊಮ್ಮೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಗೆ ವಿದೇಶದ ನಾಯಕರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಚೀನಾ ಸಹ ಎನ್ ಡಿಎ ಗೆಲುವಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಮೋದಿಗೆ ಅಭಿನಂದನೆ ಸಲ್ಲಿಸಿದೆ.
ಗಲ್ವಾನ್ ಘಟನೆ ನಡೆದ ಬಳಿಕ ಸ್ಥಗಿತಗೊಂಡಿರುವ ದ್ವಿಪಕ್ಷೀಯ ಸಂಬಂಧಗಳನ್ನು ಆರೋಗ್ಯಕರವಾಗಿ ಹಾಗೂ ಸ್ಥಿರವಾಗಿ ಉತ್ತಮಗೊಳಿಸಲು ಉಭಯ ರಾಷ್ಟ್ರಗಳು ಭವಿಷ್ಯದ ಕಡೆಗೆ ನೋಡಬೇಕು ಎಂದು ಚೀನಾ ಹೇಳಿದೆ. ಭಾರತದ ಸಾರ್ವತ್ರಿಕ ಚುನಾವಣೆಯ ಫಲಿತಾಂಶವನ್ನು ನಾವು ಗಮನಿಸಿದ್ದೇವೆ ಹಾಗೂ ಮೋದಿ ಹಾಗೂ ಎನ್ ಡಿಎ ಮೈತ್ರಿಕೂಟದ ಗೆಲುವಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರರಾದ ಮಾವೋ ನಿಂಗ್ ಹೇಳಿದ್ದಾರೆ.
"ಆರೋಗ್ಯಕರ ಮತ್ತು ಸ್ಥಿರವಾದ ಚೀನಾ-ಭಾರತ ಸಂಬಂಧವು ಎರಡೂ ದೇಶಗಳ ಹಿತಾಸಕ್ತಿಯಲ್ಲಿದೆ ಮತ್ತು ಈ ಪ್ರದೇಶದಲ್ಲಿ ಮತ್ತು ಅದರಾಚೆಗೆ ಶಾಂತಿ ಮತ್ತು ಅಭಿವೃದ್ಧಿಗೆ ಅನುಕೂಲಕರವಾಗಿದೆ" ಎಂದು ಮೋದಿ ಅವರ ಗೆಲುವಿನ ಬಗ್ಗೆ ಚೀನಾದ ಪ್ರತಿಕ್ರಿಯೆಯನ್ನು ಕೋರುವ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾವೋ ಹೇಳಿಕೆ ನೀಡಿದ್ದಾರೆ.
"ಎರಡೂ ದೇಶಗಳು ಮತ್ತು ಎರಡು ದೇಶದ ಜನತೆಯ ಮೂಲಭೂತ ಹಿತಾಸಕ್ತಿಗಳಲ್ಲಿ ಕಾರ್ಯನಿರ್ವಹಿಸಲು ಚೀನಾ ಭಾರತದೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ, ನಮ್ಮ ಸಂಬಂಧಗಳ ಒಟ್ಟಾರೆ ಹಿತಾಸಕ್ತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಭವಿಷ್ಯದತ್ತ ಗಮನಹರಿಸಿ ಆರೋಗ್ಯಕರ ಮತ್ತು ಸ್ಥಿರವಾದ ಹಾದಿಯಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಮುನ್ನಡೆಸುತ್ತದೆ" ಎಂದು ಚೀನಾ ಹೇಳಿದೆ.
Advertisement