
ಹರ್ಯಾಣ: ರಷ್ಯಾ ಪರ ಯುಕ್ರೇನ್ ನಲ್ಲಿ ಯುದ್ಧದಲ್ಲಿ ತೊಡಗಿದ್ದ ಹರ್ಯಾಣ ಮೂಲದ ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾರೆ. ವ್ಯಕ್ತಿಯ ಕುಟುಂಬ ಸದಸ್ಯರು ಈ ಮಾಹಿತಿ ಬಹಿರಂಗಪಡಿಸಿದ್ದು, ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಹರ್ಯಾಣ ಮೂಲದ 22 ವರ್ಷದ ವ್ಯಕ್ತಿಯ ಸಾವನ್ನು ಖಚಿತಪಡಿಸಿದೆ.
ಹರ್ಯಾಣದ ಕೈತಾಲ್ ಜಿಲ್ಲೆಯ ಮತೌರ್ ಗ್ರಾಮದ ನಿವಾಸಿಯಾಗಿದ್ದ ರವಿ ಮೌನ್ ಯುಕ್ರೇನ್ ನಲ್ಲಿ ಸಾವನ್ನಪ್ಪಿದ್ದಾರೆ ಎಂದು ಆತನ ಸಹೋದರ ಅಜಯ್ ಮೌನ್ ತಿಳಿಸಿದ್ದಾರೆ.
ಏಜೆಂಟ್ ಒಬ್ಬರ ಸಹಾಯದಿಂದ ಸಾರಿಗೆ ಸಂಬಂಧಿತ ಉದ್ಯೋಗಕ್ಕೆ ನೇಮಕಗೊಂಡ ಹಿನ್ನೆಲೆಯಲ್ಲಿ ಜ.13 ರಂದು ರವಿ ರಷ್ಯಾಗೆ ತೆರಳಿದ್ದರು ಆದರೆ ಆತನನ್ನು ರಷ್ಯಾ ಒತ್ತಾಯಪೂರ್ವಕವಾಗಿ ರಷ್ಯಾ ತನ್ನ ಸೇನೆಗೆ ಸೇರಿಸಿಕೊಳ್ಳಲಾಗಿತ್ತು ಎಂದು ಅಜಯ್ ಮೌನ್ ಹೇಳಿದ್ದಾರೆ.
ಜು.21 ರಂದು ನನ್ನ ಸಹೋದರನ ಬಗ್ಗೆ ನಾನು ಮಾಹಿತಿ ಕೇಳಿ ರಾಯಭಾರ ಕಚೇರಿಗೆ ಪತ್ರ ಬರೆದಿದ್ದೆ. ನಿಮ್ಮ ಸಹೋದರ ಸಾವನ್ನಪ್ಪಿದ್ದಾರೆ. ಮೃತದೇಹದ ಗುರುತು ಪತ್ತೆಗಾಗಿ ಡಿಎನ್ಎ ಪರೀಕ್ಷೆ ವರದಿ ಕಳಿಸಿಕೊಡುವಂತೆ ರಾಯಭಾರ ಕಚೇರಿ ಕುಟುಂಬ ಸದಸ್ಯರನ್ನು ಕೇಳಿದೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ರಷ್ಯಾಗೆ ಭೇಟಿ ನೀಡಿದ್ದಾಗ ರಷ್ಯಾ ಸೇನೆಯಲ್ಲಿ ಸೇರ್ಪಡೆಗೊಳಿಸಲಾಗಿರುವ ಭಾರತೀಯರನ್ನು ಬಿಡುಗಡೆ ಮಾಡುವಂತೆ ರಷ್ಯಾ ಅಧ್ಯಕ್ಷರ ಬಳಿ ಮನವಿ ಮಾಡಿದ್ದರು. ಇದಕ್ಕೆ ರಷ್ಯಾ ಸಹ ಒಪ್ಪಿಗೆ ಸೂಚಿಸಿತ್ತು.
ಈ ಬೆಳವಣಿಗೆಗಳ ಬೆನ್ನಲ್ಲೇ ಹರ್ಯಾಣ ಕುಟುಂಬ ತನ್ನ ಸದಸ್ಯನೋರ್ವ ರಷ್ಯಾ ಯುದ್ಧದಲ್ಲಿ ಸಾವನ್ನಪ್ಪಿದ್ದಾನೆ ಎಂದು ಹೇಳಿದೆ.
ಯುಕ್ರೇನಿಯನ್ ಪಡೆಗಳ ವಿರುದ್ಧ ಹೋರಾಡಲು ಮುಂಚೂಣಿಗೆ ಹೋಗಬೇಕು ಇಲ್ಲವೇ 10 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ರಷ್ಯಾದ ಸೈನ್ಯವು ತನ್ನ ಸಹೋದರನಿಗೆ ಬೆದರಿಕೆ ಹಾಕಿತ್ತು ಎಂದು ಅಜಯ್ ಮೌನ್ ಆರೋಪಿಸಿದ್ದು ಮಾ.12 ವರೆಗೆ ತಾವು ಆತನೊಂದಿಗೆ ಸಂಪರ್ಕದಲ್ಲಿದ್ದೆವು ಎಂದು ಹೇಳಿದ್ದಾರೆ.
ರವಿ ಮೌನ್ ಅವರನ್ನು ರಷ್ಯಾಗೆ ಕಳುಹಿಸುವುದಕ್ಕಾಗಿ ಒಂದು ಎಕರೆ ಭೂಮಿ ಮಾರಾಟ ಮಾಡಿ 11.50 ರೂಪಾಯಿ ಖರ್ಚು ಮಾಡಿದ್ದೆವು ಈಗ ಆತನ ಮೃತದೇಹ ತರುವುದಕ್ಕೂ ನಮ್ಮ ಬಳಿ ಹಣ ಇಲ್ಲ ಎಂದು ಕುಟುಂಬ ಸದಸ್ಯರು ಕಣ್ಣೀರು ಹಾಕಿದ್ದಾರೆ.
Advertisement