ಮಾಲ್ಡೀವ್ಸ್: ಇಸ್ರೇಲ್ ಪಾಸ್ಪೋರ್ಟ್ ಗೆ ಮಾಲ್ಡೀವ್ಸ್ ನಲ್ಲಿ ನಿರ್ಬಂಧ ವಿಧಿಸಲಾಗಿದ್ದು, ಈ ಪಾಸ್ಪೋರ್ಟ್ ಗಳನ್ನು ಹೊಂದಿದವರಿಗೆ ಮಾಲ್ಡೀವ್ಸ್ ಪ್ರವೇಶ ಸಾಧ್ಯವಾಗುವುದಿಲ್ಲ.
ಗಾಜಾದಲ್ಲಿ ಇಸ್ರೇಲ್- ಹಮಾಸ್ ನಡುವಿನ ಯುದ್ಧ ತೀವ್ರ ಸ್ವರೂಪ ಪಡೆಯುತ್ತಿದ್ದು, ಇಸ್ರೇಲ್ ವಿರುದ್ಧ ಹಲವೆಡೆ ತೀವ್ರ ಅಸಮಾಧಾನ ವ್ಯಕ್ತವಾಗತೊಡಗಿದೆ.
ಮಾಲ್ಡೀವ್ಸ್ ಅಧ್ಯಕ್ಷ ಡಾ. ಮೊಹಮ್ಮದ್ ಮುಯಿಜು, ಕ್ಯಾಬಿನೆಟ್ ನ ಶಿಫಾರಸನ್ನು ಆಧರಿಸಿ ಇಸ್ರೇಲ್ ಪಾಸ್ಪೊರ್ಟ್ ಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಅಧ್ಯಕ್ಷರ ಕಚೇರಿ ಹೇಳಿಕೆಯ ಮೂಲಕ ತಿಳಿದುಬಂದಿದೆ. ಆದರೆ ಈ ವರೆಗೂ ಅಧಿಕೃತ ವಿವರಗಳು ಲಭ್ಯವಾಗಿಲ್ಲ. ಇಸ್ರೇಲಿ ಪಾಸ್‌ಪೋರ್ಟ್ ಹೊಂದಿರುವವರು ದೇಶಕ್ಕೆ ಪ್ರವೇಶಿಸುವುದನ್ನು ತಡೆಯಲು ಅಗತ್ಯ ಕಾನೂನುಗಳನ್ನು ತಿದ್ದುಪಡಿ ಮಾಡಲು ಮತ್ತು ಈ ಪ್ರಯತ್ನಗಳ ಮೇಲ್ವಿಚಾರಣೆಗೆ ಉಪಸಮಿತಿಯನ್ನು ಸ್ಥಾಪಿಸಲು ಕ್ಯಾಬಿನೆಟ್ ನಿರ್ಧರಿಸಿದೆ ಎಂದು ಅಧ್ಯಕ್ಷರ ಕಚೇರಿ ತಿಳಿಸಿದೆ.
ಮುಯಿಝು ಪ್ಯಾಲೆಸ್ಟೀನಿಯನ್ನರನ್ನು ಬೆಂಬಲಿಸಲು ಮತ್ತು "ಪ್ಯಾಲೆಸ್ತೀನ್ನೊಂದಿಗೆ ಐಕಮತ್ಯದಲ್ಲಿ ಮಾಲ್ಡೀವಿಯನ್ಸ್" ಎಂಬ ರಾಷ್ಟ್ರವ್ಯಾಪಿ ರ್ಯಾಲಿಯನ್ನು ನಡೆಸಲು ರಾಷ್ಟ್ರೀಯ ನಿಧಿಸಂಗ್ರಹಣೆ ಅಭಿಯಾನವನ್ನು ಘೋಷಿಸಿದ್ದಾರೆ.
ಇಸ್ರೇಲಿ ಪಾಸ್‌ಪೋರ್ಟ್ ಹೊಂದಿರುವವರನ್ನು ನಿಷೇಧಿಸುವ ನಿರ್ಧಾರ ಗಾಜಾದಲ್ಲಿ ಇಸ್ರೇಲ್‌ನ ನಡೆಯುತ್ತಿರುವ ಯುದ್ಧದ ವಿರುದ್ಧದ ಪ್ರತಿಭಟನೆಯ ಸಂಕೇತವಾಗಿದ್ದು, ವಿರೋಧ ಪಕ್ಷಗಳು ಮತ್ತು ಸರ್ಕಾರದಲ್ಲಿರುವ ಅವರ ಮಿತ್ರಪಕ್ಷಗಳಿಂದ ಅಧ್ಯಕ್ಷ ಮುಯಿಝು ಅವರ ಮೇಲೆ ಹೆಚ್ಚುತ್ತಿರುವ ಒತ್ತಡದ ನಡುವೆ ಮಾಲ್ಡೀವ್ಸ್ ಸರ್ಕಾರದ ಮುಖ್ಯಸ್ಥರು ಈ ರೀತಿಯ ನಿರ್ಧಾರ ಕೈಗೊಂಡಿದ್ದಾರೆ.
ಒಂದು ವಾರದ ಹಿಂದೆ ರಾಫಾದಲ್ಲಿನ ಟೆಂಟ್ ಕ್ಯಾಂಪ್‌ನಲ್ಲಿ 45 ಜನರನ್ನು ಕೊಂದ ಇಸ್ರೇಲಿ ವೈಮಾನಿಕ ದಾಳಿಯನ್ನು ಮುಯಿಝು ಖಂಡಿಸಿದ ಕೆಲವೇ ದಿನಗಳ ನಂತರ ಈ ನಿಷೇಧದ ನಿರ್ಧಾರ ಪ್ರಕಟಿಸಿದ್ದಾರೆ.
ಈ ನಡುವೆ ನಿಷೇಧದ ನಂತರ, ಇಸ್ರೇಲಿ ವಿದೇಶಾಂಗ ಸಚಿವಾಲಯ ತನ್ನ ನಾಗರಿಕರಿಗೆ ಮಾಲ್ಡೀವ್ಸ್‌ಗೆ ಪ್ರಯಾಣಿಸದಂತೆ ಶಿಫಾರಸು ಮಾಡಿದೆ.
Advertisement