
ಸಿಂಗಾಪುರ: ಅರ್ಥಶಾಸ್ತ್ರಜ್ಞ ಲಾರೆನ್ಸ್ ವಾಂಗ್ ಅವರು ಸಿಂಗಾಪುರದ ನಾಲ್ಕನೇ ಪ್ರಧಾನ ಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. 72 ವರ್ಷದ ಲೀ ಹ್ಸಿಯೆನ್ ಲೂಂಗ್ ಎರಡು ದಶಕಗಳ ನಂತರ ಅಧಿಕಾರ ತ್ಯಜಿಸಿದ ನಂತರ ಅವರ ಉತ್ತರಾಧಿಕಾರಿಯಾಗಿ 51ವರ್ಷದ ವಾಂಗ್ ಅಧಿಕಾರ ವಹಿಸಿಕೊಂಡರು. ಇಬ್ಬರೂ ಆಡಳಿತಾರೂಢ ಪೀಪಲ್ಸ್ ಆಕ್ಷನ್ ಪಾರ್ಟಿ (PAP) ಗೆ ಸೇರಿದವರು. ಈ ಪಾರ್ಟಿ ಐದು ದಶಕಗಳಿಗೂ ಹೆಚ್ಚು ಕಾಲ ಸಿಂಗಾಪುರದ ಆರ್ಥಿಕ ಪ್ರಗತಿಯನ್ನು ನಡೆಸುತ್ತಿದೆ.
ಉಪ ಪ್ರಧಾನಿಯಾಗಿದ್ದ ವಾಂಗ್ ಅವರು ಪ್ರಧಾನಿ ಮತ್ತು ಹಣಕಾಸು ಸಚಿವರಾಗಿ ನಾಲ್ಕನೇ ತಲೆಮಾರಿನ PAP ಸರ್ಕಾರವನ್ನು ಮುನ್ನಡೆಸಲಿದ್ದಾರೆ. ಸಿಂಗಾಪುರದ ಅಧ್ಯಕ್ಷ ಥರ್ಮನ್ ಷಣ್ಮುಗರತ್ನಂ ವಾಂಗ್‌ಗೆ ಪ್ರಮಾಣ ವಚನ ಬೋಧಿಸಿದರು. ಸಚಿವ ಮಟ್ಟದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡದಿರಲು ನಿರಂತರತೆ, ಸ್ಥಿರತೆ ಮತ್ತು ಅಡಚಣೆಗಳನ್ನು ತಪ್ಪಿಸುವ ಅಗತ್ಯವನ್ನು ವಾಂಗ್ ಉಲ್ಲೇಖಿಸಿದ್ದಾರೆ.
"ಲೀ ಹ್ಸಿಯೆನ್ ಲೂಂಗ್ ಅವರಿಂದ ವಾಂಗ್‌ಗೆ ಅಧಿಕಾರ ವರ್ಗಾ ಆಗಿದ್ದು, ಇತರ ಮಂತ್ರಿಗಳು ತಮ್ಮ ಖಾತೆಗಳನ್ನು ಹಿಡಿದಿಟ್ಟುಕೊಂಡಿದ್ದಾರೆ. ಇದು ವಾಂಗ್ ಅವರ ನಿರ್ಧಾರ ತೆಗೆದುಕೊಳ್ಳುವಲ್ಲಿ ಸ್ಥಿರತೆಗೆ ಸಾಕ್ಷಿಯಾಗಿದೆ" ಎಂದು ಚಾನೆಲ್ ನ್ಯೂಸ್ ಏಷ್ಯಾ ವರದಿ ಹೇಳಿದೆ.
Advertisement