ಬ್ರಾಂಪ್ಟನ್: ಬ್ರಾಂಪ್ಟನ್‌ನ ಹಿಂದೂ ಸಭಾ ಮಂದಿರದಲ್ಲಿ ನಡೆದ ಪ್ರತಿಭಟನೆಯ ವೇಳೆ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಕೆನಡಾ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ ಮತ್ತು ನಂತರ ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಇತರ ಇಬ್ಬರ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಪೀಲ್ ಪ್ರಾದೇಶಿಕ ಪೊಲೀಸರ ಹೇಳಿಕೆಯ ಪ್ರಕಾರ, ಕ್ರಿಮಿನಲ್ ಇನ್ವೆಸ್ಟಿಗೇಶನ್ಸ್ ಬ್ಯೂರೋದ ತನಿಖಾಧಿಕಾರಿಗಳು ಬ್ರಾಂಪ್ಟನ್‌ನ ದೇವಸ್ಥಾನದಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಸೋಮವಾರ, ನವೆಂಬರ್ 4 ರಂದು, ಬ್ರಾಂಪ್ಟನ್‌ನ ದಿ ಗೋರ್ ರಸ್ತೆಯಲ್ಲಿರುವ ಮಂದಿರದಲ್ಲಿ ನಡೆದ ದೊಡ್ಡ ಪ್ರತಿಭಟನೆಯ ಬಗ್ಗೆ ಪೀಲ್ ಪ್ರಾದೇಶಿಕ ಪೊಲೀಸರು ಪ್ರತಿಕ್ರಿಯಿಸಿದ್ದು, ಎದುರಾಳಿ ಪಕ್ಷಗಳ ನಡುವೆ ಉದ್ವಿಗ್ನತೆ ಹೆಚ್ಚಾದಂತೆ, ಎಲ್ಲರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಾರ್ವಜನಿಕ ಆದೇಶ ಘಟಕವನ್ನು ನಿಯೋಜಿಸಲಾಯಿತು ಎಂದು ಹೇಳಿದ್ದಾರೆ.
“ಪ್ರತಿಭಟನೆ ಸಮಯದಲ್ಲಿ ಸಂಭವಿಸಿದ ಹಲವಾರು ಅಪರಾಧಗಳನ್ನು ಪೊಲೀಸರು ತನಿಖೆ ಮಾಡಲು ಪ್ರಾರಂಭಿಸಿದರು. ಅವುಗಳಲ್ಲಿ ಹಲವು ಘಟನೆಗಳು ವಿಡಿಯೋದಲ್ಲಿ ಸೆರೆಯಾಗಿವೆ. ಒಂದು ವಿಡಿಯೋದಲ್ಲಿ, ಒಬ್ಬ ವ್ಯಕ್ತಿಯು ಹಿಂಸಾಚಾರಕ್ಕೆ ಪ್ರಚೋದನೆ ನೀಡಲು ಧ್ವನಿವರ್ಧಕ ಬಳಸಿರುವದು ಸೆರೆಹಿಡಿಯಲಾಗಿದೆ. ಆತ ಸಿಖ್ ದೇವಾಲಯಗಳಿಗೆ ದಾಳಿ ಮಾಡಲು ಗುಂಪುಗಳಿಗೆ ಕರೆ ನೀಡಿದ್ದಾನೆ” ಎಂದು ಪೊಲೀಸರು ತಿಳಿಸಿದ್ದಾರೆ.
“ನವೆಂಬರ್ 6 ರಂದು ಟೊರೊಂಟೊದ 57 ವರ್ಷದ ರಣೇಂದ್ರ ಲಾಲ್ ಬ್ಯಾನರ್ಜಿ ಅವರನ್ನು ಬಂಧಿಸಲಾಯಿತು ಮತ್ತು ಅವರ ವಿರುದ್ಧ ಕೆನಡಾದ ಕ್ರಿಮಿನಲ್ ಕೋಡ್ ಸೆಕ್ಷನ್ 319 (1) ಗೆ ವ್ಯತಿರಿಕ್ತವಾಗಿ ದ್ವೇಷವನ್ನು ಸಾರ್ವಜನಿಕವಾಗಿ ಪ್ರಚೋದಿಸಿದ ಆರೋಪವನ್ನು ಹೊರಿಸಲಾಯಿತು. ಅವರನ್ನು ಷರತ್ತುಗಳೊಂದಿಗೆ ಬಿಡುಗಡೆ ಮಾಡಲಾಯಿತು. ಬಳಿಕ, ಬ್ರಾಂಪ್ಟನ್‌ನಲ್ಲಿರುವ ಒಂಟಾರಿಯೊ ಕೋರ್ಟ್ ಆಫ್ ಜಸ್ಟಿಸ್‌ಗೆ ಹಾಜರಾಗಬೇಕು” ಎಂದು ಅವರು ಹೇಳಿದ್ದಾರೆ.
Advertisement