ನವದೆಹಲಿ: ಜಾಗತಿಕ ಮಹಾಶಕ್ತಿಗಳ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಭಾರತ ದೇಶ ಅರ್ಹವಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ಶತಕೋಟಿಗೂ ಅಧಿಕ ಜನಸಂಖ್ಯೆ, ವಿಶ್ವದ ಎಲ್ಲಾ ದೇಶಗಳಿಗಿಂತ ಆರ್ಥಿಕವಾಗಿ ಅತ್ಯಂತ ವೇಗದ ಬೆಳವಣಿಗೆ, ಪ್ರಾಚೀನ ಸಂಸ್ಕೃತಿ ಮತ್ತು ಮುಂದಿನ ಬೆಳವಣಿಗೆಗೆ ಉತ್ತಮ ನಿರೀಕ್ಷೆಗಳು ಇವುಗಳನ್ನೆಲ್ಲಾ ನೋಡಿದರೆ ಭಾರತವನ್ನು ನಿಸ್ಸಂದೇಹವಾಗಿ ಮಹಾಶಕ್ತಿಗಳ ಪಟ್ಟಿಗೆ ಸೇರಿಸಬೇಕು ಎಂದು ಅವರು ಭಾರತದ ಸಮಗ್ರತೆಯನ್ನು ಉದ್ದೇಶಿಸಿ ಹೇಳಿದರು.
ಸೋಚಿಯಲ್ಲಿ ವಾಲ್ಡೈ ಚರ್ಚಾ ಕ್ಲಬ್‌ನ ಸಮಗ್ರ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಪುಟಿನ್, ಭಾರತ ಶ್ರೇಷ್ಠ ದೇಶ ಎಂದು ಕರೆದಿರುವ ಪುಟಿನ್, ನಮ್ಮ ದ್ವಿಪಕ್ಷೀಯ ಸಂಬಂಧಗಳು ಎಲ್ಲಾ ದಿಕ್ಕುಗಳಲ್ಲಿಯೂ ಅಭಿವೃದ್ಧಿ ಹೊಂದುತ್ತಿವೆ ಎಂದು ಹೇಳಿದರು.
ಅಧ್ಯಕ್ಷ ಪುಟಿನ್ ಅವರು ಕಳೆದ ಕೆಲವು ವರ್ಷಗಳಿಂದ ಭಾರತದ ಬಗ್ಗೆ ಅತ್ಯಂತ ಸಕಾರಾತ್ಮಕವಾಗಿದ್ದಾರೆ. ಅವರು ಎರಡು ಮಹಾನ್ ಶಕ್ತಿಗಳಾದ ಭಾರತ ಮತ್ತು ಚೀನಾದ ಬಗ್ಗೆ ವಿಶೇಷವಾಗಿ ಆರ್ಥಿಕ ಶಕ್ತಿ ಕೇಂದ್ರಗಳ ಬಗ್ಗೆ ನಿರಂತರವಾಗಿ ಮಾತನಾಡುತ್ತಿದ್ದಾರೆ. ಪ್ರಧಾನಿ ಮೋದಿಯವರ ಬಗ್ಗೆ ಉಲ್ಲೇಖಗಳನ್ನು ಮಾಡುತ್ತಾರೆ. ಅವರು ಭಾರತದ ಸ್ವತಂತ್ರ ವಿದೇಶಾಂಗ ನೀತಿಯ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ರಷ್ಯಾದ ಮಾಜಿ ರಾಯಭಾರಿ ಪಿಎಸ್ ರಾಘವನ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಪ್ರತಿನಿಧಿಗೆ ತಿಳಿಸಿದ್ದಾರೆ.
ಈ ಮಧ್ಯೆ, ಅಧ್ಯಕ್ಷ ಪುಟಿನ್ ಅವರು ರಷ್ಯಾ ಮತ್ತು ಭಾರತದ ನಡುವಿನ ಸಹಕಾರದ ಪ್ರಮಾಣವು ಬಹುಪಟ್ಟು ಹೆಚ್ಚುತ್ತಿದೆ ಎಂದು ಹೇಳಿದರು.
ಉಭಯ ರಾಷ್ಟ್ರಗಳ ನಡುವಿನ ರಕ್ಷಣಾ ಸಹಕಾರದ ಕುರಿತು ಮಾತನಾಡಿದ ಪುಟಿನ್, ಭಾರತೀಯ ಸಶಸ್ತ್ರ ಪಡೆಗಳೊಂದಿಗೆ ಎಷ್ಟು ರೀತಿಯ ರಷ್ಯಾದ ಮಿಲಿಟರಿ ಉಪಕರಣಗಳು ಸೇವೆಯಲ್ಲಿವೆ ಎಂಬುದನ್ನು ನೋಡಿ. ಈ ಸಂಬಂಧದಲ್ಲಿ ದೊಡ್ಡ ಮಟ್ಟದ ನಂಬಿಕೆ ಇದೆ. ನಾವು ನಮ್ಮ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಮಾರಾಟ ಮಾಡುವುದಿಲ್ಲ, ಅವುಗಳನ್ನು ಜಂಟಿಯಾಗಿ ವಿನ್ಯಾಸಗೊಳಿಸುತ್ತೇವೆ ಎಂದಿದ್ದಾರೆ.
ಅಧ್ಯಕ್ಷ ಪುಟಿನ್ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯನ್ನು ಉಲ್ಲೇಖಿಸಿದರು. ಅದನ್ನು ಗಾಳಿ, ಸಮುದ್ರ ಮತ್ತು ಭೂಮಿಯಲ್ಲಿ ಬಳಸಲು ತಯಾರಿಸಲಾಗುತ್ತಿದ್ದು, ಭಾರತದ ಭದ್ರತೆಯನ್ನು ಹೆಚ್ಚಿಸಿದೆ ಎಂದರು.
ಈ ಯೋಜನೆಗಳು ಉನ್ನತ ಮಟ್ಟದ ಪರಸ್ಪರ ನಂಬಿಕೆ ಮತ್ತು ಸಹಕಾರವನ್ನು ಪ್ರದರ್ಶಿಸುತ್ತವೆ. ಆದ್ದರಿಂದ ಇದನ್ನು ನಾವು ಮುಂದಿನ ಅವಧಿಯಲ್ಲಿ ತಯಾರಿಕೆ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.
Advertisement