ಒಟ್ಟಾವ: ಭಾರತ-ಕೆನಡಾ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಖಲಿಸ್ತಾನ್ ಪರ ಪ್ರತ್ಯೇಕತಾವಾದಿಗಳು ಕೆನಡಾದಲ್ಲಿ ಸಿಖ್ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಿದ್ದಾರೆ.
ಕಳೆದ ವಾರ ಒಟ್ಟಾವಾದ ಪಾರ್ಲಿಮೆಂಟ್ ಹಿಲ್‌ನಲ್ಲಿ ನಡೆದ ದೀಪಾವಳಿ ಕಾರ್ಯಕ್ರಮದಲ್ಲಿ ಟ್ರೂಡೊ ಭಾರತೀಯ ವಲಸೆಗಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಟ್ರುಡೋ ಈ ಹೇಳಿಕೆ ನೀಡಿದ್ದಾರೆ.
ವರದಿಗಳ ಪ್ರಕಾರ, ಟ್ರೂಡೊ, "ಕೆನಡಾದಲ್ಲಿ ಖಾಲಿಸ್ತಾನ್‌ಗೆ ಅನೇಕ ಬೆಂಬಲಿಗರಿದ್ದಾರೆ ಆದರೆ ಅವರು ಒಟ್ಟಾರೆಯಾಗಿ ಸಿಖ್ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ. ಹಿಂಸೆ ಅಥವಾ ಅಸಹಿಷ್ಣುತೆ ಅಥವಾ ಬೆದರಿಕೆಗೆ ಅವಕಾಶವಿಲ್ಲ, ನಾವು ಹಿಂಸೆಗೆ ಅವಕಾಶ ನೀಡುವುದಿಲ್ಲ," ಎಂದು ಟ್ರುಡೋ ಹೇಳಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ಟ್ರೂಡೊ ನವೆಂಬರ್ 4 ರಂದು ಈ ಹೇಳಿಕೆ ನೀಡಿದ್ದಾರೆ. ಖಲಿಸ್ತಾನ್ ಪರ ಅಂಶಗಳು ಮತ್ತು ಬ್ರಾಂಪ್ಟನ್‌ನ ಹಿಂದೂ ಸಭಾ ಮಂದಿರದಲ್ಲಿ ಕಾನ್ಸುಲರ್ ಶಿಬಿರದಲ್ಲಿದ್ದವರ ನಡುವಿನ ಘರ್ಷಣೆಯ ಒಂದು ದಿನದ ನಂತರ ಟ್ರುಡೋ ಹೇಳಿಕೆ ಬಂದಿದೆ. ಕೆನಡಾದಲ್ಲಿರುವ ಮೋದಿ ಬೆಂಬಲಿಗರು ಅಲ್ಲಿನ ಹಿಂದೂಗಳನ್ನು ಪ್ರತಿನಿಧಿಸುವುದಿಲ್ಲ ಎಂದು ಅವರು ಹೇಳಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ಈ ಬೆನ್ನಲ್ಲೇ ನವೆಂಬರ್ 6 ರಂದು, ಟ್ರೂಡೊ ಹೌಸ್ ಆಫ್ ಕಾಮನ್ಸ್‌ನಲ್ಲಿ ಹಿಂಸಾಚಾರವನ್ನು ಪ್ರಚೋದಿಸುವವರು ಕೆನಡಾದಲ್ಲಿ ಸಿಖ್ ಅಥವಾ ಹಿಂದೂಗಳನ್ನು "ಯಾವುದೇ ರೀತಿಯಲ್ಲಿ ಪ್ರತಿನಿಧಿಸುವುದಿಲ್ಲ" ಎಂದು ಹೇಳಿದ್ದಾರೆ.
ಜೂನ್, 2023 ರಲ್ಲಿ ಖಲಿಸ್ತಾನ್ ಪರ ಚಳವಳಿಯ ನಾಯಕ ನಿಜ್ಜರ್ ಹತ್ಯೆಯ ನಂತರ ಕೆನಡಾ ಮತ್ತು ಭಾರತದ ನಡುವಿನ ಸಂಬಂಧಗಳು ಹದಗೆಟ್ಟಿದೆ. ಮೂರು ತಿಂಗಳ ನಂತರ, ಟ್ರುಡೊ ಸಂಸತ್ತಿನಲ್ಲಿ ನಿಂತು ಭಾರತ ಸರ್ಕಾರದ ಏಜೆಂಟರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.
Advertisement