ಒಟ್ಟಾವಾ: ಮಹತ್ವದ ಬೆಳವಣಿಗೆಯಲ್ಲಿ ಕೆನಡಾದಲ್ಲಿ Khalistan ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಆಪ್ತ ಅರ್ಶ್ ಡಲ್ಲಾ ಅಲಿಯಾಸ್ ಅರ್ಶ್ ದೀಪ್ ಸಿಂಗ್ ನನ್ನು ಕೆನಡಾದಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಕಳೆದ ಅಕ್ಟೋಬರ್ 27 ಅಥವಾ 28 ರಂದು ಮಿಲ್ಟನ್ ಟೌನ್‌ನಲ್ಲಿ ನಡೆದ ಶೂಟೌಟ್‌ಗೆ ಸಂಬಂಧಿಸಿದಂತೆ ಕೆನಡಾದ ಪೊಲೀಸರು ಅರ್ಶ್ ಡಲ್ಲಾ ನನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಡಲ್ಲಾ ಬಂಧನದ ಬಗ್ಗೆ ಮಾಹಿತಿಯನ್ನು ಪಡೆಯುತ್ತಿರುವುದನ್ನು ಭಾರತೀಯ ಭದ್ರತಾ ಏಜೆನ್ಸಿಗಳ ಮೂಲಗಳು ಖಚಿತಪಡಿಸಿವೆ.
ಭಾರತೀಯ ಗುಪ್ತಚರ ಸಂಸ್ಥೆಗಳ ಪ್ರಕಾರ, ಭಾರತದಲ್ಲಿ ವಿವಿಧ ಅಪರಾಧ ಚಟುವಟಿಕೆಗಳಿಗೆ ಬೇಕಾಗಿರುವ ಅರ್ಶ್ ಡಲ್ಲಾ ತನ್ನ ಹೆಂಡತಿಯೊಂದಿಗೆ ಕೆನಡಾದಲ್ಲಿ ವಾಸಿಸುತ್ತಿದ್ದಾನೆ. ಕೆನಡಾದ ಕಾನೂನು ಜಾರಿ ಸಂಸ್ಥೆಗಳು, ವಿಶೇಷವಾಗಿ ಹಾಲ್ಟನ್ ಪ್ರಾದೇಶಿಕ ಪೊಲೀಸ್ ಸೇವೆ (HRPS), ಈ ಶೂಟೌಟ್ ಪ್ರಕರಣದ ತನಿಖೆ ನಡೆಸುತ್ತಿದೆ.
ಭಾರತೀಯ ಅಧಿಕಾರಿಗಳು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಮತ್ತು ಹೆಚ್ಚಿನ ವಿವರಗಳಿಗಾಗಿ ಕೆನಡಾದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಅರ್ಶ್ ಡಲ್ಲಾ ಖಲಿಸ್ತಾನಿ ಟೈಗರ್ ಫೋರ್ಸ್‌ನ ಹಂಗಾಮಿ ಮುಖ್ಯಸ್ಥನಾಗಿದ್ದ. ಈ ಹಿಂದೆ ಹತ್ಯೆಗೀಡಾದ ಮತ್ತೋರ್ವ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ನ ಆಪ್ತನಾಗಿದ್ದ ಮತ್ತು ಆತನ ಸಾವಿನ ಬಳಿಕ ಈತನೇ ಖಲಿಸ್ತಾನಿ ಹೋರಾಟದ ಉತ್ತರಾಧಿಕಾರಿಯಾಗಿ ಕಾಣಿಸಿಕೊಂಡಿದ್ದ.
ಈ ವರ್ಷದ ಸೆಪ್ಟೆಂಬರ್‌ನಲ್ಲಿ, ಪಂಜಾಬ್‌ನ ಮೋಗಾ ಜಿಲ್ಲೆಯ ತನ್ನ ನಿವಾಸದಲ್ಲಿ ಗುಂಡಿಕ್ಕಿ ಕೊಲ್ಲಲಾದ ಕಾಂಗ್ರೆಸ್ ನಾಯಕ ಬಲ್ಜಿಂದರ್ ಸಿಂಗ್ ಬಲ್ಲಿ ಅವರ ಹತ್ಯೆಯ ಹೊಣೆಯನ್ನು ಇದೇ ಡಲ್ಲಾ ವಹಿಸಿಕೊಂಡಿದ್ದ. ಈ ಕುರಿತು ಟ್ವೀಟ್ ಮಾಡಿದ್ದ ಈತ ತನ್ನ ಪೋಸ್ಟ್‌ನಲ್ಲಿ, ಬಲ್ಜಿಂದರ್ ಸಿಂಗ್ ಬಲ್ಲಿ ತನ್ನ ಭವಿಷ್ಯವನ್ನು ಹಾಳುಮಾಡಿದ್ದಾನೆ. ತನ್ನ ತಾಯಿಯ ಪೊಲೀಸ್ ಕಸ್ಟಡಿ ಹಿಂದೆ ಇದೇ ಕಾಂಗ್ರೆಸ್ ಮುಖಂಡನ ಕೈವಾಡವಿದೆ. ಇದು ಸೇಡು ತೀರಿಸಿಕೊಳ್ಳಲು ಪ್ರೇರೇಪಿಸಿತು ಎಂದು ಟ್ವೀಟ್ ಮಾಡಿದ್ದ.
ಅಂದಹಾಗೆ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಭಯೋತ್ಪಾದಕರ ಪಟ್ಟಿಯಲ್ಲಿರುವ ವಾಂಟೆಡ್ ವ್ಯಕ್ತಿ ಅರ್ಶ್ ಡಲ್ಲಾ ಕಳೆದ ಮೂರ್ನಾಲ್ಕು ವರ್ಷಗಳಿಂದ ಕೆನಡಾದಲ್ಲಿರುವ ತನ್ನ ನೆಲೆಯಿಂದ ಪಂಜಾಬ್‌ನಲ್ಲಿ ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಮೊಗಾದ ಸ್ಥಳೀಯರಾದ ಡಲ್ಲಾ ಅವರು ಪಂಜಾಬ್‌ನಲ್ಲಿ ಅನೇಕ ಉದ್ದೇಶಿತ ಹತ್ಯೆಗಳ ಆರೋಪಿಯಾಗಿದ್ದಾನೆ.
Advertisement