ನವದೆಹಲಿ: ಮಸೂದೆಯೊಂದರ ವಿಚಾರಕ್ಕೆ ಸಂಬಂಧಿಸಿದಂತೆ ನ್ಯೂಜಿಲೆಂಡ್ ಸಂಸತ್ ನಲ್ಲಿ ದೊಡ್ಡ ಹೈಡ್ರಾಮವೇ ನಡೆದಿದ್ದು, ಈ ಹಿಂದೆ ಸಾಂಪ್ರದಾಯಿಕ ಹಾಕಾ ನೃತ್ಯದ ಮೂಲಕ ಇಡೀ ಜಗತ್ತಿನ ಗಮನ ಸೆಳೆದಿದ್ದ ಆ ದೇಶದ ಕಿರಿಯ ಸಂಸದೆ ಇದೀ ಅದೇ ನೃತ್ಯದ ಮೂಲಕ ವಿವಾದಕ್ಕೀಡಾಗಿದ್ದಾರೆ.
ನ್ಯೂಜಿಲೆಂಡ್‌ನ ಅತ್ಯಂತ ಕಿರಿಯ ಸಂಸದೆ ಎಂದೇ ವ್ಯಾಪಕ ಸುದ್ದಿಯಾಗಿದ್ದ 22 ವರ್ಷ ವಯಸ್ಸಿನ ಸಂಸದೆ 'ಹಾನಾ ರಾಫಿಟಿ ಮೈಪಿ ಕ್ಲಾರ್ಕ್' ಈಗ ಮತ್ತೊಮ್ಮೆ ಜಾಗತಿಕಮಟ್ಟದಲ್ಲಿ ಸದ್ದು ಮಾಡಿದ್ದಾರೆ.
ನ್ಯೂಜಿಲೆಂಡ್ ಸಂಸತ್ತಿನಲ್ಲಿ 'ಮೌರಿ' ಸಂಪ್ರದಾಯದ 'ಹಾಕಾ' ನೃತ್ಯ ಮಾಡುವ ಮೂಲಕ ಮಸೂದೆಯೊಂದರ ಪ್ರಸ್ತಾಪಕ್ಕೆ ವಿರೋಧ ತೋರಿದ್ದು ಮಾತ್ರವಲ್ಲದೇ ಮಸೂದೆ ಪ್ರತಿಯಲ್ಲಿ ಸದನದಲ್ಲೇ ಹರಿದು ಹಾಕಿದ್ದಾರೆ. ಆರ್ಭಟಿಸಿದಂತೆ ಕಾಣುವ ಅವರ ಹಾಡು ಮತ್ತು ನೃತ್ಯದ ವಿಡಿಯೋ ಇದೀಗ ಭಾರೀ ವೈರಲ್ ಆಗಿದೆ.
ಏನಿದು ವಿವಾದ?
ಒಪ್ಪಂದಕ್ಕೆ ಸಂಬಂಧಿಸಿದ ಮಸೂದೆಯೊಂದು ವಿವಾದದ ಸ್ವರೂಪ ಪಡೆದಿದ್ದು, ಆ ಮಸೂದೆಯ ಪ್ರತಿಯನ್ನು ಹಾನಾ ಅವರು ಸಂಸತ್ತಿನಲ್ಲಿ ನಾಟಕೀಯ ಶೈಲಿಯಲ್ಲಿ ಹರಿದು ಹಾಕುವ ಜೊತೆಗೆ ಸಾಂಪ್ರದಾಯಿಕ ಹಾಕಾ ನೃತ್ಯದ ಮೂಲಕ ಪ್ರತಿಭಟನೆ ದಾಖಲಿಸಿದರು. ಹಾನಾ ಧ್ವನಿ ಎತ್ತುತ್ತಿದ್ದಂತೆ ಇತರೆ ಸಂಸದರೂ ಅವರೊಂದಿಗೆ ಜೊತೆಯಾದರು. ಹಾಗೇ ಪಬ್ಲಿಕ್ ಗ್ಯಾಲರಿಯಲ್ಲಿ ಕುಳಿತಿದ್ದ ಸಾರ್ವಜನಿಕರೂ ಎದ್ದು ನಿಂತು ಹಾಡಲು ಶುರು ಮಾಡಿದರು. ಈ ವಿಡಿಯೋ ನ್ಯೂಜಿಲೆಂಡ್ ಮಾತ್ರವಲ್ಲದೇ ಜಗತ್ತಿನಾದ್ಯಂತ ವ್ಯಾಪಕ ಗಮನ ಸೆಳೆದಿದೆ.
ಮಸೂದೆಯು ನ್ಯೂಜಿಲೆಂಡ್ ಸಮಾಜವನ್ನು ಇಬ್ಭಾಗ ಮಾಡುತ್ತದೆ ಹಾಗೂ ಮೌರಿ ಜನರ ಹಕ್ಕುಗಳನ್ನು ಕಸಿಯಲಿದೆ ಎಂದು ಆರೋಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಸತ್ತಿನ ಎದುರು ಪ್ರತಿಭಟನೆಗಳೂ ನಡೆಯುವ ಸಾಧ್ಯತೆ ಇದೆ. ಆದರೆ, ಈಗ ನ್ಯೂಜಿಲೆಂಡ್‌ನ ಕಿರಿಯ ಸಂಸದೆಯು ಪ್ರತಿಭಟಿಸಿರುವ ರೀತಿಯು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಂಸತ್ ಗ್ರೂಪ್ ಡ್ಯಾನ್ಸ್ ಮಾಡೋಕೆ ಅಲ್ಲ ಎಂದು ಕೆಲವು ಮಂದಿ ಅಭಿಪ್ರಾಯ ಪಟ್ಟರೆ, ಇನ್ನೂ ಕೆಲವು ಜನರು ಈ ಕಲಾತ್ಮಕ ಪ್ರತಿಭಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಕ್ರೋಶಗೊಂಡ ಸಭಾಪತಿ, ಸಂಸದೆ ಅಮಾನತು
ಹಾಕಾ ನೃತ್ಯ ಇಡೀ ಸಂಸತ್ತಿನಲ್ಲಿ ಸದ್ದು ಮಾಡುತ್ತಿದ್ದಂತೆ ಗ್ಯಾಲರಿಯಲ್ಲಿದ್ದ ಜನರನ್ನು ಅಧಿಕಾರಿಗಳು ಹೊರಗೆ ದೂಡಿದರು. ಸಭಾಪತಿಗಳೇ ಸಂಸದೆ ಹಾನಾ ರಾಫಿಟಿ ಮೈಪಿ ಕ್ಲಾರ್ಕ್ ಅವರನ್ನು ಅಮಾನತು ಮಾಡಿದರು. ಈ ಗಲಾಟೆಯ ನಡುವೆಯೂ ಸಂಸತ್ತಿನಲ್ಲಿ ಮಸೂದೆಯ ಮೊದಲ ಮಂಡನೆ ಆಯಿತು. ಮತ್ತೊಂದು ಸುತ್ತು ಮತಕ್ಕೆ ಹಾಕುವುದಕ್ಕೂ ಮುನ್ನ ಮಸೂದೆಯ ಬಗ್ಗೆ ಸಾರ್ವಜನಿಕರ ಅಭಿಪ್ರಾಯಕ್ಕೆ ಕಾದಿರಿಸಲಾಗಿದೆ.
ಇದೇ ಮೊದಲಲ್ಲ
ನ್ಯೂಜಿಲೆಂಡ್‌ನ ಅತ್ಯಂತ ಕಿರಿಯ ಸಂಸದೆ ಎಂದೇ ಖ್ಯಾತಿ ಗಳಿಸಿರುವ 'ಹಾನಾ ರಾಫಿಟಿ ಮೈಪಿ ಕ್ಲಾರ್ಕ್' ತಮ್ಮ ಸಾಂಪ್ರದಾಯಿಕ ನೃತ್ಯದ ಮೂಲಕ ಗಮನ ಸೆಳೆಯುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಸಂಸದೆ ಹಾನಾ ರಾಫಿಟಿ ತಮ್ಮ ಚೊಚ್ಚಲ ಭಾಷಣದಲ್ಲಿ 'ಹಾಕಾ' ಪ್ರದರ್ಶನ ಮಾಡಿದ್ದರು.
Advertisement