ಪೇಶಾವರ: ವಾಯುವ್ಯ ಪಾಕಿಸ್ತಾನದಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಮೂರು ವಾಹನಗಳ ಮೇಲೆ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಕನಿಷ್ಠ 50 ಮಂದಿ ಸಾವನ್ನಪ್ಪಿದ್ದಾರೆ ಮತ್ತು 14 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ಗಡಿಯಲ್ಲಿರುವ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಕುರ್ರಂ ಜಿಲ್ಲೆಯಲ್ಲಿ ಉಗ್ರರು ವಾಹನಗಳ ಮೇಲೆ ಮನಬಂದಂತೆ ಗುಂಡಿ ದಾಳಿ ನಡೆಸಿದ್ದಾರೆ.
ಈ ವಾಹನಗಳು ಪರಾಚಿನಾರ್‌ನಿಂದ ಖೈಬರ್ ಪಖ್ತುಂಖ್ವಾದ ರಾಜಧಾನಿ ಪೇಶಾವರಕ್ಕೆ ಬೆಂಗಾವಲು ಪಡೆಯಲ್ಲಿ ಪ್ರಯಾಣಿಸುತ್ತಿದ್ದಾಗ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದಾಳಿಯಲ್ಲಿ ಆರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದಂತೆ 50 ಮಂದಿ ಮೃತಪಟ್ಟಿದ್ದಾರೆ ಮತ್ತು ಇತರ 14 ಜನ ಗಾಯಗೊಂಡಿದ್ದಾರೆ ಎಂದು ಜಿಲ್ಲಾ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಡಜನ್ಗಟ್ಟಲೆ ಜನರನ್ನು ಬಲಿತೆಗೆದುಕೊಂಡಿರುವ ಪಂಥೀಯ ಹಿಂಸಾಚಾರಕ್ಕೂ ಈ ದಾಳಿಗೂ ನಂಟು ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
"ಸರಿಸುಮಾರು 10 ದಾಳಿಕೋರರು ರಸ್ತೆಯ ಎರಡೂ ಬದಿಗಳಿಂದ ಮನಬಂದಂತೆ ವಾಹನಗಳ ಮೇಲೆ ಗುಂಡು ಹಾರಿಸಿದ್ದಾರೆ" ಎಂದು ಅವರು ತಿಳಿಸಿದ್ದಾರೆ.
Advertisement